ಉದ್ಯೋಗ ಖಾತರಿ ಸ್ಥಳದಲ್ಲಿ ರಕ್ಷಾ ಬಂಧನ ಆಚರಣೆ

ಉದ್ಯೋಗ ಖಾತರಿ ಸ್ಥಳದಲ್ಲಿ ರಕ್ಷಾ ಬಂಧನ ಆಚರಣೆ Raksha Bandhan celebration at job guarantee place

ಉದ್ಯೋಗ ಖಾತರಿ ಸ್ಥಳದಲ್ಲಿ ರಕ್ಷಾ ಬಂಧನ ಆಚರಣೆ 

ಕಾರವಾರ,ಆ.8 :-  ಅಣ್ಣ-ತಂಗಿಯರ ನಡುವಿನ ಪವಿತ್ರ ಬಾಂಧವ್ಯವನ್ನು ಸಾರುವ ರಕ್ಷಾ ದಿನದಂದು ಮಹಿಳೆಯರ ಘನತೆ ಎತ್ತಿ ಹಿಡಿಯುವ ಮತ್ತು ಅವರಿಗೆ ಸದಾ ಗೌರವ ಹಾಗೂ ಸುರಕ್ಷಿತ ವಾತಾವರಣ ಕಲ್ಪಿಸುವ ಸಂಕಲ್ಪವನ್ನು ಮಾಡೋಣ ಎಂದು ಮುಂಡಗೋಡ ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ವಾಯ್‌. ದಾಸನಕೊಪ್ಪ ಅವರು ಹೇಳಿದರು.  

ಅವರು ಶುಕ್ರವಾರದಂದು  ಮಳಗಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೆರೆ ಪುನಶ್ಚೇತನ ಕಾಮಗಾರಿ ಸ್ಥಳದಲ್ಲಿ ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಮತ್ತು ಎಲ್‌.ವಿ.ಕೆ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ರಕ್ಷಾ ಬಂಧನ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು.  

ಉದ್ಯೋಗ ಖಾತರಿಯಡಿ ಹೆಚ್ಚಿನ ಶ್ರಮ ಬೇಡುವ ಮತ್ತು ಗ್ರಾಮದಿಂದ ಸಾಕಷ್ಟು ದೂರದಲ್ಲಿರುವ ಕೆರೆ ಪುನಶ್ಚೇತನ, ಅರಣ್ಯದಲ್ಲಿ ಟ್ರೆಂಚ್ ನಿರ್ಮಾಣದಂತಹ ಮುಂತಾದ ಕಾಮಗಾರಿಗಳಲ್ಲಿ ಮಹಿಳೆಯರು ಕೆಲಸ ಮಾಡುವುದು ಕಷ್ಟ. ಅಂತಹ ಸಂದರ್ಭಗಳಲ್ಲಿ ಪುರುಷರು ಕೆಲಸದಲ್ಲಿ ನೆರವಾಗುವುದು ಮಾತ್ರವಲ್ಲದೇ, ಅವರು ಮನೆಯಿಂದ ಹೊರಟು ಮತ್ತೆ ಸುರಕ್ಷಿತವಾಗಿ ಮನೆ ಸೇರುವವರೆಗೂ ವಿಶೇಷ ಕಾಳಜಿ ವಹಿಸುತ್ತಾರೆ. ಕೂಡು ಕುಟುಂಬದಂತೆ ಆಸರ-ಬೇಸರಕ್ಕೆ ಜೊತೆಯಾಗಿರುತ್ತಾರೆ. ಹೀಗಾಗಿ ಇಂತಹ ವಿಶಿಷ್ಟ್ಟ ಬಾಂಧವ್ಯವನ್ನು ಇನ್ನೂ ಗಟ್ಟಿಗೊಳಿಸುವ ನಿಟ್ಟಿನಲ್ಲಿ ತಾಲೂಕಿನ ಹಲವು  ಕಾಮಗಾರಿ ಸ್ಥಳಗಳಲ್ಲಿ ಮುಂಡಗೋಡ ತಾಲೂಕು ಪಂಚಾಯತಿಯ ವತಿಯಿಂದ ರಕ್ಷಾ ಬಂಧನ ಹಬ್ಬ ಆಚರಿಸಲಾಗುತ್ತಿದೆ ಎಂದರು.  

ತಾಲೂಕು ಪಂಚಾಯತಿಯ ಸಹಾಯಕ ನಿರ್ದೇಶಕರಾದ (ಗ್ರಾ.ಉ) ಸೋಮಲಿಂಗಪ್ಪ ಛಬ್ಬಿ ಅವರು ಮಾತನಾಡಿ ಯೋಜನೆಯಡಿ ಗಂಡು ಮತ್ತು ಹೆಣ್ಣಿಗೆ ಸಮಾನ ಕೆಲಸಕ್ಕೆ ಸಮಾನ ವೇತನವಿದೆ. ಕಾಮಗಾರಿ ಸ್ಥಳದಲ್ಲಿ ಪರಸ್ಪರ ಸೌಹಾರ್ದತೆಯಿಂದ, ಸಹೋದರಿಯರಿಗೆ ಸಹೋದರರಂತೆ ಆಸರೆಯಾಗಿ, ಅವರನ್ನು ಸಮಾಜದ ಸರಿಸಮಾನವಾಗಿ ಬೆಳೆಸಲು ಕೈಜೋಡಿಸೋಣ. ಮಹಿಳಾ ಸ್ನೇಹಿ ಕಾಮಗಾರಿ ಸ್ಥಳವನ್ನಾಗಿಸೋಣ ಎಂದರು.  

ಐಇಸಿ ಸಂಯೋಜಕ ಕಿರಣ ಜೋತೆಪ್ಪನವರ ಅವರು ಕೂಲಿಕಾರರಿಗೆ ಯೋಜನೆಯಡಿ ಗ್ರಾಮೀಣ ಭಾಗದ ಜನರಿಗೆ ಇರುವ ಉದ್ಯೋಗ ಅವಕಾಶ, ಕೂಲಿ ಮೊತ್ತ, ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿ ಸೌಲಭ್ಯಗಳು, ಅರ್ಜಿ ಸಲ್ಲಿಸುವ ವಿಧಾನ, ಗರ್ಭಿಣಿ ಮಹಿಳೆಯರು, ಹಿರಿಯ ನಾಗರಿಕರು ಮತ್ತು ವಿಶೇಷ ಚೇತನರಿಗೆ ಕೆಲಸದಲ್ಲಿನ ರಿಯಾಯಿತಿ, ಕೂಸಿನ ಮನೆ ಸೇರಿದಂತೆ ಹಲವು ಉಪಯುಕ್ತ ಮಾಹಿತಿಯನ್ನು ತಿಳಿಸಿದರು.  

ರಕ್ಷಾ ಬಂಧನ ಹಬ್ಬದ ಪ್ರಯುಕ್ತ ಪುರುಷ ಕೂಲಿಕಾರರಿಗೆ ಸಹೋದರಿ ಸಮಾನರಾದ ಮಹಿಳಾ ಕೂಲಿಕಾರರು ಪವಿತ್ರ ರಾಖಿಯನ್ನು ಕಟ್ಟಿ, ಸಿಹಿ ತಿನಿಸಿ, ಆರತಿ ಬೆಳಗಿ ಮನಸಾರೆ ಹಾರೈಸಿದರು. ಮತ್ತು ಎಲ್ಲ ಪುರುಷರು ಅವರ ರಕ್ಷಣೆಗೆ ಸದಾ ನಿಲ್ಲುವುದಾಗಿ ಸಂಕಲ್ಪ ತೊಟ್ಟರು.  

ಈ ಸಂದರ್ಭದಲ್ಲಿ ಮಳಗಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ಜಯಶ್ರೀ ಹಜಾರೆ, ಊರ ಪ್ರಮುಖರಾದ ನಾಗೇಂದ್ರ ಕರಗಸಕರ, ಬಿಎಫ್‌ಟಿ ಹನುಮಂತ ಇಡಗೋಡ, ಮಂಜು ಪೂಜಾರ, ಸಂತೋಷ ಹಿರೇಮಠ, ಎಲ್‌ವಿಕೆ ಸಿಬ್ಬಂದಿ ಶ್ರೀದೇವಿ ಭದ್ರಾಪುರ, ಕಾಯಕ ಬಂಧು ರೇಣುಕಾ ಚಲವಾದಿ, ಮನರೇಗಾ ಕೂಲಿಕಾರರು ಹಾಗೂ ಗ್ರಾಪಂ ಸಿಬ್ಬಂದಿ ಉಪಸ್ಥಿತರಿದ್ದರು.