24 ನೇ ಮಹಾಅಧಿವೇಶನದ ರಾಜಕೀಯ ಕರುಡು ವರದಿ ಬಿಡುಗಡೆ
ಗಜೇಂದ್ರಗಡ: ಫೆ: 17; ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಅಕಋ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟಿರುವ ಪಕ್ಷವಾಗಿದೆ. ರಾಜಕೀಯ ವ್ಯವಸ್ಥೆಯ ಪ್ರಜಾಪ್ರಭುತ್ವ ಮಾತ್ರವಲ್ಲದೆ, ಪಕ್ಷದ ಆಂತರಿಕ ವಿಚಾರಗಳಲ್ಲೂ ನಿಜವಾದ ಅರ್ಥದಲ್ಲಿ ಪ್ರಜಾಪ್ರಭುತ್ವವನ್ನು ಅಳವಡಿಸಿಕೊಂಡಿದೆ ಎಂದು ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಚಂದ್ರ್ಪ ಹೊಸ್ಕೊರ ತಿಳಿಸಿದರು. ನಗರದ ಸೇವಾಲಾಲ ಕಲ್ಯಾಣ ಮಂಟಪದಲ್ಲಿ ನಡೆದ, ಇದೇ ಎಪ್ರೀಲ್ 2ರಿಂದ 6 ರವರೆಗೆ ಮದುರೈ ನಲ್ಲಿ ನಡೆಯಲಿರುವ ಸಿಪಿಐಎಂ ಪಕ್ಷದ 24 ನೇ ಮಹಾಅಧಿವೇಶನದ ರಾಜಕೀಯ ಕರುಡು ವರದಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಪ್ರತಿ 3 ವರ್ಷಗಳಿಗೊಮ್ಮೆ ಪಕ್ಷದ ಎಲ್ಲಾ ಹಂತದ ಸಮ್ಮೇಳನಗಳು ಶಾಖೆಯ ಹಂತದಿಂದ ಅಖಿಲ ಭಾರತದ ಹಂತದವರೆಗೆ ನಡೆಯುತ್ತವೆ. ಪಕ್ಷದ ಮಹಾಧಿವೇಶನ ನಡೆಯುವ 2 ತಿಂಗಳ ಮುಂಚೆ ಪಕ್ಷದ ಕೇಂದ್ರಸಮಿತಿಯು ರಾಜಕೀಯ ನಿರ್ಣಯದ ಕರಡೊಂದನ್ನು ಲಿಖಿತವಾಗಿ ಬಿಡುಗಡೆ ಮಾಡುತ್ತದೆ. ಈ ಕರಡಿನಲ್ಲಿ ಕಳೆದ ಮೂರು ವರ್ಷಗಳಲ್ಲಿ ದೇಶ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಆಗಿರುವ ರಾಜಕೀಯ, ಸಾಮಾಜಿಕ, ಆರ್ಥಿಕ ಬೆಳವಣಿಗೆಗಳ ವಿಶ್ಲೇಷಣೆ ಮತ್ತು ಮುಂದಿನ 3 ವರ್ಷಗಳಿಗೆ ನಾವು ಕೈಗೊಳ್ಳಬಹುದಾದ ನಿಲುವುಗಳ ಕುರಿತು ವಿವರವಾಗಿ ಚರ್ಚಿಸಲಾಗಿರುತ್ತದೆ. ಈ ಕರಡನ್ನು ದೇಶದಲ್ಲಿರುವ ಸಿಪಿಐಎಂ ನ ಎಲ್ಲಾ ಸದಸ್ಯರು ತಮ್ಮ ಶಾಖೆ ಮತ್ತು ಸಮಿತಿಗಳಲ್ಲಿ ಓದಿ, ಚರ್ಚಿಸಿ ಅದರ ಕುರಿತು ತಮ್ಮ ಸ್ಥಳೀಯ ಅನುಭವದ ಆಧಾರದ ಮೇಲೆ ಸಲಹೆ, ತಿದ್ದುಪಡಿಗಳನ್ನು ಸೂಚಿಸುತ್ತಾರೆ. ಇದು ಕೇವಲ ಪಕ್ಷದ ಸದಸ್ಯರುಗಳಿಗೆ ಮಾತ್ರವಲ್ಲದೆ. ಇದೇ ಕರಡನ್ನು ಬಹಿರಂಗವಾಗಿಯೂ ಬಿಡುಗಡೆ ಮಾಡಿ ಸಾರ್ವಜನಿಕರೂ ಇದನ್ನು ಓದಿ ತಮ್ಮ ಅಭಿಪ್ರಾಯಗಳನ್ನು ನೀಡಲು ಅವಕಾಶಗಳನ್ನು ಕಲ್ಪಿಸಲಾಗಿದೆ. ಈ ಎಲ್ಲಾ ತಿದ್ದುಪಡಿಗಳ ಕುರಿತು ಪಕ್ಷದ ಮಹಾಧಿವೇಶನಕ್ಕೆ ಆಯ್ಕೆಯಾದ ಪ್ರತಿನಿಧಿಗಳು ಚರ್ಚಿಸಿ ಕರಡನ್ನು ಅಂತಿಮಗೊಳಿಸುತ್ತಾರೆ. ಇದರ ಆಧಾರದಲ್ಲೇ ಸಿಪಿಐಎಂ ಮುಂದಿನ 3 ವರ್ಷಗಳು ಕೆಲಸ ಮಾಡುತ್ತದೆ ಎಂದರು. ಈ ವೇಳೆ ಪಕ್ಷದ ಹಿರಿಯ ಮುಖಂಡ ಜಿ.ನಾಗರಾಜ್, ಜಿಲ್ಲಾ ಕಾರ್ಯದರ್ಶಿ ಬಾಲು ರಾಠೋಡ, ಶಾಖಾ ಕಾರ್ಯದರ್ಶಿ ದಾವಲಸಾಬ ತಾಳಿಕೋಟಿ, ಮೆಹಬೂಬ್ ಹವಾಲ್ದಾರ್, ಪೀರು ರಾಠೋಡ, ಚೆನ್ನಪ್ಪ ಗುಗಲೋತ್ತರ, ಚಂದ್ರು ರಾಠೋಡ, ಗಣೇಶ ರಾಠೋಡ, ರೇಣಪ್ಪ ಕಲ್ಗುಡಿ, ಕರಿಯಮ್ಮ ಗುರಿಕಾರ, ನಜೀರ ಮಾಲ್ದಾರ, ಶಿವಾಜಿ ಗಡ್ಡದ, ಸೇರಿದಂತೆ ಪಕ್ಷದ ಸದಸ್ಯರು ಪಾಲ್ಗೊಂಡಿದ್ದರು.