ಜುಗೂಳದಲ್ಲಿ ಸವಳು-ಜವಳು ಯೋಜನೆಗೆ ಚಾಲನೆ ರೈತ ಬೆಳೆದರೇ ದೇಶ ಸಮೃದ್ಧಿ: ಶಾಸಕ ರಾಜು ಕಾಗೆ
ಕಾಗವಾಡ 25 : ರೈತರು ಚೆನ್ನಾಗಿ ಬೆಳೆ ಬೆಳೆದಾಗ ಮಾತ್ರ ಆ ದೇಶದ ಜನರು ಸುಖವಾಗಿರಲು ಸಾಧ್ಯವಾಗುತ್ತದೆ. ಉತ್ತಮ ಬೆಳೆಗಳನ್ನು ಬೆಳೆಯಲು ಸರ್ಕಾರ ಅವರಿಗಾಗಿ ಅನೇಕ ಯೋಜನೆಗಳನ್ನು ರೂಪಿಸಿದ್ದು ಬಂಜರು ಜಮೀನುಗಳಾಗಿರುವ ರೈತರ ಭೂಮಿಯನ್ನು ಸವಳು-ಜವಳು ಯೋಜನೆಯಿಂದ ಫಲವತ್ತಾಗಿಸುವ ಪ್ರಯತ್ನ ಸರ್ಕಾರದಿಂದ ನಡೆಸಲಾಗುತ್ತಿದ್ದು ರೈತರು ಇದರ ಲಾಭ ಪಡೆದುಕೊಳ್ಳಬೇಕೆಂದು ಶಾಸಕ ರಾಜು ಕಾಗೆ ಹೇಳಿದರು.ರವಿವಾರ ದಿ. 24 ರಂದು ತಾಲೂಕಿನ ಜುಗೂಳ ಗ್ರಾಮದಲ್ಲಿ ಕೃಷಿ ಇಲಾಖೆಯ ವತಿಯಿಂದ 288 ಎಕರೆ ಜಮೀನುಗಳನ್ನು ರೂ. 1.44 ಕೋಟಿ ಅನುದಾದಲ್ಲಿ ಸವಳು ಮುಕ್ತ ಮಾಡುವ ಸವಳು-ಜವಳು ಯೋಜನೆಗೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಬೆಳಗಾವಿ ಜಿಲ್ಲೆಯ ಕೃಷ್ಣಾ ನದಿ ತೀರದ ತಾಲೂಕಿನಲ್ಲಿ ರೈತರ ಜಮೀನುಗಳು ಹೆಚ್ಚಿನ ನೀರಿನಿಂದಾಗಿ ಸವುಳು ಪ್ರದೇಶಗಳಾಗಿ, ಬೆಳೆ ಬಾರದಂತಾಗಿ ಬಂಜರಾಗಿವೆ. ಈ ಯೋಜನೆಯಿಂದ ಬಂಜರು ಜಮೀನುಗಳನ್ನು ಫಲವತ್ತಾಗಿಸಿ, ಎಕರೆಗೆ 30-40 ಟನ್ ಕಬ್ಬು ಬೆಳೆಯನ್ನು ಎಕರೆಗೆ 60-70 ಟನ್ ವರೆಗೆ ಹೆಚ್ಚಿಸಬಹುದಾಗಿದೆ. ಸರ್ಕಾರದ ವಿಶೇಷ ಗಮನ ಸೆಳೆದು, ಈ ಅನುದಾನವನ್ನು ಕ್ಷೇತ್ರಕ್ಕೆ ತರಲಾಗಿದ್ದು, ರೈತರು ಇದರ ಲಾಭ ಪಡೆದು, ಉತ್ತಮ ಬೆಳೆಗಳನ್ನು ಪಡೆಯುವ ಮೂಲಕ ಅಭಿವೃದ್ಧಿ ಹೊಂದಬೇಕೆಂದರು.ಚಿಕ್ಕೋಡಿ ಜಿಲ್ಲಾ ಕೃಷಿ ಇಲಾಖೆಯ ನಿರ್ದೇಶಕ ಎಚ್.ಡಿ. ಕೋಳೆಕರ ಮಾತನಾಡಿ, ಶಾಸಕ ರಾಜು ಕಾಗೆ ಅವರ ಪ್ರಯತ್ನದಿಂದ ಸವಳು-ಜವಳು ಯೋಜನೆಯಲ್ಲಿ ಜುಗೂಳ ಮತ್ತು ಕಾಗವಾಡ ಗ್ರಾಮದಲ್ಲಿ 288 ಎಕರೆ ಸವಳು ಭೂಮಿಯನ್ನು ಸವಳು-ಜವಳು ಯೋಜನೆಯ ಮುಖಾಂತರ ಅಭಿವೃದ್ಧಿ ಪಡಿಸಲಾಗುತ್ತಿದ್ದು ಇದರಿಂದ ಒಟ್ಟು 273 ರೈತರಿಗೆ ಅನಕೂಲವಾಗಲಿದೆ ಎಂದರು.ಈ ಸಮಯದಲ್ಲಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಿಂಗನಗೌಡಾ ಬಿರಾದರ, ಮುಖಂಡರಾದ ಅಣ್ಣಾಸಾಬ ಪಾಟೀಲ, ಕಾಕಾಸಾಬ ಪಾಟೀಲ, ಉಮೇಶ ಪಾಟೀಲ, ಸೌರಭ ಪಾಟೀಲ, ಶಾಂತಿನಾಥ ಕರವ, ಅನೀಲ ಕಡೋಲೆ, ರಾಜು ಕಡೋಲೆ, ಸುರೇಶ ಪಾಟೀಲ, ಗುತ್ತಿಗೆದಾರರಾದ ಬಸವರಾಜ ಮಗದುಮ್ಮ, ಪ್ರವೀಣ ಬಜಂತ್ರಿ, ರಾಜು ಮರಡಿ, ಸಿದ್ಧಾರೂಢ ನ್ಯಾಮಗೌಡ, ಸೋಹಿತ ಪಾಟೀಲ, ನಿಖಿಲ ಬಜಂತ್ರಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು. ಜುಗೂಳ ಗ್ರಾಮದಲ್ಲಿ ಸವಳು-ಜವಳು ಯೋಜನೆಗೆ ಶಾಸಕ ರಾಜು ಕಾಗೆ ಚಾಲನೆ ನೀಡುತ್ತಿರುವುದು. ಅಣ್ಣಾಸಾಬ ಪಾಟೀಲ, ಕಾಕಾಸಾಬ ಪಾಟೀಲ, ಸೌರಭ ಪಾಟೀಲ ಇದ್ದರು.