ಗ್ರಂಥಾಲಯ ಮತ್ತು ಅರಿವು ಕೇಂದ್ರದ ಮೇಲ್ವಿಚಾರಕರಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ
ಬೆಟಗೇರಿ 26: ಮೂಡಲಗಿ ಶೈಕ್ಷಣಿಕ ವಲಯ ವ್ಯಾಪ್ತಿಯ ಬೆಟಗೇರಿ ವಿವಿಡಿ ಸರ್ಕಾರಿ ಪ್ರೌಢ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಹೆಚ್ಚು ಅಂಕ ಗಳಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಪ್ರೋತ್ಸಾಹಿಸಿ, ಸಹಾಯ, ಸಹಕಾರ ನೀಡಿ, ವಿದ್ಯಾರ್ಥಿಗಳ ಕಾಳಜಿ ಮಾಡುತ್ತಿರುವ ಬೆಟಗೇರಿ ಗ್ರಾಮ ಪಂಚಾಯ್ತಿ ಗ್ರಂಥಾಲಯ ಮತ್ತು ಅರಿವು ಕೇಂದ್ರದ ಮೇಲ್ವಿಚಾರಕ ಬಸವರಾಜ ಪಣದಿ ಅವರ ವಿಶೇಷ ಕಾರ್ಯವೈಖರ್ಯ ಮೆಚ್ಚುವಂತಹದಾಗಿದೆ.
ಬೆಟಗೇರಿ ಗ್ರಾಮದ ಊರು ಮತ್ತು ತೋಟಪಟ್ಟಿಗಳಲ್ಲಿ ವಾಸವಿರುವ ಸರ್ಕಾರಿ ಪ್ರೌಢ ಶಾಲೆಯ ಹಲವು ಜನ ಎಸ್ಸೆಸ್ಸೆಲ್ಸಿ ಮಕ್ಕಳು ಬೆಟಗೇರಿ ಗ್ರಾಮ ಪಂಚಾಯ್ತಿ ಗ್ರಂಥಾಲಯ ಮತ್ತು ಅರಿವು ಕೇಂದ್ರಕ್ಕೆ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಪ್ರಯುಕ್ತ ನಿತ್ಯ ಓದಲು ಬರುತ್ತಿರುವ ವಿದ್ಯಾರ್ಥಿಗಳ ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಿಸುವ ನಿಟ್ಟಿನಲ್ಲಿ ಸುಮಾರು 15-20 ಹಲವು ದಿನಗಳಿಂದ ಹಗಲು ಮತ್ತು ರಾತ್ರಿ ಹೊತ್ತು ಗ್ರಂಥಾಲಯ ಕಟ್ಟಡದಲ್ಲಿ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ, ವಾರ್ಷಿಕ ಪರೀಕ್ಷೆ ಬಗ್ಗೆ ಅರಿವು, ಪರೀಕ್ಷೆಯ ಭಯ ಮುಕ್ತ ವಾತಾವರಣ ನಿರ್ಮಾಣ, ಪರೀಕ್ಷೆ ಬರೆಯುವ ವಿಧಾನ ಸೇರಿದಂತೆ ಪಠ್ಯಗಳ ಹಲವಾರು ವಿಷಯಗಳ ಕುರಿತು ನುರಿತ ಶಿಕ್ಷಕರಿಂದ ವಿವಿಧ ಪಠ್ಯ ವಿಷಯದ ಕುರಿತು ವಿಶೇಷ ಪಾಠ ಮಾಡಿಸುತ್ತಿದ್ದಾರೆ.
ಅಲ್ಲದೇ ಈ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಾಗ್ರಿ ನೀಡಿ, ನಿತ್ಯ ಬೆಳಿಗ್ಗೆ 4 ಗಂಟೆಗೆ ಪೋನ್ ಕರೆ ಮಾಡಿ, ಮಕ್ಕಳನ್ನು ಎಚ್ಚರಿಸಿದ ಬಳಿಕ ತಮ್ಮ ಸ್ವಂತ ಮನೆಯಿಂದ ಚಹಾ ಮತ್ತು ಬಿಸ್ಕಿಟ್ ನೀಡುತ್ತಿರುವ ಇಲ್ಲಿಯ ಗ್ರಂಥಾಲಯ ಮತ್ತು ಅರಿವು ಕೇಂದ್ರದ ಮೇಲ್ವಿಚಾರಕ ಬಸವರಾಜ ಪಣದಿ ಅವರ ಎಸ್ಸೆಸ್ಸೆಲ್ಸಿ ಈ ಮಕ್ಕಳ ಮೇಲಿನ ವಿಶೇಷ ಕಾಳಜಿ ಶ್ಲಾಘನೀಯವಾಗಿದೆ.
ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಶಿಕ್ಷಣಪ್ರೇಮಿಗಳು, ವಿದ್ಯಾರ್ಥಿ ಪಾಲಕರು, ಸ್ಥಳೀಯ ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ, ಶಿಕ್ಷಕರು, ಇಲ್ಲಿಯ ಗ್ರಾಮ ಪಂಚಾಯ್ತಿ ಗ್ರಂಥಾಲಯ ಮತ್ತು ಅರಿವು ಕೇಂದ್ರದ ಮೇಲ್ವಿಚಾರಕ ಬಸವರಾಜ ಪಣದಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
“ವಿದ್ಯಾರ್ಥಿಗಳ ಜೀವನದಲ್ಲಿ 10ನೇ ತರಗತಿ ಬಹುಮುಖ್ಯವಾದ ಘಟ್ಟವಾಗಿದೆ. ಸ್ಥಳೀಯ ಹಲವು ವಿದ್ಯಾರ್ಥಿಗಳಿಗೆ ಸಹಾಯ, ಸಹಕಾರ ನೀಡುತ್ತಿರುವ ನಾನು ನಮ್ಮೂರಿನ ಪ್ರೌಢ ಶಾಲೆ ಹಲವು ಜನ ಎಸ್ಸೆಸ್ಸೆಲ್ಸಿ ಮಕ್ಕಳ ಅಳಿಲು ಸೇವೆ ಮಾಡುತ್ತಿರುವೆ ಎಂದು ಬಾವಿಸಿದ್ದೇನೆ. ಹೆಚ್ಚು ಅಂಕ ಪಡೆದು ಪರೀಕ್ಷೆಯಲ್ಲಿ ಪಾಸಾದರೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಉತ್ತಮ ದಾರಿ ದೊರೆತಂತಾಗುತ್ತದೆ ಎಂದು ಸ್ಥಳೀಯ ಗ್ರಂಥಾಲಯ ಮೇಲ್ವಿಚಾರಕ ಬಸವರಾಜ ಪಣದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.