ಅಥಣಿ ತಾಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಬೇಕೆಂದು ಮನವಿ

ಲೋಕದರ್ಶನ ವರದಿ

ಅಥಣಿ 19: ತಾಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿ ತಿಂಗಳುಗಳೇ ಗತಿಸಿದರೂ, ರಾಜಕೀಯ ಡೊಂಬರಾಟದಲ್ಲಿ ತೊಡಗಿರುವ ನಾಯಕರು ಬರಪರಿಹಾರ ಕಾಮಗಾರಿಗಳ ಬಗ್ಗೆ ಕಿಂಚಿತ್ತು ಲಕ್ಷ ವಹಿಸದೇ ಇರುವುದು ದುರದೃಷ್ಟಕರ ಸಂಗತಿ ಎಂದು ಕರವೇ ಅಧ್ಯಕ್ಷ ಬಸನಗೌಡ ಪಾಟೀಲ (ಬಮ್ನಾಳ) ಆಕ್ರೋಶ ವ್ಯಕ್ತ ಪಡಿಸಿದರು. 

ಅವರು ಸ್ಥಳೀಯ ತಹಶೀಲ್ದಾರ ಎಮ್.ಎನ್. ಬಳಿಗಾರರಿಗೆ ಮನವಿ ಸಲ್ಲಿಸಿ ಪತ್ರಿಕೆಯೊಂದಿಗೆ ಮಾತನಾಡುತ್ತ, ಬರಗಾಲ ಪೀಡಿತ ಪ್ರದೇಶವೆಂಬ ಹಣೆಪಟ್ಟೆ ಕಟ್ಟಿಕೊಂಡಿರುವ ತಾಲೂಕಿನ ಪೂರ್ವ ಮತ್ತು ಉತ್ತರ ಭಾಗದ ಬಹುತೇಕ ಹಳ್ಳಿಗಳಲ್ಲಿ ದನ, ಕರುಗಳಿಗೆ ಕುಡಿಯಲು ನೀರಿಲ್ಲ, ಮೇವಿಲ್ಲ ಹೀಗಾಗಿ ಅವುಗಳನ್ನು ಕಸಾಯಿಖಾನೆಗೆ ಸಾಗಿಸಲಾಗುತ್ತಿದೆ, ಕೂಡಲೇ ತಾಲೂಕಾಡಳಿತ ಮತ್ತು ಜಿಲ್ಲಾಡಳಿತ ಕ್ರಮ ಜರುಗಿಸದೇ ಇದ್ದಲ್ಲಿ ಕರವೇ ಉಗ್ರವಾಗಿ ಪ್ರತಿಭಟಿಸುವುದೆಂದು ಎಚ್ಚರಿಕೆ ಕೂಡ ನೀಡಿದರು. 

ಅಗತ್ಯವಿದ್ದಲ್ಲಿ ಗಂಜಿ ಕೇಂದ್ರಗಳನ್ನು ಸ್ಥಾಪಿಸಿ, ಮಹಾರಾಷ್ಟ್ರಕ್ಕೆ ಗುಳೆ ಹೊರಟ ಗಡಿಭಾಗದ ಜನರಿಗೆ ಸೂಕ್ತ ಉದ್ಯೋಗಾವಗಾಶ ಕಲ್ಪಿಸುವಂತೆಯೂ ಕೂಡ ಒತ್ತಾಯಿಸಿದರು. ಒಂದು ವೇಳೆ ಈಗಲೂ ಕೂಡ ಅಧಿಕಾರಿಗಳು ಮತ್ತು ಸಕರ್ಾರ ನಮ್ಮ ಕರೆಗೆ ಸ್ಪಂಧಿಸದಿದ್ದಲ್ಲಿ ರಾಜ್ಯಪಾಲರ ಮೊರೆ ಹೋಗುವುದು ಅನಿವಾರ್ಯವಾಗುತ್ತದೆ ಎಂದೂ ಕೂಡ ಹೇಳಿದರು. 

ಈಗಾಗಲೇ ಎರಡು ಬಾರಿ ಸಾಂಗಲಿ ಜಿಲ್ಲಾಧಿಕಾರಿಗಳಿಗೆ ಮೈಶಾಳ - ತಾಕಾರಿ ಕಾಲುವೆಯ ಮುಖಾಂತರ ಈ ಭಾಗದಲ್ಲಿ ನೀರು ಹರಿಸುವಂತೆ ಆಗ್ರಹಿಸಿ ಮನವಿ ಸಲ್ಲಿಸಲಾಗಿದ್ದು, ಮತ್ತೊಮ್ಮೆ ಮಾನವಿಯತೆ ದೃಷ್ಟಿಯಿಂದ ಈ ಭಾಗದ ಸಮಸ್ಯೆಯನ್ನು ಅವರಿಗೆ ತಲುಪಿಸಿ ಕುಡಿಯಲು ನೀರು ಬಿಡುವಂತೆ ಪ್ರಯತ್ನಿಸುವುದಾಗಿ ಹೇಳಿದರು. 

ಈ ವೇಳೆ ಸಿ.ಪಿ.ಐ ಎಚ್. ಶೇಖರಪ್ಪ, ತಾ.ಪಂ. ಕಾರ್ಯನಿವರ್ಾಹಕ ಅಧಿಕಾರಿ ರವಿ ಬಂಗಾರೆಪ್ಪನವರ, ಪಿ.ಎಸ್.ಐ ಅವಟಿ, ಕರವೇ ಕಾರ್ಯಕರ್ತರಾದ ಸುಂದರ ಸೌದಾಗರ, ಮಂಜು ಹೋಳಿಕಟ್ಟಿ, ಜಿಲ್ಲಾ ಸಂಚಾಲಕ ಅನೀಲ ಸೌದಾಗರ, ಸಚಿನ ಪಾಟೀಲ, ಅಪ್ಪು ಪಾಟೀಲ, ಓಂಕಾರ ಇಂಗೋಲೆ ಸೇರಿದಂತೆ ಅನೇಕರು ಇದ್ದರು.