ರೋಜಗಾರ ದಿವಸ ಆಚರಣೆ
ಕಾರವಾರ 21: ದುಡಿಯುವ ಕೈಗಳಿಗೆ ಕೆಲಸ ಕೊಟ್ಟು, ಆರ್ಥಿಕ ಅಭಿವೃದ್ಧಿಯೊಂದಿಗೆ ಗ್ರಾಮೀಣ ಪ್ರದೇಶಗಳ ಸಮಗ್ರ ಸಬಲೀಕರಣಕ್ಕೆ ನೆರವಾಗುವ ನಿಟ್ಟಿನಲ್ಲಿ ನರೇಗಾದಡಿ ಸಮುದಾಯ ಕಾಮಗಾರಿಗಳಲ್ಲಿ ಕೂಲಿ ಕೆಲಸದೊಂದಿಗೆ ವೈಯಕ್ತಿಕ ಕಾಮಗಾರಿಗಳ ಮೂಲಕ ಶಾಶ್ವತ ಆಸ್ತಿ ಸೃಜನೆಗೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯು ಕಲ್ಪಿಸಿಕೊಟ್ಟಿರುವ ಅವಕಾಶವನ್ನು ಹಳ್ಳಿಗಾಡಿನ ಬಡ ಗ್ರಾಮೀಣ ಜನರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕೋಡಂಬಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸಂಜೀವಯ್ಯ ಹಿರೇಮಠ ಹೇಳಿದರು.
ಮುಂಡಗೋಡ ತಾಲ್ಲೂಕಿನ ಕೋಡಂಬಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಭದ್ರಾಪುರ ಹಾಗೂ ರಾಮಸಪುರ ಗ್ರಾಮದ ರಾಮಾಪುರ ಪ್ಲಾಟ್ನಲ್ಲಿ ನರೇಗಾದಡಿ ಮಾನವ ದಿನಗಳ ಸೃಜನೆಗಾಗಿ ಐಇಸಿ ಚಟುವಟಿಕೆಗಳಡಿ ಜನಜಾಗೃತಿ ಹಿನ್ನಲೆಯಲ್ಲಿ ಶುಕ್ರವಾರ ಹಮ್ಮಿಕೊಂಡ ರೋಜಗಾರ ದಿವಸ ಆಚರಣೆ, ಮನೆ-ಮನೆ ಭೇಟಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನರೇಗಾ ಮಾಹಿತಿ, 2025-26ನೇ ಸಾಲಿನ ಕ್ರಿಯಾ ಯೋಜನೆ ತಯಾರಿಕೆ ಹಾಗೂ ಏಕಿಕೃತ ಸಹಾಯವಾಣಿ ಸಂಖ್ಯೆ ಮಾಹಿತಿಯುಳ್ಳ ಕರಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು.
ಜಿಲ್ಲಾ ಪಂಚಾಯತ್ನಿಂದ ಅನುಮೋದಿತ ಕ್ರಿಯಾ ಯೋಜನೆಯಡಿ ಅಗತ್ಯ ಕಾಮಗಾರಿ ಕೈಗೊಳ್ಳುವ ಮೂಲಕ ಹೆಚ್ಚು ಹೆಚ್ಚು ಕೂಲಿಕಾರರಿಗೆ ನರೇಗಾದಡಿ ಕೂಲಿ ಕೆಲಸ ನೀಡಲಾಗುತ್ತಿದೆ. ಗ್ರಾಮ ಪಂಚಾಯತ್ಗೆ ನೀಡಲಾದ ನಿಗದಿತ ಮಾನವ ದಿನಗಳ ಸೃಜನೆಯ ಗುರಿ ಸಾಧಿಸಬೇಕಿದ್ದು, ಈ ನಿಟ್ಟಿನಲ್ಲಿ ಮನೆ-ಮನೆ ಭೇಟಿ ಮೂಲಕ ಗ್ರಾಮಸ್ಥರಿಗೆ ನರೇಗಾದಡಿ ಸಿಗುವ ಸೌಲಭ್ಯಗಳ ಕುರಿತು ಅರಿವು ಮೂಡಿಸುವ ಕಾರ್ಯ ಮಾಡಲಾಗುತ್ತಿದೆ. ಗ್ರಾಮದ ಜನರು ಸಹಕಾರ ನೀಡುವ ಮೂಲಕ ನರೇಗಾದಡಿ ಸಿಗುವ ಕೂಲಿ ಕೆಲಸ ಪಡೆದುಕೊಳ್ಳಬೇಕು ಎಂದರು.
ಐಇಸಿ ಸಂಯೋಜಕಢ ಫಕ್ಕೀರ್ಪ ತುಮ್ಮಣ್ಣನವರ ಮಾತನಾಡಿ, ನರೇಗಾದಡಿ ಅಡಿಕೆ, ಪಪ್ಪಾಯಿ, ಚಿಕ್ಕು, ಪೇರಲ, ದಾಳಿಂಬೆ, ಡ್ರ್ಯಾಗನ್ ಫ್ರೂಟ್ನಂತಹ ವಿವಿಧ ತೋಟಗಾರಿಕೆ ಬೆಳೆಗಳು ಹಾಗೂ ದನದ ಕೊಟ್ಟಿಗೆ, ಕುರಿ, ಕೋಳಿ, ಮೇಕೆ, ಹಂದಿ ಶೆಡ್, ಬಯೋ ಗ್ಯಾಸ್ ಘಟಕ, ಕೊಳವೆ ಬಾವಿ ಮರುಪೂರಣ ಘಟಕ, ಕೃಷಿ ಹೊಂಡ, ಬಾವಿ ನಿರ್ಮಾಣ ಸೇರಿದಂತೆ ವೈಯಕ್ತಿಕ ಕಾಮಗಾರಿ ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಇದೇವೇಳೆ ನರೇಗಾ ಮಾಹಿತಿ, 2025-26ನೇ ಸಾಲಿನ ಕ್ರಿಯಾ ಯೋಜನೆ ತಯಾರಿಕೆ ಹಾಗೂ ಏಕಿಕೃತ ಸಹಾಯವಾಣಿ ಸಂಖ್ಯೆ ಮಾಹಿತಿಯುಳ್ಳ ಕರಪತ್ರಗಳನ್ನು ಹಂಚಿ ಗ್ರಾಮಸ್ಥರಿಗೆ ಜಾಗೃತಿ ಮೂಡಿಸಲಾಯಿತು.
ಗ್ರಾಮ ಪಂಚಾಯತಿ ರಾಮಾಪುರ ಸದಸ್ಯ ಅಶೋಕ ಅರಳೇಶ್ವರ, ಕಾರ್ಯದರ್ಶಿ ನಾಗರಾಜ ಕುರಿಕಾಯರ, ಬಿಲ್ ಕಲೆಕ್ಟರ್ ನಾಗಯ್ಯ ಹಿರೇಮಠ, ವಾಟರ್ ಮನ್ಗಳಾದ ಇಸ್ಮಾಯಿಲ್, ಈರ್ಪ ಬೆನಕಣ್ಣನವರ, ಸಿಬ್ಬಂದಿ ಲಕ್ಷ್ಮಣ ಕ್ಯಾರಕಟ್ಟಿ, ಶಿಲ್ಪಾ ಬಾತಿ, ಗ್ರಾಮ ಕಾಯಕ ಮಿತ್ರ ಸುಧಾ ಅಣ್ಣಪ್ಪ ವಡ್ಡರ, ಭದ್ರಾಪುರ ಹಾಗೂ ರಾಮಾಪುರ ಗ್ರಾಮಸ್ಥರು ಉಪಸ್ಥಿತರಿದ್ದರು.