ಆರ್ಟ ಗ್ಯಾಲರಿಗೆ ನಿವೃತ್ತ ಚುನಾವಣಾಧಿಕಾರಿ ಭೇಟಿ

Retired Returning Officer visits Art Gallery

ಆರ್ಟ ಗ್ಯಾಲರಿಗೆ ನಿವೃತ್ತ ಚುನಾವಣಾಧಿಕಾರಿ ಭೇಟಿ 

ಧಾರವಾಡ 21: ರಾಜ್ಯದ ನಿವೃತ್ತ ಮುಖ್ಯ ಚುನಾವಣಾಧಿಕಾರಿ ಡಾ. ಸಂಜೀವಕುಮಾರ ಇತ್ತೀಚೆಗೆ ನಗರದ ಸರಕಾರಿ ಆರ್ಟ ಗ್ಯಾಲರಿಗೆ ಭೇಟಿ ನೀಡಿ ಅಲ್ಲಿಯ ವಿಭಿನ್ನ ಕಲಾಕೃತಿಗಳನ್ನು ವೀಕ್ಷಿಸಿ ಮೆಚ್ಚಿಗೆ ವ್ಯಕ್ತಪಡಿಸಿದರು.  

ಈ ಸಂದರ್ಭದಲ್ಲಿ ಸರಕಾರಿ ಚಿತ್ರಕಲಾ ಮಹಾವಿದ್ಯಾಲಯ ನೀಡಿದ ಗೌರವ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಡಾ. ಸಂಜೀವಕುಮಾರ, ತಾವು ಧಾರವಾಡ ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಹಲವು ಬಾರಿ ಈ ಆರ್ಟ ಗ್ಯಾಲರಿಗೆ ಭೇಟಿ ನೀಡಿದ್ದೇನೆ. ಆಗ ಸರಕಾರಿ ಚಿತ್ರಕಲಾ ಮಹಾವಿದ್ಯಾಲಯವು ಧಾರವಾಡದ ಗಂಡು ಮಕ್ಕಳ ಟ್ರೇನಿಂಗ್ ಕಾಲೇಜು (ಈಗಿನ ಡಯಟ್) ಸಂಲಗ್ನ ಸಂಸ್ಥೆಯಾಗಿತ್ತು. ಬದಲಾದ ವ್ಯವಸ್ಥೆಯಲ್ಲಿ ಈಗ ಉನ್ನತ ಶಿಕ್ಷಣ ಇಲಾಖೆಗೆ ಹಸ್ತಾಂತರವಾಗಿದೆ. ಆರಂಭದಿಂದಲೂ ಇಲ್ಲಿ ಅನೇಕ ಚಿತ್ರಕಲಾ ಶಿಬಿರಗಳು ನಡೆದಿದ್ದು, ಉತ್ಕೃಷ್ಟ ಚಿತ್ರಕಲಾಕೃತಿಗಳು ಸಿದ್ಧಗೊಳ್ಳುತ್ತಿರುವುದು ಲಲಿತಕಲೆಗಳ ವಿಕಾಸಕ್ಕೆ ಪೂರಕವಾದದ್ದು ಎಂದರು.  

ಸರಕಾರಿ ಚಿತ್ರಕಲಾ ಮಹಾವಿದ್ಯಾಲಯದ ಮುಖ್ಯಸ್ಥ ಡಾ. ಬಸವರಾಜ ಕುರಿಯವರ ಹಾಗೂ ಉಪನ್ಯಾಸಕ ಎಸ್‌.ಕೆ.ಪತ್ತಾರ ಅವರು ಡಾ. ಸಂಜೀವಕುಮಾರ ಹಾಗೂ ಅವರ ಪತ್ನಿ, ನಿವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರಿತು ಕಕ್ಕರ್ ಅವರನ್ನು ಶಾಲು ಹೊದಿಸಿ ಚಿತ್ರಕಲಾಕೃತಿ ನೀಡಿ ಗೌರವಿಸಿದರು. ಅತಿಥಿ ಉಪನ್ಯಾಸಕರುಗಳಾದ ಡಾ.ರಾಘವೇಂದ್ರ, ಡಾ.ವೈಶಾಲಿ ಕಾಂಬಳೆ, ಶಿವಕುಮಾರ ಕಂಕಣವಾಡಿ, ಶಿವಪ್ರಸಾದ, ನಿವೃತ್ತ ಶಿಕ್ಷಕ ದೇವೇಗೌಡ ಮಲಗೌಡ್ರ, ರೇಣುಕಾ ಸಾಳುಂಕೆ ಮತ್ತು ಯಲ್ಲಪ್ಪ ಮುನೇನಕೊಪ್ಪ ಇತರರು ಇದ್ದರು. ಚಿತ್ರಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳ ವಿನಂತಿಯ ಮೇರೆಗೆ ಡಾ. ಸಂಜೀವಕುಮಾರ ದಂಪತಿಗಳು ವಿದ್ಯಾರ್ಥಿಗಳೊಂದಿಗೆ ಗುಂಪುಚಿತ್ರ ತೆಗೆಯಿಸಿಕೊಂಡರು.