ಸಿಕ್ಕ ಅವಕಾಶಗಳಿಂದ ಎತ್ತರಕ್ಕೇರಿ : ಕೆ.ಎಮ್. ಜಾನಕಿ
ಬಾಗಲಕೋಟ 07: ನಿಮ್ಮ ಮೇಲೆ ನೀವು ವಿಶ್ವಾಸ ಇಡಿ. ಬಂದ ಯಾವ ಅವಕಾಶವನ್ನು ಕೈ ಚೆಲ್ಲಬೇಡಿ. ಸಿಕ್ಕ ಅವಕಾಶದಲ್ಲಿ ನಿಮ್ಮನು ನೀವು ಸಾಬಿತು ಪಡಿಸಿಕೊಂಡರೆ ದೊಡ್ಡ ಅವಕಾಶಗಳು ನಿಮಗೆ ಒದಗಿ ಬರುತ್ತವೆ. ಉದಾಸೀನತೆ ಬಿಟ್ಟು ನಿರಂತರ ಕಲಿಕೆ ಇರಬೇಕು ಎಂದು ಜಿಲ್ಲಾಧಿಕಾರಿ ಕೆ.ಎಮ್. ಜಾನಕಿ ಹೇಳಿದರು. ನಗರದ ಬಸವೇಶ್ವರ ಇಂಜನಿಯರಿಂಗ್ ಮಹಾವಿದ್ಯಾಲಯದ ಬಿಇಸಿ ಧ್ವನಿ ಸಮುದಾಯ ಬಾನುಲಿ ಕೇಂದ್ರದಲ್ಲಿ ಮಹಿಳಾ ದಿನಾಚಾರಣೆಯ ಅಂಗವಾಗಿ ಸಂದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಶಿಕ್ಷಣ ಮುಗಿದ ಬಳಿಕ ಕೇವಲ ಅಡುಗೆ ಮನೆ ಅಥವಾ ವೈಯಕ್ತಿಕ ಬದುಕು ಅಷ್ಟಕ್ಕೆ ಸೀಮಿತರಾದರೆ ಬದುಕು ಮತ್ತು ಸಮಾಜ ನಮ್ಮನ್ನು ಕ್ಷೀಣವಾಗಿ ನೋಡುತ್ತದೆ. ಪ್ರಕೃತಿಯಲ್ಲಿ ಹೆಣ್ಣು ಮಕ್ಕಳು ಅಥವಾ ಗಂಡು ಮಕ್ಕಳು ಜೈವಿಕ ಕಾರ್ಯಗಳಲ್ಲಿ ಹೊರತು ಪಡಿಸಿ ಎಲ್ಲರೂ ಒಂದೇ. ನಿಮ್ಮನ್ನು ನೀವು ಸೀಮಿತ ಮಾಡಿಕೊಳ್ಳಬೇಡಿ. ಮಹಿಳೆ ತನ್ನನ್ನು ತಾನು ಯಾವುದೇ ಚೌಕಟ್ಟಿನಲ್ಲಿ ಸಿಲುಕಿಸಿಕೊಳ್ಳಲಾರದೆ ನಿಮ್ಮ ಕನಸುಗಳನ್ನು ನನಸು ಮಾಡಬೇಕೆಂದರೆ ನೀವು ಶ್ರದ್ಧೆಯಿಂದ ಆಸಕ್ತಿಯಿಂದ ಕನಸಿನ ಕಡೆಗೆ ಗಮನ ಹರಿಸಬೇಕು. ಪುರುಷರಂತೆ ಮಹಿಳೆಯರಿಗೂ ಶ್ರಮವಹಿಸುವ ಶಕ್ತಿಯಿದೆ. ಎಲ್ಲಾ ಚೌಕಟ್ಟನ್ನು ನಾವು ಮೀರಬೇಕು ಹೊಸ ಬದುಕನ್ನು ರೂಪಿಸಿಕೊಂಡು ನಿಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಿ ಎಂದರು. ನಮ್ಮ ಎದುರುಗಡೆಯೇ ಸಾಕಷ್ಟು ಮಹಿಳೆಯರು ಸವಾಲುಗಳು ಮೆಟ್ಟಿನಿಂತು ಸಾಧನೆಗೈದು ಸ್ಫೂರ್ತಿಯಾಗಿದ್ದಾರೆೆ. ಬದುಕಿನಲ್ಲಿ ತುಡಿತವಿರಬೇಕು. ಸಾಧನೆಯ ಹಾದಿಯಲ್ಲಿ ನಿರಂತರ ಪ್ರಯತ್ನ ಮತ್ತು ತಯಾರಿ ನಡಿಸಿದರೆ ಖಂಡಿತ ನೀವು ನಿಮ್ಮ ಗುರಿ ಮುಟ್ಟಲು ಸಾಧ್ಯ ಎಂದರು. ಮನಸ್ಸಿಗೂ ಅಲಂಕಾರ ಮಾಡಿಕೊಳ್ಳುವಂತಾಗಬೇಕು. ಜೊತೆಗೆ ಸಮಯವನ್ನು ನೀಡಬೇಕು. ದಿನದಲ್ಲಿ ಒಂದು ಬಾರಿಯಾದರೂ ಮಹಿಳೆಯರು ಅವರೊಟ್ಟಿಗೆ ಅವರು ಮಾತನಾಡಬೇಕು. ಪ್ರತಿನಿತ್ಯ ಆತ್ಮ ವಿಮರ್ಶೆ ಮಾಡಕೊಳ್ಳಬೇಕು. ಆತ್ಮಾವಲೋಕನ ಮಾಡಿಕೊಂಡರೆ ಯಶಸ್ವಿಯಾಗಬಲ್ಲಿರಿ ಎಂದರು. ಪ್ರಾರ್ಚಾಯರಾದ ಡಾ.ಬಿ.ಆರ್.ಹೀರೆಮಠ, ಬಿಇಸಿ ಧ್ವನಿಯ ವ್ಯವಸ್ಥಾಪಕ ಭರತ ಭಡಿಗೇರ, ಕಾರ್ಯಕ್ರಮ ನಿರೂಪಕ ಈರಯ್ಯಾ ಚಿಕ್ಕಮಠ, ಮಹಾಂತೇಶ ಕೋತಿನ, ಸುಮಾ ಕೇರೂರ ಇದ್ದರು.