ಜನಮನದ ಜನತಾ ಬ್ಯಾಂಕು ಲಿಂ.ಬಿ.ಆರ್.ಪಾಟೀಲರ ಸಮರೆ್ಣಯ ಸಾಕ್ಷಾತ್ಕಾರ
ಹಾರೂಗೇರಿ 17: ಜನತಾ ಬ್ಯಾಂಕು ಸಮಾಜಮುಖಿಯಾಗಿ ಕೆಲಸ ಮಾಡುತ್ತಿದ್ದು, ಎಲ್ಲ ವರ್ಗದ ಜನರಿಗೆ ಆರ್ಥಿಕ ಸಹಾಯ ಮಾಡುತ್ತ ಗ್ರಾಹಕರಲ್ಲಿ ನಮ್ಮ ಬ್ಯಾಂಕು ಎಂಬ ಭಾವನೆಯನ್ನು ಹುಟ್ಟುಹಾಕಿದೆ. ಜನಮನದ ಜನತಾ ಬ್ಯಾಂಕು ಲಿಂ.ಬಿ.ಆರ್.ಪಾಟೀಲರ ಸಮರೆ್ಣಯ ಸಾಕ್ಷಾತ್ಕಾರವೆಂದು ಅಧ್ಯಕ್ಷ ರಾಜಶೇಖರ ಪಾಟೀಲರು ಹೇಳಿದರು.
ಪಟ್ಟಣ ಜನತಾ ಸಹಕಾರ ಬ್ಯಾಂಕಿನ ಪ್ರಧಾನ ಕಚೇರಿಯ ಸಭಾಭವನದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಬ್ಯಾಂಕಿನ ಆಡಳಿತ ಮಂಡಳಿಯು ಸ್ವಹಿತಾಸಕ್ತಿಗಿಂತ ಬ್ಯಾಂಕಿನ ಏಳಿಗೆ ಜೊತೆಗೆ ಗ್ರಾಹಕರ ಹಿತವನ್ನೇ ಬಯಸುತ್ತಿರುವುದರಿಂದ ಜನತಾ ಬ್ಯಾಂಕು ಇಂದು ಸರ್ವ ಗ್ರಾಹಕರ ಹೃದಯ ಗೆದ್ದಿದೆ. ರಿಸರ್ವ ಬ್ಯಾಂಕಿನ ಬದಲಾದ ನಿಯಮಾವಳಿಗಣುಗುಣವಾಗಿ 8 ವರ್ಷಕ್ಕೊಮ್ಮೆ ಸ್ಥಾನಪಲ್ಲಟಗೊಳ್ಳುತ್ತವೆ. ಬ್ಯಾಂಕಿನ ಅಧ್ಯಕ್ಷರಾಗಿ ಯಾರೇ ಅಧಿಕಾರ ವಹಿಸಿಕೊಂಡರೂ ಬ್ಯಾಂಕಿನ ಗ್ರಾಹಕರು, ಆಡಳಿತ ಮಂಡಳಿ ಮತ್ತು ಸಿಬ್ಬಂದಿಯವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮರ್ಥವಾಗಿ ಮುನ್ನಡೆಸಲಿದ್ದಾರೆ.
ಜನತಾ ಬ್ಯಾಂಕಿನ ಕನಸುಗಾರ ಬಿ.ಆರ್.ಪಾಟೀಲರು ಬದುಕಿರುವವರೆಗೂ ಅದರ ಅಧ್ಯಕ್ಷರಾಗಿದ್ದರು. 1990 ರಲ್ಲಿ ಹೃದಯಾಘಾತದಿಂದ ಅಗಲಿದಾಗ ಅವರಲ್ಲಿ ಅಪಾರ ಅಭಿಮಾನ ಹೊಂದಿದ ಆಡಳಿತ ಮಂಡಳಿಯು ಅವರ ಸುಪುತ್ರ ರಾಜಶೇಖರ ಪಾಟೀಲ ಅಂದರೆ ನನ್ನನ್ನು ಅಧ್ಯಕ್ಷರನ್ನಾಗಿಸಿದರು. ಬಿ.ಆರ್.ಪಾಟೀಲರ ನೆನಪೇ ಬ್ಯಾಂಕಿನ ಶಕ್ತಿ. ಅವರ ಸಂಕಲ್ಪವೇ ಬ್ಯಾಂಕಿಗೆ ಸ್ಪೂರ್ತಿ. ಅವರ ಕನಸುಗಳ ಸಕಾರವೇ ಆಡಳಿತ ಮಂಡಳಿಯ ಧ್ಯೇಯ, ಉದ್ಧೇಶ. ಜನತಾ ಬ್ಯಾಂಕು ಬಿ.ಆರ್.ಪಾಟೀಲರ ಪ್ರಾಮಾಣಿಕ ಸೇವೆಯ ಸಾಕ್ಷೀಕರಣ. ಬ್ಯಾಂಕಿನ ಅಭಿವೃದ್ಧಿಗಾಗಿ ತಮ್ಮ ಬದುಕನ್ನು ಮೀಸಲಾಗಿಟ್ಟಿರುವುದಾಗಿ ರಾಜಶೇಖರ ಪಾಟೀಲರು ಹೇಳಿದರು.
ಬ್ಯಾಂಕಿನ ಉಪಾಧ್ಯಕ್ಷ ತಮ್ಮಣ್ಣಪ್ಪ ತೇಲಿ ಅವರು ಮಾತನಾಡುತ್ತ 46 ವರ್ಷಗಳ ಬ್ಯಾಂಕಿನ ಚೇರ‌್ಮನ್ನರಾದ ರಾಜಶೇಖರ ಪಾಟೀಲರ ದಕ್ಷ ಆಡಳಿತ ನಿರ್ವಹಣೆಯಲ್ಲಿ ಬ್ಯಾಂಕು ರಾಜ್ಯದಲ್ಲಿ ಸಾಧನೆಯ ಹೊಸ ದಾಖಲೆಯತ್ತ ಸಾಗುತ್ತಿದೆ. ಸಹಕಾರ ತತ್ವದಡಿ ಗ್ರಾಮ ವಿಕಾಸಕ್ಕೆ ಮುನ್ನುಡಿಯಾಗಿ, ಸಮಾಜಮುಖಿಯಾಗಿ ಹೇಗೆ ಬದುಕಬೇಕೆಂಬುದನ್ನು ಲಿಂ.ಬಿ.ಆರ್.ಪಾಟೀಲ ಗೌಡರಿಂದ ಕಲಿತಿದ್ದೇವೆ. ಸಹಕಾರ ಕ್ಷೇತ್ರ, ಧಾರ್ಮಿಕ ಕಾರ್ಯ, ಶಿಕ್ಷಣ, ಕೃಷಿ, ಗ್ರಾಮೀಣ ಜನರ ಬದುಕಿಗೆ ಸಹಕಾರ ಎಲ್ಲ ಕ್ಷೇತ್ರಗಳಲ್ಲೂ ಗೌಡರು ಹಾಗೂ ಗೌಡರ ಮನೆತನ ಮೇಲ್ಪಂಕ್ತಿಯಲ್ಲಿದೆ ಎಂದರು.
ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಶಿವಪುತ್ರ ಅಮರಶೆಟ್ಟಿ ಮಾತನಾಡುತ್ತ ಜನಸಾಮಾನ್ಯರ ಬದುಕನ್ನು ಹಸನುಗೊಳಿಸುವ ಕಳಕಳಿಯಿಂದ 46 ವರ್ಷಗಳ ಹಿಂದೆ ಆರಂಭವಾಗಿ, ಸಹಕಾರ ಸ್ವಾವಲಂಬನೆಯ ಸೂತ್ರ, ದೀನ ದುರ್ಬಲರ ಸಬಲೀಕರಣದ ಸಂಕಲ್ಪತೊಟ್ಟ ಬ್ಯಾಂಕು ಪ್ರಸ್ತುತ ಆರ್ಥಿಕ ವರ್ಷದಲ್ಲಿ 4800 ಸದಸ್ಯರಿದ್ದು, 207 ಕೋಟಿಗೂ ಮೀರಿ ದುಡಿಯುವ ಬಂಡವಾಳ ಹೊಂದಿದೆ. 182 ಕೋಟಿ ರೂ ಠೇವು ಸಂಗ್ರಹಿಸಿದ್ದು, ಪ್ರಸಕ್ತ ವರ್ಷದಲ್ಲಿ 92 ಕೋಟಿ ರೂ ಸಾಲ ವಿತರಿಸಿ, 1.15 ಕೋಟಿರೂ ನಿವ್ವಳ ಲಾಭ ಹೊಂದಿದೆ ಎಂದು ಹೇಳಿದರು.
ನಿರ್ದೇಶಕರಾದ ಸಂಜೀವ ಅವಕ್ಕನವರ, ಶಂಕರ ಮಾನಶೆಟ್ಟಿ, ಪ್ರಭುಲಿಂಗ ಪಾಲಬಾಂವಿ, ಭೀಮಗೊಂಡ ಕರ್ಣವಾಡಿ, ಕಲ್ಲಪ್ಪ ಕೊಕಟನೂರ, ಚಂದ್ರಕಾಂತ ಭೋಸಲೆ, ಸಂಗಣ್ಣ ಸವದತ್ತಿ, ಅಶೋಕ ಗುಡೋಡಗಿ, ಚಂದ್ರಶೇಖರ ಗುಡಸಿ, ಮುರಗೆಪ್ಪ ಠಕ್ಕಣ್ಣವರ, ಮಲ್ಲಪ್ಪ ಮೋಪಗಾರ, ವಿಶ್ವನಾಥ ಕಶೆಟ್ಟಿ, ಹನುಮಂತ ಮಡಿವಾಳ, ರಾಮಪ್ಪ ನಾಯಿಕ, ವಿನಾಯಕ ಮುಡಸಿ ಹಾಗೂ ಬ್ಯಾಂಕಿನ ಸಿಬ್ಬಂದಿಯವರು ಉಪಸ್ಥಿತರಿದ್ದರು.