ಜಲಾನಯನ ಯಾತ್ರೆಗೆ ಶಶಿಕಲಾ ಜೊಲ್ಲೆ ಚಾಲನೆ
ಚಿಕ್ಕೋಡಿ 10: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ರೈತರ ಪರ ಕಾಳಜಿಯಿಂದಾಗಿ ಕೃಷಿ ಸಿಂಚನ ಯೋಜನೆಯಡಿಯಲ್ಲಿ ರೈತರ ನೀರಾವರಿ ಕ್ರಾಂತಿಯಾಗುತ್ತಿದೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು. ನಿಪ್ಪಾಣಿ ಮತಕ್ಷೇತ್ರದ ಶೆಂಡೂರ ಗ್ರಾಮದಲ್ಲಿ ಕೃಷಿ ಇಲಾಖೆ ಹಾಗೂ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಕಿರು ಜಲಾನಯನ ಅಭಿವೃದ್ದಿ ಘಟಕ 2.0 ವತಿಯಿಂದ 4.50 ಕೋಟಿ ರೂ. ಮೊತ್ತದಲ್ಲಿ ಜಲಾನಯನ ಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು. ರೈತರ ಆದಾಯ ಹೆಚ್ಚಿಸುವ ಸದುದ್ದೇಶದಿಂದ ಕೇಂದ್ರ ಸರ್ಕಾರವು 1620 ಹೆಕ್ಟೇರ್ (4050 ಎಕರೆ) ರೈತರ ಜಮೀನುಗಳಿಗೆ ನೀರಿನ ಅನುಕೂಲವಾಗುವುದು. ಇದರಲ್ಲಿ 250 ಎಕರೆ ಬದು ನಿರ್ಮಾಣ, 12 ಚೆಕ್ ಡ್ಯಾಂ,40 ಎಕರೆ ಸಸಿಗಳ ನಾಟಿ,ತುಂತುರು ನೀರಾವರಿ,18 ಸ್ವ ಸಹಾಯ ಗುಂಪುಗಳಿಗೆ ತಲಾ 50,000, 15 ರೈತರಿಗೆ ಮೇವು ಕಟಾವು ಯಂತ್ರ,175 ರೈತರಿಗೆ ಆಕಳು ಮ್ಯಾಟ,150 ರೈತರಿಗೆ ಸೆಣಬು ಬೀಜ ವಿತರಣೆ ರಚನೆ ಹಲವಾರು ಯೋಜನೆಗಳನ್ನು ನಿರ್ಮಿಸಿ ರೈತರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದರು. ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವಗೌಡ ಪಾಟೀಲ, ಸಹಾಯಕ ನಿರ್ದೇಶಕ ಎಚ್.ಡಿ.ಕೋಳಿಕರ, ಡಿ.ಎಚ್.ಚವ್ಹಾಣ, ಉಪನಿರ್ದೇಶಕ ದೀಪಕ ಕೌಜಲಗಿ, ಗ್ರಾಮ ಪಂಚಾಯತ್ ಅಧ್ಯಕ್ಷ ಸೌ.ಉಜ್ವಲಾ ಕಾಂಬಳೆ, ಸದಸ್ಯ ಸೌ.ಅನೀತಾ ಸುತಾರ, ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಎಂ.ಪಿ.ಪಾಟೀಲ, ನಿರ್ದೇಶಕ ಮಂಡಳಿ ಸದಸ್ಯರು ಸ್ಥಳೀಯ ಮುಖಂಡರು, ಪಕ್ಷದ ಕಾರ್ಯಕರ್ತರು ಹಾಗೂ ರೈತರು ಉಪಸ್ಥಿತರಿದ್ದರು.