ಎಸ್‌ಐಆರ್ ಹಿನ್ನೆಲೆ: ಜಾತಿ ಪ್ರಮಾಣಪತ್ರ ವಿತರಣೆಗೆ ಸಿಬ್ಬಂದಿಗೆ ತರಬೇತಿ
SIR Background: Training for staff on caste certificate issuance
ಲೋಕದರ್ಶನ ವರದಿ
ಬೆಳಗಾವಿ, ಆ. 5: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಹಿನ್ನೆಲೆಯಲ್ಲಿ ಜಾತಿ ಪ್ರಮಾಣಪತ್ರ ವಿತರಣಾ ಕಾರ್ಯವನ್ನು ಸಮರ್ಕವಾಗಿ ನಡೆಸಲು ಅಗತ್ಯ ಕ್ರಮಗಳ ಕುರಿತು ಅಂಗನವಾಡಿ, ಶಿಕ್ಷಣ ಹಾಗೂ ಪಾಲಿಕೆಯ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಬುಧವಾರ ಕುಮಾರ ಗಂಧರ್ವ ರಂಗಮಂದಿರದಲ್ಲಿ ತರಬೇತಿ ನೀಡಲಾಯಿತು.
ಸರ್ಕಾರದ ನಿರ್ದೇಶನದಂತೆ ಎಸ್‌ಐಆರ್ ಪ್ರಕ್ರಿಯೆಗೆ ಅಗತ್ಯವಿರುವ ಜಾತಿ ಪ್ರಮಾಣಪತ್ರಗಳ ವಿತರಣೆಯನ್ನು ತಂತ್ರಾಂಶದ ಮೂಲಕ ಪರಿಣಾಮಕಾರಿಯಾಗಿ ಕೈಗೊಳ್ಳುವ ಉದ್ದೇಶದಿಂದ ತಾಲೂಕು ಆಡಳಿತ ಮತ್ತು ಮಹಾನಗರ ಪಾಲಿಕೆ ಸಂಯುಕ್ತವಾಗಿ ಈ ತರಬೇತಿಯನ್ನು ಆಯೋಜಿಸಿತ್ತು.
ತರಬೇತಿಯಲ್ಲಿ ಮಾತನಾಡಿದ ಮಹಾನಗರ ಪಾಲಿಕೆಯ ಆಡಳಿತ ವಿಭಾಗದ ಉಪ ಆಯುಕ್ತ ಹಾಗೂ ಉತ್ತರ ವಿಧಾನಸಭಾ ಕ್ಷೇತ್ರದ ಸಹಾಯಕ ಮತದಾರ ನೋಂದಣಾಧಿಕಾರಿ ಉದಯಕುಮಾರ್ ಟಿ.ಬಿ., ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಳಿಸಲು ಮತದಾರರು 12 ದಾಖಲೆಗಳನ್ನು ಸಲ್ಲಿಸಬೇಕಿದ್ದು,
ಮ್ಯಾಪಿಂಗ್ ಆಗದಿರುವುದು, 2002ರ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿರುವುದು ಸೇರಿದಂತೆ ವಿವಿಧ ಕಾರಣಗಳಿಂದ ಸಮಸ್ಯೆ ಎದುರಿಸುತ್ತಿರುವ ಅರ್ಹ ಮತದಾರರಿಗೆ ಸರ್ಕಾರದ ಆದೇಶದಂತೆ ಜಾತಿ ಪ್ರಮಾಣಪತ್ರ ನೀಡಲಾಗುತ್ತಿದೆ ಎಂದು ತಿಳಿಸಿದರು.
ಬೆಳಗಾವಿ ತಾಲೂಕಿನಲ್ಲಿ ಸುಮಾರು 3 ಲಕ್ಷ ಜಾತಿ ಪ್ರಮಾಣಪತ್ರಗಳನ್ನು ಹಾಗೂ ಮಹಾನಗರ ಪಾಲಿಕೆ ವ್ಯಾಪ್ತಿಯ ಉತ್ತರ ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರಗಳ 58 ವಾರ್ಡ್‌ಗಳ ಮತದಾರರಿಗೆ ಸುಮಾರು 26 ಸಾವಿರ ಜಾತಿ ಪ್ರಮಾಣಪತ್ರಗಳನ್ನು ವಿತರಿಸಬೇಕಿದೆ.
ಈ ಕಾರ್ಯವನ್ನು ಎಸ್‌ಐಆರ್ ನಮೂನೆಗಾಗಿ ರೂಪಿಸಿರುವ ಮೊಬೈಲ್ ಆ್ಯಪ್ ಮೂಲಕ ನಿರ್ವಹಿಸಬೇಕಿರುವುದರಿಂದ ಅಂಗನವಾಡಿ ಮೇಲ್ವಿಚಾರಕರು, ಶಿಕ್ಷಕರು ಹಾಗೂ ಪಾಲಿಕೆಯ ಆರೋಗ್ಯ ಇಲಾಖೆಯ ಸಿಬ್ಬಂದಿ ತರಬೇತಿಯಲ್ಲಿ ನೀಡಿದ ಮಾಹಿತಿಯನ್ನು ಸಮರ್ಕವಾಗಿ ಅರ್ಥೈಸಿಕೊಂಡು ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು.
ಕಾರ್ಯನಿರ್ವಹಣೆಯಲ್ಲಿ ಯಾವುದೇ ಗೊಂದಲ ಅಥವಾ ಸಂದೇಹ ಉಂಟಾದಲ್ಲಿ ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದು ಸಮಸ್ಯೆಗಳನ್ನು ತಕ್ಷಣ ಪರಿಹರಿಸಿಕೊಳ್ಳುವಂತೆ ಸಿಬ್ಬಂದಿಗೆ ಸೂಚಿಸಲಾಯಿತು.
ತರಬೇತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ತಹಶೀಲ್ದಾರ್ ಹಣಮಂತ ಶಿರಹಟ್ಟಿ ಮಾತನಾಡಿ, ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಸಿಬ್ಬಂದಿಗೂ ಅಗತ್ಯ ತರಬೇತಿ ನೀಡಲಾಗಿದ್ದು, ನಿಗದಿತ ಅವಧಿಯೊಳಗೆ ಜವಾಬ್ದಾರಿಯಿಂದ ಕಾರ್ಯವನ್ನು ಪೂರ್ಣಗೊಳಿಸುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸಿಡಿಪಿಒ ಅನಿಲ್ ಕುಮಾರ್, ಪಾಲಿಕೆಯ ಪರಿಸರ ಅಭಿಯಂತರ ಹಣಮಂತ ಕಲಾದಗಿ, ಕಂದಾಯ ನೀರೀಕ್ಷಕ ಚಂದ್ರಶೇಖರ ಹೊಂಕಾಳಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಅಂಬೋಲಿ ಬಳಿ ಕಣಿವೆಗೆ ಬಿದ್ದು ಯುವಕ ದುರ್ಮರಣ : 5 ಗಂಟೆ ಕಾರ್ಯಾಚರಣೆ ಬಳಿಕ ಶವ ಪತ್ತೆ
ಸುತಗಟ್ಟಿ ಗ್ರಾಮದಲ್ಲಿ ಪ್ರತ್ಯಕ್ಷವಾಗಿದ್ದ ಚಿರತೆ ಸೆರೆ : ನಿಟ್ಟೂಸಿರು ಬಿಟ್ಟ ಗ್ರಾಮಸ್ಥರು
ಮೈದುಂಬಿ ಹರಿಯುತ್ತಿರುವ ಘಟಪ್ರಭಾ ನದಿ: ಭರ್ತಿ ಹಂತದಲ್ಲಿ ಹಿಡಕಲ್ ಜಲಾಶಯ
ಎಚ್ಚರ ಅನಾಹುತಕ್ಕೆ ಕೈ ಮಾಡಿ ಕರೆಯುತ್ತಿದೆ: ರಸ್ತೆಯ ಭೂಗತ ವಿದ್ಯುತ್ ತಂತಿಯಿಂದ ಹೊರಬರುತ್ತಿದೆ ಬೆಂಕಿ ಕಿಡಿ-ಹೊಗೆ
ಹುಕ್ಕೇರಿ ತಾಲೂಕಿನ ಅತಿ ಹಿರಿಯ 107 ವಯಸ್ಸಿನ ನಾಗರಿಕ ನಿಜಪ್ಪ ಜಾಡರ್ ವಿಧಿವಶ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ 