ಉದಯೋನ್ಮುಖ ಶಿಕ್ಷಕ ಸಾಹಿತಿ ಮಹಾಂತೇಶ ಕುಂಬಾರಗೆ ಸರ್ವಜ್ಞ ಶ್ರೀ ಪ್ರಶಸ್ತಿ ಪ್ರದಾನ
ರನ್ನ ಬೆಳಗಲಿ 08: ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ರನ್ನ ಬೆಳಗಲಿ ಯುವ ಕವಿಗಳಾದ ಮಹಾಂತೇಶ ಆರ್ ಕುಂಬಾರ ರವರಿಗೆ ಇತ್ತೀಚಿಗೆ ಜರುಗಿದ ಚಿಕ್ಕೋಡಿ ತಾಲೂಕು ಕುಂಬಾರ ಸಮಾಜ ಅಭಿವೃದ್ಧಿ ಸಂಸ್ಥೆ ಆಶ್ರಯದಲ್ಲಿ ಸರ್ವಜ್ಞ ಜಯಂತಿ-2025 ಹಾಗೂ ಸರ್ವಜ್ಞ ಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭವು ಚಿಕ್ಕೋಡಿಯ ಕುಂಬಾರ ಭವನದಲ್ಲಿ ರವಿವಾರದಂದು ಜರುಗಿತು.
ಚಾಲುಕ್ಯ ನಾಡಿನ ಕವಿ ಚಕ್ರವರ್ತಿ ರನ್ನ ಕವಿಯ ಜನ್ಮಭೂಮಿ ಬೆಳಗಲಿಯ ಸಂಜಾತರಾಗಿ ಬೆಳಗಾವಿ ಹಾಗೂ ಬಾಗಲಕೋಟೆ ಅವಳಿ ಜಿಲ್ಲೆಗಳ ಸಾಹಿತ್ಯ ಪ್ರಿಯರ ಮನೆ ಮಾತಾಗಿ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಕರ್ಮಭೂಮಿಯ ಒಬ್ಬ ಆದರ್ಶ ಶಿಕ್ಷಕರಾಗಿ; ಶಿಕ್ಷಣ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ರಾಜ್ಯ ಮಟ್ಟದ ಒಬ್ಬ ಸಂಪನ್ಮೂಲ ವ್ಯಕ್ತಿಗಳಾಗಿ (ಆಖಇಖಖಿ, ಬೆಂಗಳೂರು) ಕ್ರಿಯಾಶೀಲರಾಗಿ, ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯ ಪ್ರಥಮ ಸ್ಥಾನದ ವಿಜೇತರಾಗಿ ಸಾಧನೆಗೈದು, ಕನ್ನಡ ಸಾರಸ್ವತ ಲೋಕದ ವಿವಿಧ ಸಾಹಿತ್ಯ ಪ್ರಕಾರಗಳಾದ ಕವನ, ಹನಿ, ಚುಟುಕು, ಹಾಯ್ತು, ವಚನ, ಪ್ರಬಂಧ, ಕಥೆ, ಶಿಶು ಸಾಹಿತ್ಯ ಹಾಗೂ ವಿಜ್ಞಾನ ಸಾಹಿತ್ಯಾದಿಗಳಲ್ಲಿ ವಿಪುಲ ಕೃಷಿಗೈದು,ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಮತ್ತು ಕರ್ನಾಟಕ ಜ್ಞಾನ ವಿಜ್ಞಾನ ಪರಿಷತ್ತು ಇತ್ಯಾದಿಗಳಲ್ಲಿ ಸಲ್ಲಿಸಿದ ಸೇವೆ ಗಣನೀಯ ಹಾಗೂ ಶ್ಲಾಘನೀಯವಾದುದಾಗಿದೆ.
ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಇವರಿಂದ 2021 ನೇ ಸಾಲಿನ ಯುವ ಬರಗಾರರ ಚೊಚ್ಚಲ ಕೃತಿಯ ಪ್ರೋತ್ಸಾಹ ಧನಕ್ಕೆ ಇವರ ಕುಲುಮೆಯೊಳಗಿನ ಕವಿತೆಗಳು ಆಯ್ಕೆಯಾಗಿ, ಮಹನೀಯರ ಬಹುಮುಖ ಸಾಹಿತ್ಯ ಪ್ರತಿಭೆಗೆ ಕೀರೀಟವಿತ್ತಿದೆ. ಈ ಎಲ್ಲ ಸಮಗ್ರ ಸಾಧನೆಯ ಪರಿಗಣನೆಯಾಗಿ ಸರ್ವಜ್ಞ ಜಯಂತಿ - 2025ರ ಸುಸಂದರ್ಭದಲ್ಲಿ ರನ್ನ ಬೆಳಗಲಿಯ ಹೆಮ್ಮೆಯ ಶಿಕ್ಷಕ ಸಾಹಿತಿಗಳಾದ ಮಹಾಂತೇಶ್ ಆರ್ ಕುಂಬಾರ(ಎಮ್ಮಾರ್ಕೆ) ರವರಿಗೆ ಸರ್ವಜ್ಞಶ್ರೀ ಎಂಬ ಸಮಾಜದ ಪ್ರತಿಷ್ಠಿತ ಪ್ರಶಸ್ತಿಯನ್ನು ದಿವ್ಯ ಸಾನಿಧ್ಯ ವಹಿಸಿದ ಕುಂಬಾರ ಗುಂಡಯ್ಯ ಮಹಾಸ್ವಾಮಿಗಳು ತೇಲಸಂಗ, ಲಕ್ಷ್ಮಣ ಡಂಗೇರ, ಭಾರತ್ ಕುಂಬಾರ, ಮಾರುತಿ ಕುಂಬಾರ, ರಾಜು ಕುಂಬಾರ, ಬಾಬಾಸಾಬ ಕುಂಬಾರ, ಜಯಶ್ರೀ ಕುಂಬಾರ, ಗಜಾನನ ಕುಂಬಾರ ಇನ್ನಿತರ ಜೊತೆ ಸೇರಿ ಗೌರವಾದರಗಳ ಪೂರ್ವಕವಾಗಿ ನೀಡಿ ಅಭಿನಂದಿಸಿ, ತಮ್ಮ ಈ ಅಪ್ರತಿಮ, ಅಗಾಧ ಸಾಧನೆ, ಸೇವೆ ಇಡೀ ನಾಡಿನಾದ್ಯಂತ ಇನ್ನೂ ಇಮ್ಮಡಿ, ಮುಮ್ಮಡಿಗೊಳ್ಳಲೆಂದು ಶುಭ ಹಾರೈಸಿ ಸತ್ಕರಿಸಿದ್ದಾರೆ.