ಜಾನಪದ ಶೈಲಿಯಲ್ಲಿ ಸಂಕ್ರಾಂತಿಯ ಸಂಭ್ರಮಾಚರಣೆ

ಧಾರವಾಡ 16: ಇಳಕಲ್ ಸೀರೆ ಉಟ್ಟು, ಮೂಗನತ್ತು, ಝಣ್ ಝಣ್ ಬಳೆ ತೊಟ್ಟು, ಎಳ್ಳು-ಬೆಲ್ಲದ ಜೊತೆ ಸಜ್ಜಿ ರೊಟ್ಟಿ, ಎಣಗಾಯಿ ಪಲ್ಯ, ತರತರಹದ ಕಾಳುಪಲ್ಲೆ, ಸಾಂಪ್ರದಾಯಿಕ ಸಿಹಿ ತಿನಿಸು, ಮಾದಲಿ ಜೊತೆಗೆ ಧಾರವಾಡದ ಗಾಯತ್ರಿಪುರಂ ಬಡಾವಣೆಯ ವನಿತೆಯರು ಸಂಭ್ರಮದಿಂದ ಜಾನಪದ ಶೈಲಿಯಲ್ಲಿ ಸಂಕ್ರಾಂತಿಯನ್ನು ಆಚರಿಸಿದರು. 

ಬಿಳಿ ದೋತ್ರ, ತಲೆಗೆ ಪೇಟ, ಉದ್ದ ಲಂಗ ಧರಿಸಿದ ಬಾಲ-ಬಾಲೆಯರು ಎಳ್ಳು ಬೆಲ್ಲವನ್ನು ಬಡಾವಣೆಯ ಅಮ್ಮಂದಿರ ಜೊತೆಯಲ್ಲಿ ಹಂಚಿ ಸವಿದರು. ಲಲಿತೆಯರು ಜಾನಪದ ಹಾಡನ್ನು ಹಾಡುತ್ತ, ಒಗಟುಗಳನ್ನು ಹೇಳುತ್ತಾ, ಎಲ್ಲರೂ ಒಂದೆಡೆ  ಕುಳಿತು ಸಾಮೂಹಿಕವಾಗಿ ಊಟ ಸವಿದರು. 

ಸಂಕ್ರಾಂತಿ ಸಂಭ್ರಮ ಗ್ರಾಮೀಣ ಸೊಗಡು, ಗ್ರಾಮೀಣ ಜೀವನ ಸಂಸ್ಕೃತಿ ತಿಳಿಸಿಕೊಡುವ ಉದ್ದೇಶದಿಂದ ಬಡಾವಣೆಯ ಮಹಿಳೆಯರು ಒಂದಾಗಿ ಒಂದೇ ಮನೆಯ ಹಬ್ಬವೇನು ಎಂದು ಭಾಸವಾಗುವಂತೆ ಒಮ್ಮನಸ್ಸಿನಿಂದ ಮಕ್ಕಳೊಂದಿಗೆ ಆಚರಿಸಿದ ಈ ಹಬ್ಬವು ಮರೆಯಾಗುತ್ತಿರುವ ಅವಿಭಕ್ತ ಕುಟುಂಬ ಸೊಗಡನ್ನು ಜನಮಾನಸದ ಸ್ಮೃತಿ ಪಟಲದಲ್ಲಿ ಪುನಃ ಸ್ಮರಿಸುವಂತೆ ಮಾಡಿದೆ. ಹಿರಿಯ ಅಮ್ಮ ಗೀತಾ ಟಿಕಾರೆಯವರ ಮಾರ್ಗದರ್ಶನದೊಂದಿಗೆ ನಡೆದ ಈ ಸಂಭ್ರಮದಲ್ಲಿ ಶ್ರೀಮತಿ ಮಂಗಳಗೌರಿ ಹಿರೇಮಠ ಬಡಾವಣೆಯ ಮುದ್ದುಮಕ್ಕಳಿಗೆ ಮರೆಯಾಗುತ್ತಿರುವ ಗ್ರಾಮೀಣ ಕಲೆ, ಕ್ರೀಡೆ, ಸಂಸ್ಕೃತಿಯ ಬಗೆಗೆ ತಿಳಿಹೇಳಿ ಕೇವಲ ಮೊಬೈಲ್ ಗೇಮ್ಗಳಲ್ಲಿ ತೊಡಗದೇ ಗ್ರಾಮೀಣ ಬದುಕನ್ನು ರೂಢಿಸಿಕೊಳ್ಳಬೇಕೆಂದು ಹೇಳಿದರು. ಮಹಿಳೆಯರು ಸಾಂಪ್ರದಾಯಿಕ ಉಡುಗೆ-ತೊಡುಗೆಯನ್ನು ಧರಿಸಿ ತಮ್ಮ ಬಾಲ್ಯದ ಸವಿ ದಿನಗಳನ್ನು ಸ್ಮರಿಸಿದರು. 

ಗೀತಾ ಟಿಕಾರೆ, ಮಂಗಳಗೌರಿ ಹಿರೇಮಠ, ನಂದಾ ಅಟಗಾಳಿ, ಪಾರ್ವತಿ ಗಡದರ, ವೀಣಾ ಹೊಸಮಠ, ಪುಷ್ಪಾ ಆಕಳವಾಡಿ, ಲಕ್ಷ್ಮೀ ಕದಂ ಮತ್ತು ಬಸಮ್ಮ ಮುಂತಾದ ವನಿತೆಯರು ಹಬ್ಬದ ಆಚರಣೆಯಲ್ಲಿ ಸಕ್ರೀಯವಾಗಿ ಪಾಲ್ಗೊಂಡಿದ್ದರು. ಪುಟಾಣಿಗಳಾದ ಶ್ರೀನಿಕೇತನ ಶಿಸಂಬ್ರಿಮಠ, ಅಥರ್ವ ಪ್ರಜ್ವಲ್, ವಾಣಿ, ಆದ್ಯಾ ಎಲ್ಲರೂ ಸಂಭ್ರಮಿಸಿದರು.