ಅಂಗಡಿ ಮುಗ್ಗಟ್ಟುಗಳ ಮೇಲಿನ ನಾಮಫಲಕಗಳನ್ನು ಕನ್ನಡದಲ್ಲಿ ಬರೆಯಲು ಮನವಿ

ಬೆಳಗಾವಿ-28-ಅಂಗಡಿ ಮುಗ್ಗಟ್ಟುಗಳ ಮೇಲಿನ ನಾಮಫಲಕಗಳಲ್ಲಿ ಕನ್ನಡವನ್ನೇ ಬರೆಸದ ಮಾಲಿಕರ ಕೈಯಲ್ಲಿ ಗುಲಾಬಿ ಹೂವನ್ನಿಟ್ಟರು, ಕೈ ಮುಗಿದರು, ದಯವಿಟ್ಟು ಕನ್ನಡದಲ್ಲೂ ಅಂಗಡಿ ಹೆಸರು ಬರೆಸಿರಿ ಎಂದು ಮನವಿ ಮಾಡಿದರು! 

ಬೆಳಗಾವಿಯ ನೃಪತುಂಗ ಯುವಕ ಸಂಘದ ಪದಾಧಿಕಾರಿಗಳು ನಿನ್ನೆ ಶನಿವಾರ ಬೆಳಗಾವಿಯಲ್ಲಿ ನಡೆಸಿದ ಹೊಸ ರೀತಿಯ "ಕನ್ನಡ ನಾಮಫಲಕ ಆಂದೋಲನ" ಇದು. ನಗರದ ಅನೇಕ ಅಂಗಡಿಗಳು ಹಾಗೂ ವಾಣಿಜ್ಯ ಸಂಸ್ಥೆಗಳು ತಮ್ಮ ನಾಮಫಲಕಗಳಲ್ಲಿ ಕೇವಲ ಇಂಗ್ಲಿಷನ್ನು ಬಳಸಿದ್ದು ಒಂದಕ್ಷರವೂ ಕನ್ನಡದಲ್ಲಿಲ್ಲ ಎಂಬ ಸಂಗತಿ ಸಾಮಾಜಿಕ ಜಾಲತಾನದಲ್ಲಿ ಕೆಲ ದಿನಗಳಿಂದ ಹರಿದಾಡುತ್ತಿದೆ. ಈ ಸಂಗತಿಯನ್ನು ಗಂಭೀರವಾಗಿ ಪರಿಗಣಿಸಿದ ಮಹಾನಗರ ಪಾಲಿಕೆಯ ಆಯುಕ್ತರು ಅನೇಕ ಅಂಗಡಿಗಳ ಮಾಲಿಕರಿಗೆ ನೋಟೀಸುಗಳನ್ನು ಸಹ ಕಳಿಸಿದ್ದಾರೆ. ಆದರೂ ಮಾಲಿಕರು ಸಕಾರಾತ್ಮಕವಾಗಿ ಸ್ಪಂದಿಸದಿರುವದು ಗಮನಕ್ಕೆ ಬಂದ ನಂತರ ನೃಪತುಂಗ ಯುವಕ ಸಂಘದ ಯುವಕರು ನಿನ್ನೆ ಹಲವಾರು ಅಂಗಡಿಗಳ ಮಾಲಿಕರನ್ನು ಭೆಟ್ಟಿಯಾಗಿ ಗುಲಾಬಿ ಹೂವು ನೀಡುವ ಮೂಲಕ ಕನ್ನಡದಲ್ಲಿ ನಾಮಫಲಕ ಬರೆಸುವಂತೆ ಮನವಿ ಮಾಡಿದರು. 

ಆದಷ್ಟು ಬೇಗ ಕನ್ನಡದಲ್ಲಿ ನಾಮಫಲಕ ಬರೆಸುವದಾಗಿ ಅಂಗಡಿ ಮಾಲಿಕರು ನಿನ್ನೆ ಭರವಸೆ ನೀಡಿದ್ದು ಕೆಲ ದಿನಗಳವರೆಗೆ ಕಾದು ನೋಡಿ ನಾಮಫಲಕ ಹಾಕದಿದ್ದರೆ ಮುಂದಿನ ಹೆಜ್ಜೆಯನ್ನು ಇಡುವ ನಿಧರ್ಾರವನ್ನು ಯುವಕ ಸಂಘ ಕೈಗೊಂಡಿದೆ. ನಿನ್ನೆಯ ಕಾರ್ಯಕ್ರಮದಲ್ಲಿ ಅಧ್ಯಕ್ಷ ಸಾಗರ ಬೋರಗಲ್ಲ, ಜಿನೇಶ ಅಪ್ಪನ್ನವರ, ರಜತ ಅಂಕಲೆ, ಸೂರಜ ಹುಳಬತ್ತೆ, ಆದರ್ಶ ಅನಗೋಳ, ವಿಠ್ಠಲ ಪಾಟೀಲ ಮುಂತಾದವರು ಭಾಗವಹಿಸಿದ್ದರು