ನವದೆಹಲಿ, ಜ 11: ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡವನ್ನು ನಾಳೆ ಮುಂಬೈನಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಪ್ರಕಟಿಸಲಿದೆ. ಆಸ್ಟ್ರೇಲಿಯಾ ವಿರುದ್ಧ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೊನೆಯ ಏಕದಿನ ಪಂದ್ಯ ಮುಗಿದ ಮರು ದಿನವೇ (ಜ.20) ಭಾರತ ಟಿ-20 ತಂಡ ನ್ಯೂಜಿಲೆಂಡ್ ಗೆ ತೆರಳಲಿದೆ.
ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ ಐದು ಪಂದ್ಯಗಳ ಟಿ-20 ಸರಣಿ, ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕಿವೀಸ್ ತಂಡವನ್ನು ಎದುರಿಸಲಿದೆ.
ಬಿಸಿಸಿಐ ಮೂಲಗಳ ಪ್ರಕಾರ, “ಬಿಸಿಸಿಐ ಆಯ್ಕೆ ಸಮಿತಿಯು ನಾಳೆ ಭಾರತ ತಂಡವನ್ನು ಪ್ರಕಟಿಸಲಿದೆ. ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಏಕದಿನ ಪಂದ್ಯದ ಬಳಿಕ ಮರು ದಿನವೇ ಟಿ-20 ಭಾರತ ತಂಡ ನ್ಯೂಜಿಲೆಂಡ್ ಗೆ ಪ್ರವಾಸ ಕೈಗೊಳ್ಳಲಿದೆ,” ಎಂದು ತಿಳಿಸಿದೆ.
ಬೆನ್ನು ಶಸ್ತ್ರ ಚಿಕಿತ್ಸೆಯಿಂದ ಗುಣಮುಖರಾಗಿರುವ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಭಾರತ ತಂಡಕ್ಕೆ ಮರಳುವುದು ಬಹುತೇಕ ಖಚಿತವಾಗಿದೆ. ಅವರು ಟಿ-20 ಸರಣಿಯೊಂದಿಗೆ ತಂಡಕ್ಕೆ ಮರಳುತ್ತಿದ್ದಾರೆ. ಪಾಂಡ್ಯ ಅವರ ಹೆಸರನ್ನು ಈಗಾಗಲೇ ಭಾರತ ತಂಡದಲ್ಲಿ ಗುರುತಿಸಲಾಗಿದೆ. ಮುಂಬರುವ ಐಸಿಸಿ ಟಿ-20 ವಿಶ್ವಕಪ್ ಟೂರ್ನಿ ಹಿನ್ನೆಲೆಯಲ್ಲಿ ಭರ್ಜರಿ ಕಮ್ ಬ್ಯಾಕ್ ಮಾಡುವ ತುಡಿತದಲ್ಲಿ ಹಾರ್ದಿಕ್ ಇದ್ದಾರೆ.
“ಶಸ್ತ್ರ ಚಿಕಿತ್ಸೆ ಮಾಡಿಕೊಳ್ಳದೆ ನನ್ನ ಬೆನ್ನು ನೋವನ್ನು ಗುಣಮುಖವಾಗಲು ಸಾಧ್ಯವಾದಷ್ಟು ವಿಧಾನಗಳನ್ನು ಕೈ ಗೊಂಡಿದ್ದೆ. ಆದರೆ, ಇದು ಸಾಧ್ಯವಾಗಲೇ ಇಲ್ಲ. ನನ್ನಿಂದ ಶೇ. 100 ರಷ್ಟು ಕೊಡುಗೆಯನ್ನು ತಂಡಕ್ಕೆ ನೀಡಲು ಸಾಧ್ಯವಿಲ್ಲ ಹಾಗೂ ನನ್ನ ಸಾಮರ್ಥ್ಯಕ್ಕೆ ನ್ಯಾಯ ಒದಗಿಸಲು ಸಾಧ್ಯವೇ ಇಲ್ಲ ಎಂದು ಎನಿಸಿತ್ತು. ಆದ್ದರಿಂದ ಅಂತಿಮವಾಗಿ ಶಕ್ತ್ರ ಚಿಕಿತ್ಸೆಗೆ ಒಳಗಾಗಲು ನಿರ್ಧರಿಸಿದೆ,” ಎಂದು ಹಾರ್ದಿಕ್ ಪಾಂಡ್ಯ ಮೊದಲ ಹೇಳಿದ್ದರು.