ಅಜಾಗರೂಕ ಚಾಲನೆಯು ಅಪಾಯದೊಂದಿಗೆ ಜೀವಹಾನಿ: ಜಿಲ್ಲಾಧಿಕಾರಿ ದೀಪಾ ಚೋಳನ್ ಎಚ್ಚರಿಕೆ |

ಧಾರವಾಡ 13: ಅಜಾಗರೂಕ ಚಾಲನೆಯು ಅಪಾಯದೊಂದಿಗೆ ಜೀವಹಾನಿಗೂ ಕಾರಣವಾಗುತ್ತದೆ. ಯಾವುದೇ ರೀತಿಯ ವಾಹನ ಚಾಲನೆ ಮಾಡುವಾಗ ಸುರಕ್ಷಿತ ಚಾಲನೆ, ರಸ್ತೆ ನಿಯಮಗಳನ್ನು ತಪ್ಪದೇ ಪಾಲಿಸಬೇಕು. ಈ ಕುರಿತು ಪ್ರತಿಯೊಬ್ಬರು ಜಾಗೃತರಾಗಿ, ಇತರರಿಗೂ ಜಾಗೃತಿ ಮೂಡಿಸಬೇಕೆಂದು ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.

ಅವರು ಇಂದು ಬೆಳಿಗ್ಗೆ ಜೆಎಸ್ಎಸ್ ಮಹಾವಿದ್ಯಾಲಯದ ಉತ್ಸವ ಸಭಾಭವನದಲ್ಲಿ ಜಿಲ್ಲಾಡಳಿತ, ಸಾರಿಗೆ, ಪೊಲೀಸ್ ಹಾಗೂ ಸಮಿತಿಯ ಎಲ್ಲ ಪಾಲುದಾರ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ 31ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಉದ್ಘಾಟನೆ ನೆರವೇರಿಸಿ, ಮಾತನಾಡಿದರು.

ಪ್ರಸಕ್ತ ಸಾಲಿನ ರಸ್ತೆ ಸುರಕ್ಷತಾ ಸಪ್ತಾಹವನ್ನು "ಯುವ ಬಲದಿಂದಲೇ ಬದಲಾವಣೆ ಸಾಧ್ಯ ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಇಂದಿನ ಯುವ ಸಮುದಾಯಕ್ಕೆ ರಸ್ತೆ-ಸಂಚಾರ ನಿಯಮಗಳು ತಿಳಿದಿದ್ದರೂ ಸಹ ಅಪಾಯಕರವಾಗಿ ವಾಹನ ಚಾಲನೆ ಮಾಡಿ, ಅಪಘಾತಕ್ಕೆ ಕಾರಣರಾಗುತ್ತಾರೆ. ತಮ್ಮ ಜೀವದೊಂದಿಗೆ ಇತರರ ಪ್ರಾಣ ಹಾನಿಗೆ ಕಾರಣರಾಗುತ್ತಾರೆ.

ಯುವಕ ಹಾಗೂ ಮಧ್ಯಮ ವಯಸ್ಕರು ವಾಹನ ಚಾಲನೆ ಮಾಡುವಾಗ ಸಂಚಾರಿ ನಿಯಮ ಪಾಲಿಸಿದರೆ ಶೇಕಡಾವಾರು ಅಪಘಾತಗಳನ್ನು ತಪ್ಪಿಸಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಚಾಲನೆ ಮಾಡುವಾಗ ಬಹುಮುಖ್ಯವಾಗಿ ಹೆಲ್ಮೆಟ್ ಧಾರಣೆ, ಸೀಟ್ಬೆಲ್ಟ್, ಮೊಬೈಲದಲ್ಲಿ ಮಾತನಾಡದಿರುವುದು ಮತ್ತು ಮದ್ಯಪಾನ ಮಾಡಿ ವಾಹನ ಚಾಲನೆ ಮಾಡದಿರುವುದನ್ನು ಎಲ್ಲರೂ ಪಾಲಿಸಬೇಕು ಎಂದು ಅವರು ತಿಳಿಸಿದರು.

ಸಾರಿಗೆ ಇಲಾಖೆ ಬೆಳಗಾವಿ ವಿಭಾಗದ ಜಂಟಿ ಆಯುಕ್ತರಾದ ಜೆ. ಪುರುಷೋತ್ತಮ್ ಅವರು ಮಾತನಾಡಿ, ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಆಚರಣೆಯ ಉದ್ದೇಶ ಚಾಲಕರಲ್ಲಿ ಮತ್ತು ಸಾರ್ವಜನಿಕರಲ್ಲಿ ರಸ್ತೆ-ಸಂಚಾರಿ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವುದು. ವಾರದ ಏಳು ದಿನ ವಿವಿಧ ಇಲಾಖೆಗಳ ಸಹಯೋಗದಲ್ಲಿ ಸಪ್ತಾಹದ ಅಂಗವಾಗಿ ವಿವಿಧ ರೀತಿಯ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು. ಶೇಕಡಾ 70  ರಷ್ಟು ಅಪಘಾತಗಳು ಮಾನವನ ತಪ್ಪಿನಿಂದ ಆಗುತ್ತಿವೆ. ಶೇಕಡಾ 30 ರಷ್ಟು ರಸ್ತೆ ಸಮಸ್ಯೆ ಹಾಗೂ ಇನ್ನಿತರ ತಪ್ಪಿನಿಂದ ಅಪಘಾತಗಳು ಸಂಭವಿಸುತ್ತಿವೆ. ಅಂದರೆ ನಾವು ಸರಿಯಾಗಿ ರಸ್ತೆ ನಿಯಮಗಳನ್ನು ಪಾಲಿಸುತ್ತಿಲ್ಲ ಎಂಬುದು ಇದರಿಂದ ತಿಳಿಯುತ್ತದೆ ಎಂದರು. 

ಪ್ರತಿಯೊಬ್ಬರ ಜೀವಕ್ಕೆ ನಾವು ಗೌರವ ನೀಡಬೇಕು. ವಾಹನ ಚಾಲನೆ ಮಾಡುವಾಗ ರಸ್ತೆ ನಿಯಮಗಳನ್ನು ಗೌರವಿಸಿ, ಸುತ್ತಮುತ್ತಲಿನ ಜನರನ್ನು ನೋಡಿ ವಾಹನ ಚಾಲನೆ ಮಾಡುವುದು ಉತ್ತಮ. ಹಾಗೆಯೇ ಸಂಚಾರಿ ಕಾನೂನು, ನಿಯಮಗಳನ್ನು ಪಾಲಿಸಿಬೇಕು ಎಂದು ತಿಳಿಸಿದರು. 

ಸಹಾಯಕ ಪೊಲೀಸ್ ಆಯುಕ್ತ ಎಸ್.ಎಮ್. ಸಂದಿಗವಾಡ ಮಾತನಾಡಿ, ಇಂದಿನ ದಿನಗಳಲ್ಲಿ ಎರಡು ಚಕ್ರದ ವಾಹನಗಳ ಅಪಘಾತಗಳು ಅಧಿಕವಾಗಿ, ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ. ರಸ್ತೆ ಸುರಕ್ಷತೆಯ ಬಗ್ಗೆ ನಾವು ತುಂಬಾ ಜಾಗೃತರಾಗಬೇಕು. ಹಾಗೂ ಕಾನೂನು ನಿಯಮಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಬೇಕು ಎಂದು ಹೇಳಿದರು. 

ಜೆ.ಎಸ್.ಎಸ್ ಕಾಲೇಜಿನ ಪ್ರಾಚಾರ್ಯ ಕೃಷ್ಣಮೂರ್ತಿ  ಮಾತನಾಡಿ, ರಸ್ತೆ ಸುರಕ್ಷತೆಯ ಬಗ್ಗೆ ವಿದ್ಯಾರ್ಥಿ ಗಳಿಗೆ ಸಲಹೆ ನೀಡಿದರು. 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿ ಕಾ ಕಟೀಯಾರ್, ಜೆ.ಎಸ್.ಎಸ್. ಸಂಸ್ಥೆಯ ಮಹಾವೀರ ಉಪಾಧ್ಯಾಯ, ಎನ್ಡಬ್ಲ್ಯೂಕೆಎಸ್ಆರ್ಟಿಸಿಯ ವಿಭಾಗೀಯ ನಿಯಂತ್ರಣಾಧಿಕಾರಿ ಬಸಲಿಂಗಪ್ಪ ವೇದಿಕೆಯಲ್ಲಿದ್ದರು.

ಅಪರ ಸಾರಿಗೆ ಆಯುಕ್ತ ಮಾರುತಿ ಸಾಂಬ್ರಾಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿದರು. 

ಧಾರವಾಡ ಪೂರ್ವ ವಿಭಾಗದ ಆರ್ಟಿಓ ಅಧಿಕಾರಿ ಅಪ್ಪಯ್ಯ ನಲ್ವತ್ವಾಡಮಠ ಸ್ವಾಗತಿಸಿದರು. ಪಶ್ಚಿಮ ವಿಭಾಗದ ಆರ್ಟಿಓ ಅಧಿಕಾರಿ ಸಿ.ಡಿ. ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಾಪಕ ಆರ್.ವ್ಹಿ. ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಪ್ರಾದೇಶಿಕ ಸಾರಿಗೆ ಇಲಾಖೆ ಸಿಬ್ಬಂದಿ  ಜಿ.ವಿ. ದೀನಮಣಿ ವಂದಿಸಿದರು. 

ರಸ್ತೆ ಸುರಕ್ಷತಾ ನಿಯಮ ಪಾಲನೆಗಳ ಜಾಗೃತಿಗಾಗಿ ಸಾರಿಗೆ ಇಲಾಖೆ ಹಾಗೂ ವಾರ್ತಾ  ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ತಯಾರಿಸಿದ್ದ ಕರಪತ್ರ, ಪೋಸ್ಟರ್ ಹಾಗೂ ಸ್ಟಿಕರ್ಗಳನ್ನು ಮತ್ತು ಸಾಕ್ಷ್ಯಚಿತ್ರವನ್ನು ಜಿಲ್ಲಾಧಿಕಾರಿ ದೀಪಾ ಚೋಳನ್ ಹಾಗೂ ಅಧಿಕಾರಿಗಳು ಸಮಾರಂಭದಲ್ಲಿ ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಕಾಲೇಜಿನ ವಿದ್ಯಾರ್ಥಿ ಗಳು, ಸಾರ್ವಜನಿಕರು ಭಾಗವಹಿಸಿದ್ದರು.