ರಿಪಬ್ಲಿಕ್ ಇಂಡಿಯಾ ಅಥವಾ ಭಾರತ ಗಣರಾಜ್ಯ ಕವನ ಸ್ಪರ್ಧೆ ಫಲಿತಾಂಶ

ರಿಪಬ್ಲಿಕ್ ಇಂಡಿಯಾ ಅಥವಾ ಭಾರತ ಗಣರಾಜ್ಯ ಕವನ ಸ್ಪರ್ಧೆ ಫಲಿತಾಂಶ  Republic India or Bharat Republikan Poetry Competition Result

         ಧಾರವಾಡ 27:  ಗಣಕರಂಗ ಸಂಸ್ಥೆಯು 77ನೇಯ ಗಣರಾಜ್ಯೋತ್ಸವ ಸಂದರ್ಭದಲ್ಲಿ ಆಯೋಜಿಸಿದ್ದ ’ರಿಪಬ್ಲಿಕ್ ಇಂಡಿಯಾ ಅಥವಾ ಭಾರತ ಗಣರಾಜ್ಯ’ ಶಿರ್ಷಿಕೆಯ ಕವಿಗೋಷ್ಠಿ ಮತ್ತು ಸ್ಪರ್ಧೆಯನ್ನು ಆನ್ ಲೈನ್ ಗೂಗಲ್ ಮೀಟ್ ದಲ್ಲಿ ಆಯೋಜಿಸಿತ್ತು. ಕವಿಗೋಷ್ಠಿಗೆ ಚಾಲನೆ ನೀಡಿ ಮಾತನಾಡಿದ ಕವಯಿತ್ರಿ ಭಾರತಿ ಬಡಿಗೇರ ಅವರು, ಕವನವೆಂಬುದು ಕೇವಲ ಶಬ್ದಾಡಂಭರವಾಗಿರದೆ ಸಮಾಜದ ಓರೆಕೋರೆಗಳನ್ನು ಎತ್ತಿತೋರಿಸಿ ತಿದ್ದುವಂತಿರಬೇಕು. ಆನಲೈನ್ ಎಂಬ ಆಕಾಶದಲ್ಲಿ ಕಾವ್ಯದ ಹಕ್ಕಿಗಳನ್ನು ಹಾರಿಸಿದ ಗಣಕರಂಗ ಸಂಸ್ಥೆಯ ಪ್ರಯತ್ನವು ಎಲ್ಲರೂ ಮೆಚ್ಚುವಂಥದ್ದು.

           ಸಾಹಿತ್ಯ ಮತ್ತು ತಂತ್ರಜ್ಞಾನವನ್ನು ಬೆಸೆಯುವ ಆಧುನಿಕ ಕಾಲದ ಅಭಿರುಚಿಯ ವಿಸ್ತರಣೆಯು ಯಶಸ್ವಿಯಾಗಲೆಂದು ಹಾರೈಸುವೆನು. ಸಾಹಿತ್ಯಾಭಿರುಚಿಯ ಹೊಸಬರಿಗೆ ಅವಕಾಶ ಕೊಟ್ಟು ಅವರ ಪ್ರತಿಭಾ ವಿಕಸನಕ್ಕೆ ವೇದಿಕೆ ಒದಗಿಸುವ ಗಣಕರಂಗ ಹಿಂದಿರುವ ಎಲ್ಲಾ ಪ್ರೋತ್ಸಾಹಕ ಮನಸ್ಸುಗಳಿಗೆ ಶರಣಾರ್ಥಿಗಳು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ನಾಡಿನ ವಿವಿಧ ಭಾಗಗಳಿಂದ ಭಾಗವಹಿಸಿದ್ದ ಸುಮಾರು ಐವತ್ತಕ್ಕಿಂತಲೂ ಹೆಚ್ಚು ಕವಿಗಳು ಸ್ವರಚಿತ ಕವನ ವಾಚಿಸಿದರು. ಆರಂಭದಲ್ಲಿ ಕವಯಿತ್ರಿ ಸುಧಾ ಕಬ್ಬೂರ ಪ್ರಾರ್ಥಿಸಿದರು. ಸ್ಪರ್ಧೆಯ ಸಂಯೋಜಕ ಗಣಪತಿ ಗೋ ಚಲವಾದಿ ಸರ್ವರನ್ನು ಸ್ವಾಗಿತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕವಿಗೋಷ್ಠಿಯ ಕೊನೆಯಲ್ಲಿ ಸ್ಪರ್ಧಾ ಸಮಿತಿಯ ಅಧ್ಯಕ್ಷ ಸಿದ್ಧರಾಮ ಹಿಪ್ಪರಗಿಯವರು  ಫಲಿತಾಂಶ ಪ್ರಕಟಿಸಿರು.

           ಒಂದು ಸಾವಿರ ನಗದು, ಪುಸ್ತಕ, ಪ್ರಮಾಣಪತ್ರವನ್ನೊಳಗೊಂಡ ಪ್ರಥಮ ಬಹುಮಾನಕ್ಕೆ ವಿಜಯನಗರ ಜಿಲ್ಲೆಯ ಕಮಲಾಪುರದ ಡಾ.ಸಂಧ್ಯಾ ಎಚ್‌.ಎಸ್‌. ಮತ್ತು ಐನೂರು ರೂಪಾಯಿ ನಗದು, ಪುಸ್ತಕ, ಪ್ರಮಾಣಪತ್ರವನ್ನೊಳಗೊಂಡ ದ್ವಿತೀಯ ಬಹುಮಾನಕ್ಕೆ ಧಾರವಾಡದ ರಾಚಮ್ಮ ಬಿ.ಸ್ವಾಮಿ ಮತ್ತು ಇನ್ನೂರೈವತ್ತು ರೂಪಾಯಿ ನಗದು ಹಣ, ಪುಸ್ತಕ, ಪ್ರಮಾಣಪತ್ರವನ್ನೊಳಗೊಂಡ ತೃತೀಯ ಬಹುಮಾನಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕದ ರಾಜೇಶ್ವರಿ ಸುವರ್ಣ ಅವರು ವಿಜೇತರಾದರು. ಹಾಸನದ ಕುಮಾರ ಚಲವಾದಿ, ಹಿರೇಕೆರೂರಿನ ಹಾಲೇಶ ನಾಯಕ, ಹುಬ್ಬಳ್ಳಿಯ ಪದ್ಮಾ ಉಮರ್ಜಿ, ಬೆಳಗಾವಿಯ ಡಾ.ಸುನೀಲ ಪರಿಟ, ಕೊಡಗಿನ ಚರಿತ್ರ ಎಂ.ಆರ್‌., ಬಾಳೆಕುಂದ್ರಿಯ ಮಲಪುರಿ ಅರುಣ ಮಗದುಮ್ಮ ಮತ್ತು ವಿಜಯನಗರ ಜಿಲ್ಲೆಯ ಹಂಪಸಾಗರದ ಜಗದೀಶ ಟಿ. ಮುಂತಾದ ಏಳು ಕವಿಗಳು ತೀಪುಗಾರರ ಮೆಚ್ಚುಗೆ ಬಹುಮಾನ ವಿಜೇತರಾದರು. ಸಿದ್ಧರಾಮ ಹಿಪ್ಪರಗಿ ಕಾರ್ಯಕ್ರಮವನ್ನು ನಿರ್ವಹಿಸಿ, ಭಾಗವಹಿಸಿದ ಎಲ್ಲರಿಗೂ ವಂದನೆಗಳನ್ನು ತಿಳಿಸಿದರು. ಬಹುಮಾನಿತರಿಗೆ ಮತ್ತು ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರವನ್ನು ಅಂಚೆಯ ಮೂಲಕ ಕಳಿಸಲಾಗುವುದು ಎಂದು ಮಾಹಿತಿ ನೀಡಿದರು.   ಧನ್ಯವಾದಗಳು.