ಹನೇಹಳ್ಳಿಯಲ್ಲಿ ರೋಜಗಾರ ದಿನಾಚರಣೆ
ಕಾರವಾರ, ಜ.2: ಕುಮಟಾ ತಾಲೂಕಿನ ಹನೇಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಕುಂರ್ಡಿ ದೇವಸ್ಥಾನದಿಂದ ಹೊಸ್ಕೇರಿ ಹೊನ್ನಕೋಟೆ ದೇವಸ್ಥಾನದ ವರೆಗೆ ಹಳ್ಳ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ರೋಜಗಾರ ದಿನಾಚರಣೆ ಜರುಗಿತು.
ಜಿಲ್ಲಾ ಪಂಚಾಯತಿಯ ಜಿಲ್ಲಾ ಐಇಸಿ ಸಂಯೋಜಕ ಕಿರಣ ಜೋತೆಪ್ಪನವರ ಮಾತನಾಡಿ, ಗ್ರಾಮೀಣ ಪ್ರದೇಶದ ಸರ್ವತೋಮುಖ ಅಭಿವೃದ್ಧಿಯನ್ನು ಆದ್ಯತೆಯಾಗಿರಿಸಿಕೊಂಡು ಮಹಾತ್ಮ ಗಾಂಧಿ ನರೇಗಾ ಯೋಜನೆ ಕಾರ್ಯ ನಿರ್ವಹಿಸುತ್ತಿದೆ. ದೀರ್ಘಕಾಲ ಬಾಳಿಕೆ ಬರುವ ಸ್ವತ್ತುಗಳ ನಿರ್ಮಾಣದೊಂದಿಗೆ ಬಡ ಕೂಲಿ ಕಾರ್ಮಿಕರಿಗೆ ಸ್ಥಳೀಯವಾಗಿಯೇ ಉದ್ಯೋಗ ಅವಕಾಶ ಸೃಷ್ಟಿಸುತ್ತಿದ್ದು, ಹಳ್ಳಿ ಜನ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಉದ್ಯೋಗ ಚೀಟಿ ಹೊಂದಿರುವ ಪ್ರತಿ ಕುಟುಂಬಕ್ಕೆ ದಿನವೊಂದಕ್ಕೆ 349 ರೂ. ಕೂಲಿಯಂತೆ ವರ್ಷಕ್ಕೆ 100 ದಿನಗಳ ಕೆಲಸ ನೀಡಲಾಗುತ್ತಿದೆ. ಕೆಲಸದ ಅವಶ್ಯಕತೆ ಇರುವವರು ನಮೂನೆ 6ರಲ್ಲಿ ಗ್ರಾಮ ಪಂಚಾಯತಿಗೆ ಬೇಡಿಕೆ ಸಲ್ಲಿಸಿ, 15 ದಿನಗೊಳಗೆ ಉದ್ಯೋಗ ಪಡೆಯಬಹುದು. ವೈಯಕ್ತಿಕ ಕಾಮಗಾರಿಗಳಾದ ಬಚ್ಚಲು ಗುಂಡಿ, ಎರೆಹುಳು ತೊಟ್ಟಿ, ದನದಕೊಟ್ಟಿಗೆ, ಕುರಿಶೇಡ್, ಕೋಳಿಶೇಡ್, ತೋಟಗಾರಿಕಾ ಬೆಳೆಗಳಾದ ಅಡಿಕೆ, ಮಾವು, ಸಿಬೆ ಹಾಗೂ ಇನ್ನಿತರೆ ಬೆಳೆಗಳನ್ನು ತೆಗೆದುಕೊಂಡು ಆರ್ಥಿಕವಾಗಿ ಸಬಲರಾಗಬಹುದು ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಡಾಟಾ ಎಂಟ್ರಿ ಆಫರೇಟರ್ ನಿತ್ಯ ಗೌಡ, ಬಿಎಫ್‌ಟಿ ವಿಧ್ಯಾ, ಕಾಯಕ ಬಂಧು ಸುಹಾಸಿನಿ ಸಂತೋಷ ಗುಣಗಾ ಹಾಗೂ ನರೇಗಾ ಕೂಲಿಕಾರರು ಹಾಜರಿದ್ದರು.