ರೈತರಿಗೆ ನಿರಂತರ ವಿದ್ಯುತ್ ಪೂರೈಸಿ: ಮುನವಳ್ಳಿ

ಗಂಗಾವತಿ27: ರೈತರು ನಮ್ಮ ದೇಶದ ಬೆನ್ನಲುಬಾಗಿದ್ದಾರೆ. ಕೃಷಿ ಇಲ್ಲದೆ ನಾವಿಲ್ಲ ಎಂದು ಶಾಸಕ ಪರಣ್ಣ ಮುನವಳ್ಳಿ ತಿಳಿಸಿದರು.

ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿದಾರರ ಸಂಘದ ತಾಲೂಕು ಘಟಕದ ನೂತನ ಕಟ್ಟಡದ ಭೂಮಿ ಪೂಜೆಯನ್ನು ಶುಕ್ರವಾರ ಮಾಡಿ ಅವರು ಮಾತನಾಡಿದರು. ರೈತರಿಗೆ ನಿರಂತರ ವಿದ್ಯುತ್ ಪೂರೈಸಬೇಕು ಎಂದು ಕಾಯಕ್ರಮದಲ್ಲಿ ಪಾಲ್ಗೊಂಡಿದ್ದ ಜೆಸ್ಕಾಂ ಅಧಿಕಾರಿಗಳು ಶಾಸಕರು ಸೂಚಿಸಿದರು. ಕಳೆದ 2 ವರ್ಷಗಳ ಹಿಂದೆ ರಾಜ್ಯದಲ್ಲಿ ಭೀಕರ ಬರಗಾಲ ರೈತರನ್ನು ಕಟ್ಟಿ ಕಾಡಿದೆ. ಸಕಾಲಕ್ಕೆ ಮಳೆಬಾರದ ಕಾರಣ ಈ ಭಾಗದ ಜೀವನಾಡಿ ತುಂಗಭದ್ರಾ ಜಲಾಶಯಲ್ಲಿ ನೀರಿನ ಸಂಗ್ರಹ ಪ್ರಮಾಣ ಕಡಿಮೆಯಾಯಿತು. ಇದರ ಪರಿಣಾಮ ಈ ಭಾಗದ ಎಡದಂಡೆ ಕಾಲುವೆ ವ್ಯಾಪ್ತಿ ಪ್ರದೇಶದ ರೈತರು 4 ಬೆಳೆಗಳನ್ನು ಬೆಳೆಯದೆ ಬೀದಿ ಪಾಲಾಗಿದ್ದಾರೆ ಎಂದು ಅವರು ತಿಳಿಸಿದರು.

ನಮ್ಮ ರೈತರು ಸಮೃದ್ದಿ ಇದ್ದರೆ ಉಳಿದ ನಾವುಗಳು ಚೆನ್ನಾಗಿ ಇರುತ್ತೇವೆ. ಈ ಸಲ ಚೆನ್ನಾಗಿ ಮಳೆಯಾಗಿದೆ. ಆದರೆ ಪಂಪ್ಸೆಟ್ ಅಳವಡಿಸಿಕೊಂಡು ಏತ ನೀರಾವರಿ ಮಾಡಿಕೊಂಡ ರೈತರಿಗೆ ವಿದ್ಯುತ್ ಅವಶ್ಯಕತೆ ಇದೆ. ಪದೇ ಪದೇ ಕಡಿತಗೊಳಿಸುವ ಕಾರಣದಿಂದ ಭತ್ತದ ಇಳುವರಿ ಕಡಿಮೆ ಬರುತ್ತದೆ. ಜೆಸ್ಕಾಂ ಅಧಿಕಾರಿಗಳು ಈ ನಿಟ್ಟಿನಲ್ಲಿ ಗಮನಹರಿಸಿ ವಿದ್ಯುತ್ ಪೂರೈಸಬೇಕು ಎಂದು ತಿಳಿಸಿದರು.

ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರು ಮತ್ತು ಅಧಿಕಾರಿಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಗುತ್ತಿಗೆದಾರರ ಸಂಘವು ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಮುನವಳ್ಳಿ ತಿಳಿಸಿದರು.

ಕೆಇಬಿ ಜೀಪ್ ಪ್ರಕರಣ: ರೈತಪರ ಹೋರಾಟಗಾರ ಬಿ.ಎಚ್.ಎಂ.ತಿಪ್ಪೇರುದ್ರಸ್ವಾಮಿ ಮಾತನಾಡಿ ಕಳೆದ ಹಲವು ವರ್ಷಗಳ ಹಿಂದೆ ವಿದ್ಯುತ್ ಸಮಸ್ಯೆ ಉಲ್ಬಣಗೊಂಡ ಸಂದರ್ಭದಲ್ಲಿ ಕೆಲ ಯುವಕರು ಆಕ್ರೋಶಗೊಂಡು ಕೆಇಬಿಗೆ ಮುತ್ತಿಗೆ ಹಾಕಿ ಇಲಾಖೆಯ ನೂತನ ಜೀಪ್ನ್ನು ಭಸ್ಮಗೊಳಿಸಿದ ಘಟನೆಯನ್ನು ನೆನಪಿಸಿಕೊಂಡರು. ಈಗಿನ ಜೆಸ್ಕಾಂ ಅಧಿಕಾರಿಗಳು ರೈತರ ಸಮಸ್ಯೆಗೆ ಶೀಘ್ರ ಸ್ಪಂದಿಸುವಂತೆ ಅವರು ಮನವಿ ಮಾಡಿದರು. ಗುತ್ತಿಗೆದಾರರ ಸಂಘದ ರಾಜ್ಯ ಅಧ್ಯಕ್ಷ ಎಸ್ಎಂ ಕೃಷ್ಣ, ಮಹಾಬಳೇಶಪ್ಪ ಕೊಪ್ಪಳ, ಜೆಸ್ಕಾಂ ಅಧಿಕಾರಿಗಳಾದ ನಟರಾಜ, ಎಂ.ವೀರೇಶ್, ಖಾಜಾ ಮೊಹಿನುದ್ದೀನ, ರಾಮಚಂದ್ರ ಸುತಾರ, ಶ್ರೀನಾಥ, ಅರುಣಕುಮಾರ, ಅಲ್ಲಾಭಕ್ಷಿ, ಜಗನ್ನಾಥ ರಾಠೋಡ ಪಾಲ್ಗೊಂಡಿದ್ದರು.