ಮತೀಯ ಶಕ್ತಿಗಳಿಂದ ಭಾರತದ ಪ್ರಜಾಪ್ರಭುತ್ವ ಅಸ್ಥಿರಕ್ಕೆ ಯತ್ನ: ಅಂಬೇಡ್ಕರ ಪ್ರತಿಮೆ ಅನಾವರಣ ಸಮಾರಂಭದಲ್ಲಿ ಸಚಿವ ಮಹದೇವಪ್ಪ ಆತಂಕ

Sectarian forces are trying to destabilize India's democracy: Minister Mahadevappa is worried at th

ಮತೀಯ ಶಕ್ತಿಗಳಿಂದ ಭಾರತದ ಪ್ರಜಾಪ್ರಭುತ್ವ ಅಸ್ಥಿರಕ್ಕೆ ಯತ್ನ: ಅಂಬೇಡ್ಕರ ಪ್ರತಿಮೆ ಅನಾವರಣ ಸಮಾರಂಭದಲ್ಲಿ ಸಚಿವ ಮಹದೇವಪ್ಪ ಆತಂಕ  

ಹುಕ್ಕೇರಿ 25: ದೇಶದಲ್ಲಿ ಜಾತಿಯತೆ, ಧರ್ಮಾಂದತೆ, ಸ್ವಾತಂತ್ರ್ಯ ಹರಣ ನಡೆಯುತ್ತಿದ್ದು ಮತೀಯ ಶಕ್ತಿಗಳು ಭಾರತದ ಪ್ರಜಾಪ್ರಭುತ್ವ ಅಸ್ಥಿರಗೊಳಿಸಲು ಯತ್ನಿಸುತ್ತಿವೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಆತಂಕ ವ್ಯಕ್ತಪಡಿಸಿದರು. ಪಟ್ಟಣದಲ್ಲಿ ಪ್ರತಿಷ್ಠಾಪಿಸಿದ ಭಾರತದ ಭಾಗ್ಯವಿದಾತ ಡಾ.ಬಿ.ಆರ್‌.ಅಂಬೇಡ್ಕರ ಪ್ರತಿಮೆಯನ್ನು ಶನಿವಾರ ಅನಾವರಣ ಸಮಾರಂಭದಲ್ಲಿ ಮಾತನಾಡಿದ ಅವರು, ಕೋಮುವಾದ ಹರಡುವ ಮೂಲಕ ಅಂಬೇಡ್ಕರರ ಸಮಸಮಾಜ ಪರಿಕಲ್ಪನೆ ಮತ್ತು ಸಂವಿಧಾನದ ಆಶಯಗಳನ್ನು ದಮನಗೊಳಿಸಲಾಗುತ್ತಿದೆ ಕಳವಳ ವ್ಯಕ್ತಪಡಿಸಿದರು. ಸಂವಿಧಾನ ನಮ್ಮೆಲ್ಲರ ಬದುಕಿನ ಬದಲಾವಣೆಗೆ ಬೆಳಕಾಗಿದ್ದು ಅದನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಹೊಣೆಗಾರಿಕೆ ಮತ್ತು ಜವಾಬ್ದಾರಿಯಾಗಿದೆ. ದಲಿತ ಸಮುದಾಯ ಪ್ರಸ್ತುತ ಸನ್ನಿವೇಶದಲ್ಲಿ ಸಕ್ರೀಯ ಪಾತ್ರ ನಿರ್ವಹಿಸಬೇಕು. ಇಲ್ಲದಿದ್ದಲ್ಲಿ ದೇಶ ಮತ್ತು ಸಂವಿಧಾನಕ್ಕೆ ಗಂಡಾಂತರ ಕಾದಿದೆ. ಸಮಾಜ ಪರಿವರ್ತನೆಗೆ ಚಳವಳಿ ಅತಿ ಅಗತ್ಯವಾಗಿದೆ. ಶೋಷಿತ ಸಮುದಾಯಗಳಿಗೆ ಅಂಬೇಡ್ಕರರು ಪೂಜಾ ವಸ್ತುವಲ್ಲ. ಅವರೊಬ್ಬರು ಪ್ರೇರಣಾ ಶಕ್ತಿ ಎಂದು ಅವರು ಹೇಳಿದರು. ಪ್ರತಿಮೆ ಅನಾವರಣಗೊಳಿಸಿದ ದಿ.ಬುದ್ದಿಷ್ಟ ಸೊಸೈಟಿ ಆಫ್ ಇಂಡಿಯಾ ಅಧ್ಯಕ್ಷರೂ ಆದ ಅಂಬೇಡ್ಕರರ ಮರಿಮೊಮ್ಮಗ ರಾಜರತ್ನ ಅಂಬೇಡ್ಕರ ಮಾತನಾಡಿ, ಪ್ರಧಾನಿ ನರೋಂದ್ರ ಮೋದಿ ಸದಾಕಾಲ ವಿದೇಶ ಪ್ರವಾಸದಲ್ಲಿದ್ದರೆ, ಗೃಹ ಸಚಿವ ಅಮೀತ ಶಾ, ನಾಲಿಗೆ ಹಿಡಿತವಿಲ್ಲದೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಕೇಂದ್ರ ಬಿಜೆಪಿ ಸರ್ಕಾರದ ಜನವಿರೋಧಿ ನೀತಿಯಿಂದ ಜನ ಭ್ರಮನಿರಶನಗೊಂಡಿದ್ದಾರೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ಎಸ್ಸಿಎಸ್ಟಿ ಸಮುದಾಯದ ಮೂಢನಂಬಿಕೆಯಿಂದ ಹೊರಬರಬೇಕು. ಅನಿಷ್ಠ ಪದ್ಧತಿ ಆಚರಣೆ ನಿಲ್ಲಿಸಬೇಕು. ಸಂವಿಧಾನ ರಕ್ಷಿಸುವ ಕಾರ‌್ಯದಲ್ಲಿ ತೊಡಗಿಸಿಕೊಳ್ಳಬೇಕು. ವಿಶ್ವದಲ್ಲಿಯೇ ಅತಿ ಹೆಚ್ಚಿನ ಪ್ರತಿಮೆಗಳನ್ನು ಹೊಂದಿರುವ ಶ್ರೇಯಸ್ಸು ಅಂಬೇಡ್ಕರರಿಗೆ ಸಲ್ಲುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಮಾಜಿ ಸಂಸದ ರಮೇಶ ಕತ್ತಿ ಮಾತನಾಡಿ, ಅಂಬೇಡ್ಕರರು ಕೇವಲ ದಲಿತರಿಗೆ ಸೀಮಿತರಲ್ಲ. ಅವರ ಆದರ್ಶಗಳನ್ನುಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ಯುವಪೀಳಿಗೆಗೆ ಮಹಾತ್ಮರ ಪ್ರತಿಮೆಗಳು ದಾರೀದೀಪವಾಗಿವೆ ಎಂದರು. ಗೂಗವಾಡ ಧಮ್ಮ ಭೂಮಿಯ ಬಂತೆ ಬಿಕ್ಕು ಜ್ಞಾನಜ್ಯೋತಿ ಸಾನಿಧ್ಯ ವಹಿಸಿದ್ದರು. ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಮಾತನಾಡಿದರು. ಮುಖಂಡ ಸುರೇಶ ತಳವಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ತಹಶೀಲ್ದಾರ ಮಂಜುಳಾ ನಾಯಕ, ತಾಪಂ ಇಒ ಟಿ.ಆರ್‌.ಮಲ್ಲಾಡದ, ಪುರಸಭೆ ಅಧ್ಯಕ್ಷ ಇಮ್ರಾನ್ ಮೋಮಿನ್, ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಂತೇಶ ತಳವಾರ, ಮುಖಂಡರಾದ ಸುಭಾಶ ನಾಟಿಕರ, ಮಹಾವೀರ ನಿಲಜಗಿ, ಉದಯ ಹುಕ್ಕೇರಿ, ಮಲ್ಲಿಕಾರ್ಜುನ ರಾಶಿಂಗೆ, ಬಸವರಾಜ ಕೋಳಿ, ದೀಲೀಪ ಹೊಸಮನಿ, ಕಿರಣ ರಜಪೂತ, ರಿಷಬ್ ಪಾಟೀಲ, ಮೌನೇಶ ಪೋತದಾರ, ರಮೇಶ ಹುಂಜಿ, ಅಕ್ಷಯ ವೀರಮುಖ, ಕರೆಪ್ಪ ಗುಡೆನ್ನವರ, ಸದಾಶಿವ ಕರೆಪ್ಪಗೋಳ, ಪ್ರಮೋದ ಕೂಗೆ, ರಾಜೇಂದ್ರ ಮೋಶಿ, ಅಪ್ಪಣ್ಣಾ ಖಾತೇದಾರ, ಬಿ.ಕೆ.ಸದಾಶಿವ, ಕುಮಾರ ತಳವಾರ ಮತ್ತಿತರರು ಉಪಸ್ಥಿತರಿದ್ದರು. 

  --- ಬಾಕ್ಸ್‌ --- ಗಮನ ಸೆಳೆದ ಮೆರವಣಿಗೆ ಅಂಬೇಡ್ಕರ ಪ್ರತಿಮೆ ಅನಾವರಣ ನಿಮಿತ್ತ ಪಟ್ಟಣದ ಅಡವಿಸಿದ್ದೇಶ್ವರ ಮಠದಿಂದ ಕೋರ್ಟ್‌ ಸರ್ಕಲ್‌ವರೆಗೆ ಭವ್ಯ ಮೆರವಣಿಗೆ ನಡೆಯಿತು. ರಾಜರತ್ನ ಅಂಬೇಡ್ಕರ ಅವರನ್ನು ರಥದಲ್ಲಿ ಕರೆತರಲಾಯಿತು. ಮೆರವಣಿಗೆಯಲ್ಲಿ ವಿವಿಧ ರೂಪಕಗಳು ಮತ್ತು ಕಲಾ ತಂಡಗಳು ಗಮನ ಸೆಳೆದವು. ಪಟ್ಟಣದ ಎಲ್ಲ ದಿಕ್ಕುಗಳಲ್ಲಿ ನೀಲಿಮಯ ವಾತಾವರಣ ನೆಲೆಯೂರಿತ್ತು.  ಫೋಟೊ ಶೀರ್ಷಿಕೆ : 25ಎಚ್‌ಯುಕೆ-1 ಹುಕ್ಕೇರಿಯಲ್ಲಿ ಪ್ರತಿಷ್ಠಾಪಿಸಿದ ಅಂಬೇಡ್ಕರರ ಪ್ರತಿಮೆಯನ್ನು ಅವರ ಮರಿಮೊಮ್ಮಗ ರಾಜರತ್ನ ಅಂಬೇಡ್ಕರ ಅವರು ಶನಿವಾರ ಅನಾವರಣಗೊಳಿಸಿದರು.