ಬಸ್ ಪ್ರಯಾಣ ದರ ಏರಿಕೆ ಹಿಂಪಡೆಯಲು ಒತ್ತಾಯಿಸಿ ಪ್ರತಿಭಟನೆ
ಧಾರವಾಡ 04: ಬಸ್ ಪ್ರಯಾಣ ದರ ಏರಿಕೆ ಹಿಂಪಡೆಯಲು ಒತ್ತಾಯಿಸಿ ಇಂದು ನಗರದ ಹಳೆ ಬಸ್ ನಿಲ್ದಾಣದ ಎದುರು ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ( ಕಮ್ಯುನಿಸ್ಟ್) ಪಕ್ಷದ ಧಾರವಾಡ ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು. ಪ್ರತಿಭಟನಾ ಸಭೆಯನ್ನು ಉದ್ದೇಶಿ ಮಾತನಾಡಿದ ಜಿಲ್ಲಾ ಸಮಿತಿಯ ಹಿರಿಯ ಸದಸ್ಯರಾದ ಗಂಗಾಧರ ಬಡಿಗೇರ್ ಬಸ್ ಪ್ರಯಾಣ ದರವನ್ನು ಶೇ 15ರಷ್ಟು ಏರಿಕೆ ಮಾಡಿರುವುದನ್ನು ಈ ಕೂಡಲೇ ಹಿಂಪಡೆಯಬೇಕು ಎಂದು ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷವು ಆಗ್ರಹಿಸುತ್ತದೆ. ಅಡುಗೆ ಎಣ್ಣೆ ಬೇಳೆ, ಕಾಳು ಕಡಿಗಳ ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದ, ಇಂಧನ ಹಣದುಬ್ಬರದ ಬಿಸಿಯಿಂದ ರಾಜ್ಯದ ಜನರು ಬಸವಳಿದಿದ್ದಾರೆ. ಆಧುನಿಕ ಬದುಕಿನ ಮೂಲ ಅವಶ್ಯಕತೆಯಾಗಿರುವ ಸಾರಿಗೆ ನಿಗಮಗಳ ಬಸ್ ಟಿಕೆಟ್ ದರ ಏರಿಕೆ ಮಾಡಿರುವುದು ಗಾಯದ ಮೇಲೆ ಬರೆ ಎಳೆದಂತಾಗುತ್ತದೆ. ಹೊಸ ವರ್ಷಕ್ಕೆ ಸರ್ಕಾರವು ಜನರಿಗೆ ಸಂಕಷ್ಟ ತರುವ ಉಡುಗೊರೆ ನೀಡಿದೆ ಗಂಗಾಧರ್ ಬಡಿಗೇರ್ ಟೀಕಿಸಿದರು. ರಾಜ್ಯ ಸರ್ಕಾರದ ಶಕ್ತಿ ಯೋಜನೆಯ ಬಾಕಿ ಹಣವನ್ನು ತಡ ಮಾಡದೆ ಸಾರಿಗೆ ನಿಗಮಗಳಿಗೆ ಪಾವತಿ ಮಾಡಬೇಕು. ಸಾರಿಗೆ ನಿಗಮಗಳಲ್ಲಿರುವ ಭ್ರಷ್ಟಾಚಾರ, ದುಂದುವೆಚ್ಚಕ್ಕೆ ಕಡಿವಾಣ ಹಾಕಬೇಕು. ಕೇಂದ್ರ ಸರ್ಕಾರವು ರಾಜ್ಯಕ್ಕೆ ನೀಡ ಬೇಕಾದ ನ್ಯಾಯಸಮ್ಮತ ತೆರಿಗೆ ಬಾಕಿ ಪಾವತಿಸಬೇಕು. ಆ ಮೂಲಕ ಸಾರಿಗೆ ಸಂಸ್ಥೆಗಳ ಆದಾಯ ಕೊರತೆಯನ್ನು ತುಂಬಬೇಕು, ಅದರ ಬದಲು ಬಸ್ ದರ ಹೆಚ್ಚಿಳ ಮಾಡಿದರೆ. ಜನಸಾಮಾನ್ಯರ ಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ ಆರೋಪಿಸಿದರು. ಬಸ್ ದರ ಹೆಚ್ಚಳ ವಾಪಸು ಪಡೆಯದಿದ್ದರೆ ರಾಜ್ಯದ ಜನತೆ ಒಂದಾಗಿ ಉನ್ನತ ಹಂತದ ಹೋರಾಟಕ್ಕೆ ಮುಂದಾಗಬೇಕೆಂದು ಕರೆ ನೀಡಿದರು. ಪ್ರತಿಭಟನೆಯ ಅಧ್ಯಕ್ಷತೆಯನ್ನು ದೀಪಾ ಧಾರವಾಡ ವಹಿಸಿದ್ದರು. ಈ ಸಂದರ್ಭದಲ್ಲಿ ಮಧುಲತಾ ಗೌಡರ್, ಶರಣು ಗೋನವರ ರಣಜಿದ್ ದೂಪ್ಪದ, ಭವಾನಿಶಂಕರ್ ಗೌಡರ, ದುರಗಪ್ಪ ಕಲ್ಲೂರ, ಅನುಸೂಯ, ಸ್ಪೂರ್ತಿ ಚಿಕ್ಕಮಠ, ಮುಂತಾದವರು ಇದ್ದರು.