ಕೃಷಿ ಹೊಂಡಕ್ಕೆ ತಂತಿಬೇಲಿ ಹಾಕಿ-ಈಜಬಾರದೆಂದು ಸೂಚನಾ ಫಲಕ ಅಳವಡಿಸಿ
ಹಾವೇರಿ 21: ಬೇಸಿಗೆ ಪ್ರಾರಂಭವಾಗಿದ್ದು, ಕೃಷಿ ಹೊಂಡದಲ್ಲಿ ಮಕ್ಕಳು ಈಜಲು ಮತ್ತು ಜಾನುವಾರುಗಳು ನೀರು ಕುಡಿಯಲು ಬಂದಂತಹ ಸಂಧರ್ಭದಲ್ಲಿ ಬೀಳುವ ಸಂಭವವಿದ್ದು, ರೈತರು ಈ ಹಿಂದೆ ನಿರ್ಮಿಸಿರುವ ಕೃಷಿ ಹೊಂಡಗಳಲ್ಲಿ ಸುರಕ್ಷತಾ ಕ್ರಮಗಳನ್ನು ಅಳವಡಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕರಾದ ವೀರಭದ್ರ್ಪ ಬಿ.ಹೆಚ್. ಅವರು ಮನವಿ ಮಾಡಿಕೊಂಡಿದ್ದಾರೆ. ಕೃಷಿ ಭಾಗ್ಯ ಯೋಜನೆಯಡಿ ನಿರ್ಮಾಸಲಾದ ಕೃಷಿ ಹೊಂಡಗಳಿಗೆ ಸುರಕ್ಷತಾ ಕ್ರಮಗಳನ್ನು ಅಳವಡಿಸದೆ ಇರುವುದರಿಂದ ಕೃಷಿ ಹೊಂಡಗಳಲ್ಲಿ ಜೀವ ಹಾನಿಯಾಗುವ ಸಂಭವವಿರುತ್ತದೆ. ಹಾಗಾಗಿ ರೈತರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಕೃಷಿ ಹೊಂಡದ ಸುತ್ತಲು ತಂತಿ ಬೇಲಿ, ನೆರಳು ಪರದೆ, ತಮ್ಮಲ್ಲಿ ಲಭ್ಯವಿರುವ ಸಂಪನ್ಮೂಲಗಳಿಂದ ಬೇಲಿ ಅಳವಡಿಸುವುದು ಕಡ್ಡಾಯವಾಗಿರುತ್ತದೆ. ಕೃಷಿ ಹೊಂಡದ ಮುಂದೆ ಅಪಾಯ ಮತ್ತು ಈಜಬಾರದು ಎಂಬ ಸೂಚನಾಫಲಕವನ್ನು ಕಡ್ಡಾಯವಾಗಿ ಹಾಕಬೇಕು ಹಾಗೂ ಕೃಷಿ ಹೊಂಡಗಳಲ್ಲಿ ಸುರಕ್ಷತಾ ಕ್ರಮವಾಗಿ ಹಗ್ಗದೊಂದಿಗೆ ಟೂಬ್‌ಗಳನ್ನು ನಾಲ್ಕು ಮೂಲೆಗಳಲ್ಲಿ ಇಳಿ ಬಿಡಲು ಕೋರಲಾಗಿದೆ. ಈ ನಿಟ್ಟಿನಲ್ಲಿ ರೈತ ಬಾಂಧವರು ತಮ್ಮ ಜಮೀನಿನಲ್ಲಿರುವ, ಮುಖ್ಯವಾಗಿ ಮನೆಯ ಸಮೀಪವಿರುವ, ರಸ್ತೆ ಪಕ್ಕದಲ್ಲಿರುವ ಎಲ್ಲಾ ಕೃಷಿ ಹೊಂಡಗಳಿಗೆ ಸುರಕ್ಷಿತ ಕ್ರಮ ಕೈಗೊಳ್ಳಬೇಕು. ರೈತರು ತಮ್ಮ ಕೃಷಿ ಹೊಂಡಗಳಿಗೆ ಸೂಕ್ತವಾದ ರಕ್ಷಣಾ ಕ್ರಮ ಅಳವಡಿಸಿ ಪ್ರಾಣ ಹಾನಿ ತಪ್ಪಿಸಲು ಸಹಸರಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.