ಸರ್ಕಾರಿ ಶಾಲೆಗಳ ಕಟ್ಟಡಗಳನ್ನು ದುರಸ್ತಿಗೊಳಿಸಲು ಎಐಡಿಎಸ್‌ಓ ನಿಯೋಗದಿಂದ ಮನವಿ
ಬಳ್ಳಾರಿ 19: ಜಿಲ್ಲೆಯ ಸರ್ಕಾರಿ ಶಾಲೆಗಳ ಕಟ್ಟಡಗಳನ್ನು ದುರಸ್ತಿಗೊಳಿಸಲು ಡಿಡಿಪಿಐ ಮಾನ್ಯ ಉಪನಿರ್ದೇಶಕರು ಉಮಾದೇವಿ ಅವರಿಗೆ ಎಐಡಿಎಸ್‌ಓ ನಿಯೋಗದ ವತಿಯಿಂದ ಮನವಿ ಸಲ್ಲಿಸಲಾಯಿತು. ಎಐಡಿಎಸ್‌ಓ ಜಿಲ್ಲಾ ಅಧ್ಯಕ್ಷರು ಕೆ. ಈರಣ್ಣ ಅವರು ಮಾತನಾಡಿ ಬಳ್ಳಾರಿ ಜಿಲ್ಲೆಯ ಹಲವು ಶಾಲೆ ಕಟ್ಟಡಗಳು ಬೀಳುವ ಹಂತದಲ್ಲಿದ್ದು ಮಕ್ಕಳ ಜೀವಕ್ಕೆ ಅಪಾಯ ಎಸಗುವಂತಹ ಪರಿಸ್ಥಿತಿಗೆ ಬಂದಿದೆ. ಕುರುಗೋಡು ತಾಲೂಕಿನ ಹರಿಕೃಪ ಎಂಬ ಕಾಲೋನಿಯಲ್ಲಿ ಶಾಲೆಯ ನೆಲ ಕೆಳಕ್ಕೆ ಕುಸಿದಿದೆ. ಆದರೂ ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ, ಇದರಿಂದಾಗಿ ಅಲ್ಲಿನ ಪೋಷಕರಿಗೆ ಮಕ್ಕಳನ್ನು ಶಾಲೆಗೆ ಕಳಿಸಲು ಆತಂಕವನ್ನುಂಟು ಮಾಡಿದೆ. ಜೊತೆಗೆ ತೆಕ್ಕಲಕೋಟೆಯ ಬಲಕುಂದಿ ಗ್ರಾಮದಲ್ಲಿ ಮಕ್ಕಳಿಗೆ ಕೊಠಡಿಗಳು ಇಲ್ಲದೇ ಬಯಲಲ್ಲೇ ಪಾಠಗಳನ್ನು ಹೇಳಿಕೊಡಲಾಗುತ್ತಿದೆ. ಇನ್ನೊಂದು ಬೆಳಗಲ್ ತಾಂಡ ಎಂಬ ಹಳ್ಳಿಯಲ್ಲಿ ಒಬ್ಬ ಬಾಲಕಿಯ ಮೇಲೆ ಶಾಲಾ ಕಟ್ಟಡದ ಹಕ್ಕಳ ಬಿದ್ದಿದೆ, ಅದೃಷ್ಟವಶ ಬಾಲಕಿ ಜೀವಪಾಯದಿಂದ ಪಾರಾಗಿದ್ದಾಳೆ. ಆದರೆ ಬಾಲಕಿಯ ಜೀವಕ್ಕೆ ತೊಂದರೆಯಾಗಿದ್ದರೆ ಈ ಜವಾಬ್ದಾರಿಯನ್ನು ಯಾರು ತೆಗೆದುಕೊಳ್ಳುತ್ತಾರೆ?. ಹೀಗೆ ಹಲವು ಹಳ್ಳಿಗಳ ಶಾಲೆಯಲ್ಲಿ ಬಿದ್ದು ಹೋಗಿರುವ ಅದೇ ಕೊಠಡಿಯಲ್ಲಿ ತರಗತಿಗಳು ನಡೆಯುತ್ತಿವೆ, ಜೊತೆಗೆ ಆ ಶಾಲಾ ಕಟ್ಟಡ ಎಲ್ಲಿ, ಯಾವಾಗ ಬೀಳುವುದೋ ಎಂಬ ವಿದ್ಯಾರ್ಥಿಗಳು , ಪೋಷಕರು ಹಾಗೂ ಶಿಕ್ಷಕರು ಆತಂಕದಲ್ಲಿದ್ದಾರೆ.. ಸರ್ಕಾರದಿಂದ ಶಾಲೆಗಳಿಗೆ ಸಿಗಬೇಕಾದ ಯಾವುದೇ ಸೌಲಭ್ಯಗಳಾದ ಸುವ್ಯವಸ್ಥಿತ ಕಟ್ಟಡ ಹಾಗೂ ಮೇಲ್ಚಾವಣಿ, ಅವಶ್ಯಕತೆಗೆ ತಕ್ಕಂತೆ ಶಿಕ್ಷಕರು, ಶೌಚಾಲಯ, ಹೀಗೆ ಹಲವು ಅನುಕೂಲಗಳು ಸಿಗದೇ ಈ ಪರಿಸ್ಥಿತಿಗೆ ಬಂದಿದೆ. ಸರ್ಕಾರದ ನಿರ್ಲಕ್ಷ್ಯಕ್ಕೆ ಮಕ್ಕಳ ಜೀವಗಳು ಬಲಿಯಾಗುವುದು ಅತ್ಯಂತ ದುಃಖಕರ. ಶಿಕ್ಷಣವನ್ನು ನಮ್ಮ ದೇಶದ ಹಲವು ಮಹಾನ್ ವ್ಯಕ್ತಿಗಳಾದ ಈಶ್ವರ್ ಚಂದ್ರ ವಿದ್ಯಾಸಾಗರ್, ಜ್ಯೋತಿ ಬಾ ಪುಲೆ, ಸಾವಿತ್ರಿ ಬಾಯಿ ಪುಲೆ, ಭಗತ್ ಸಿಂಗ್,ನೇತಾಜಿ ಸುಭಾಷ್ ಚಂದ್ರ ಬೋಸ್ ಈ ದೇಶದ ಮಕ್ಕಳಿಗೆ ಕೊಟ್ಟ ಹೋರಾಟದ ಬಳುವಳಿಯಾಗಿದೆ. ಈಗಲಾದರೂ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡಬೇಕೆಂದು ಎಐಡಿಎಸ್‌ಓ ವಿದ್ಯಾರ್ಥಿ ಸಂಘಟನೆ ಮನವಿ ಮಾಡಿಕೊಳ್ಳುತ್ತದೆ ಎಂದರು. ಬೇಡಿಕೆಗಳು:ಬಳ್ಳಾರಿ ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲೆಗಳನ್ನು ಸಂಪೂರ್ಣ ಅಭಿವೃದ್ಧಿ ಪಡಿಸಿ.ಈ ಕೂಡಲೇ ಜಿಲ್ಲೆಯ ಬೆಳಗಲ್ ತಾಂಡಾ, ಬಲಕುಂದಿ ಹಾಗೂ ಕುರುಗೋಡು ತಾಲೂಕಿನ ಹರಿಕೃಪ ಶಾಲೆಯ ಕಟ್ಟಡಗಳನ್ನು ದುರಸ್ತಿಗೊಳಿಸಿ, ಕಟ್ಟಡಗಳ ಸಂಖ್ಯೆ ಹೆಚ್ಚಿಸಿ.ಈ ಸಂದರ್ಭದಲ್ಲಿ ಎಐಡಿಎಸ್‌ಓ ಜಿಲ್ಲಾ ಉಪಾಧ್ಯಕ್ಷರು ಎಂ.ಶಾಂತಿ ಅವರು ಇದ್ದರು.