ಧರ್ಮ-ಸಂಸ್ಕೃತಿ ಮುಂದಿನ ಜನಾಂಗಕ್ಕೆ ಉಳಿಸಿ-ಬೆಳೆಸಿ...
ವಿಜಯಪುರ 02: ಇಡೀ ಜಗತ್ತಿನಲ್ಲಿಯೇ ಧಾರ್ಮಿಕ ಪರಂಪರೆ-ಆಚರಣೆ, ಸಂಪ್ರದಾಯ ಮತ್ತು ಸಂಸ್ಕೃತಿ-ಸಂಸ್ಕಾರಕ್ಕೆ ಹೆಸರುವಾಸಿಯಾದ ರಾಷ್ಟ್ರ ನಮ್ಮದು. ಸಾಂಸ್ಕೃತಿಕ ನೆಲೆವೀಡು ನಮ್ಮ ರಾಷ್ಟ್ರ. ಹಲವು ಧರ್ಮ, ಸಂಪ್ರದಾಯ, ಆಚರಣೆ, ಭಾಷೆ, ಸಂಸ್ಕೃತಿ ಬೇರೆ ಬೇರೆಯಾದರೂ ಅಖಂಡತೆ ಮತ್ತು ವಿವಿಧತೆಯಲ್ಲಿ ಏಕತೆ ಎಂಬುದನ್ನು ತೋರಿಸಿಕೊಟ್ಟ ದೇಶ ನಮ್ಮದು. ನಾವೆಲ್ಲರೂ ಇಲ್ಲಿ ನಾವೆಲ್ಲರೂ ಒಂದು ಎಂಬ ಸದ್ಭಾವದಿಂದ ಬದುಕುತ್ತಿದ್ದೇವೆ. ಪರಸ್ಪರ ಸಹೋದರತೆ-ಭ್ರಾತೃತ್ವದೊಂದಿಗೆ ಒಂದೆಡೆ ಎಲ್ಲ ಧರ್ಮಿಯರು ಶಾಂತಿಯುತ ಜೀವನ ನಡೆಸಲು ಆಶ್ರಯ ನೀಡಿದ ಪವಿತ್ರ ದೇಶ ನಮ್ಮದಾಗಿದೆ. “ಯತ್ರ ನಾರೇಶು ಪೂಜ್ಯಂತೇ ತತ್ರ ರಮಂತೇ ದೇವತಾ:” ಎಂಬ ಸಂಸ್ಕೃತ ಶ್ಲೋಕದಂತೆ ಎಲ್ಲಿ ಸ್ತ್ರೀಯನ್ನು ಪೂಜ್ಯನೀಯ ಮತ್ತು ಗೌರವಯುತ ಭಾವನೆಯಿಂದ ಕಾಣುತ್ತಾರೋ ಅಲ್ಲಿ ಸ್ವತ: ದೇವತೆಗಳೇ ಬಂದು ನೆಲೆಸುತ್ತಾರೆ ಎಂಬ ಪ್ರತೀತಿಯಿದೆ. ಅದಕ್ಕಾಗಿ ನಮ್ಮ ತಾಯಂದಿರು ಮಕ್ಕಳಲ್ಲಿ ಧಾರ್ಮಿಕ-ಸಾಮಾಜಿಕ, ನಮ್ಮ ಪರಂಪರೆ-ಸಂಪ್ರದಾಯ, ಆಚಾರ-ವಿಚಾರ, ಸಂಸ್ಕೃತಿ-ಸಂಸ್ಕಾರಗಳನ್ನು ಒಡಮೂಡಿಸುವ ಕಾರ್ಯ ಮಾಡಬೇಕು. ಅಂದಾಗ ಮಾತ್ರ ಮುಂದಿನ ಜನಾಂಗವು ನಮ್ಮ ಧಾರ್ಮಿಕ ಸಂಪ್ರದಾಯ-ವಿಧಿವಿಧಾನಗಳನ್ನು ಉಳಿಸಿ-ಬೆಳೆಸಲು ಸಾಧ್ಯ ಎಂದು ಸೇನಾ ನಗರದ ಲಕ್ಷ್ಮೀ ದೇವಸ್ಥಾನ ಅಧ್ಯಕ್ಷೆ ಶಾಂತಾ ಕಪಾಳೆ ಅವರು ಸಲಹೆ ನೀಡಿದರು.
ಅವರು ನಗರದ ಅಥಣಿ ರಸ್ತೆಯಲ್ಲಿರುವ ಅಲ್-ಅಮೀನ್ ಆಸ್ಪತ್ರೆ ಎದುರಿಗೆ ಇರುವ ಎನ್.ಜಿ.ಓ ಕಾಲನಿಯಲ್ಲಿ ಜೈ ಆಂಜನೇಯ ದೇವಸ್ಥಾನದ 5 ನೇಯ ವರ್ಷದ ಜಾತ್ರಾ ಮಹೋತ್ಸವದಲ್ಲಿ ಗೋ ಮಾತೆ ಮತ್ತು ಬನ್ನಿ ಮಹಾಂಕಾಳಿ ಪೂಜೆ ಸಲ್ಲಿಸುವದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಮುಖ್ಯ ಅತಿಥಿಗಳಾದ ಕಲ್ಪನಾ ರಜಪೂತ ಅವರು ಮಾತನಾಡುತ್ತಾ, ಬದುಕು ಸಂಕೀರ್ಣಮಯವಾಗುತ್ತಿರುವ ಇಂದಿನ ಕಾಲದಲ್ಲಿ ಮನುಷ್ಯ ಏನೆಲ್ಲ ಗಳಿಸಿದರೂ ಮನಸ್ಸಿಗೆ ಶಾಂತಿ ಇಲ್ಲದಂತಾಗಿದೆ. ಹನುಮಂತ-ರಾಮನ ನಡುವಿನ ಗುರು-ಶಿಷ್ಯರ ಅವಿನಾವ ಸಂಬಂಧ ಮತ್ತು ದೈವಿಭಕ್ತಿಯೇ ನಮ್ಮೆಲ್ಲರಿಗೆ ಆದರ್ಶವಾಗಬೇಕು. ಧಾರ್ಮಿಕ ಮತ್ತು ಪವಿತ್ರ ತಾಣಗಳಾದ ದೇವಸ್ಥಾನಗಳಲ್ಲಿ ಪೂಜಾ ಕೈಂಕರ್ಯ, ಧಾರ್ಮಿಕ ಸಂಪ್ರದಾಯ-ಪದ್ಧತಿ, ಪ್ರವಚನ, ಕೀರ್ತನೆ, ಭಜನೆ ಮತ್ತು ಎಲ್ಲರೂ ಸೇರಿ ಜಾತ್ರಾ ಮಹೋತ್ಸವ ಆಚರಿಸುವದರಿಂದ ನಮಗೆಲ್ಲ ಸುಖ,ಶಾಂತಿ, ಮನಸ್ಸಿಗೆ ನೆಮ್ಮದಿ ಸೊರೆಯುತ್ತದೆ ಎಂದರು. ಎನ್.ಜಿ.ಓ ಕಾಲನಿಯ ಈ ದೇವಸ್ಥಾನದಲ್ಲಿ ಪ್ರತಿ ವಾರ ಹನುಮಾನ ಚಾಲೀಸ್ ಪಠಣ, ಭಜನೆ, ಗಾಯನ, ಕೀರ್ತನೆ ಮತ್ತು ಸತ್ಸಂಗದಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ವಿಜಯಪುರ ನಗರದ ಮಾದರಿ ಬಡಾವಣೆಯಾಗಿದೆ ಎಂದರು.
ಸಮಾರಂಭದ ನಂತರ ಬನ್ನಿ ಮಹಾಂಕಾಳಿ ಉಡಿ ತುಂಬುವದರೊಂದಿಗೆ ಸುಮಾರು 300 ಕ್ಕೂ ಹೆಚ್ಚು ಸುಮಂಗಲೆಯರು ಉಡಿ ತುಂಬುವ ಕಾರ್ಯಕ್ರಮದಲ್ಲಿ ಭಾಗವಹಿಸಿ ನಮ್ಮ ಭಾರತೀಯ ಸಂಸ್ಕೃತಿಯನ್ನು ಅಭಿವ್ಯಕ್ತಿಗೊಳಿಸಿದರು.
ಭಾರತಿ ಪಾಟೀಲ ಪ್ರಾರ್ಥನಾ ಗೀತೆ ಪ್ರಚುರಪಡಿಸಿದರು. ಪ್ರೊ. ಎಂ.ಎಸ್.ಖೊದ್ನಾಪೂರ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ಆರ್.ಬಿ.ಕುಮಟಗಿ ವಂದಿಸಿದರು.
ಸಮಾರಂಭದಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ಸಂತೋಷ ಪಾಟೀಲ, ಎಂ.ಆರ್.ಪಾಟೀಲ, ಸಂಗಣ್ಣ ತೆನಿಹಳ್ಳಿ, ಬಾಬು ಕೋಲಕಾರ, ಶಂಕರ ಪೂಜಾರಿ, ಅಶೋಕ ಪಾಟೀಲ, ಭೀಮರಾಯ ಬಿರಾದಾರ, ಎಸ್.ಎನ್.ನಿಂಗನಗೌಡ್ರ, ಶ್ರೀಶೈಲ ಮಠಪತಿ, ವೆಂಕಟೇಶ್ ಹೊಸಮನಿ, ಸುರೇಶ ಹಲಕುಡೆ, ಶಕುಂತಲಾ ಅಂಕಲಗಿ, ಉಮಾ ತೊಡಕೆ, ಅಂಜನಾ ಪೋತದಾರ, ಇನ್ನಿತರರು ಸಹ ಉಪಸ್ಥಿತರಿದ್ದರು. ಸುತ್ತಮುತ್ತಲಿನ ಬಡಾವಣೆಯ ಎಲ್ಲ ನೂರಾರು ಮಕ್ಕಳು, ಮಹಿಳೆಯರು, ಹಿರಿಯರು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.