ಅನಧೀಕೃತ ಬಡಾವಣೆ ಹೊಂದಿರುವ ಆಸ್ತಿ ಮಾಲೀಕರು ಸೂಕ್ತ ದಾಖಲೆ ನೀಡಿ ‘ಬಿ-ಖಾತಾ’ ಪಡೆದುಕೊಳ್ಳಿ: ಶಾಸಕ ನಾರಾ ಭರತ್ ರೆಡ್ಡಿ
ಬಳ್ಳಾರಿ 19: ಆಸ್ತಿ ಮಾಲೀಕರ ಅನುಕೂಲಕ್ಕಾಗಿ ಅನಧೀಕೃತ ಬಡಾವಣೆಗಳನ್ನು ಹೊಂದಿರುವ ಆಸ್ತಿಗಳಿಗೆ ಇ-ಆಸ್ತಿ ಸೃಜನೆ ಮಾಡಿ ‘ಬಿ-ಖಾತಾ’ ವಿತರಿಸುವ ವ್ಯವಸ್ಥೆ ಜಾರಿಗೆ ತರಲಾಗಿದ್ದು, ಬಳ್ಳಾರಿ ಮಹಾನಗರ ವ್ಯಾಪ್ತಿಯಲ್ಲಿನ ಆಸ್ತಿ ಮಾಲೀಕರು ಅಗತ್ಯ ದಾಖಲೆ ಸಲ್ಲಿಸಿ ಬಿ-ಖಾತಾ ಪಡೆದುಕೊಳ್ಳಬೇಕು ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಹೇಳಿದರು. ಮಹಾನಗರ ಪಾಲಿಕೆ ವತಿಯಿಂದ ನೀಡಲಾಗುವ ಬಿ-ಖಾತಾ ಕುರಿತಂತೆ ಸಾರ್ವಜನಿಕರಿಗೆ ಮಾಹಿತಿ ತಿಳಿಸಲು ಪಾಲಿಕೆಯ ಸಭಾಂಗಣದಲ್ಲಿ ಬುಧವಾರ ಏರಿ್ಡಸಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಬಿ-ಖಾತಾ ನೀಡುವ ಅಭಿಯಾನಕ್ಕೆ ಮಂಗಳವಾರ ಚಾಲನೆ ನೀಡಿದ್ದು, ಈ ಅಭಿಯಾನವನ್ನು ಮುಂದಿನ ಮೂರು ತಿಂಗಳೊಳಗಾಗಿ ಪೂರ್ಣಗೊಳಿಸುವಂತೆ ಸೂಚಿಸಿದ್ದಾರೆ ಎಂದರು. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಅನಧೀಕೃತ ಸ್ವತ್ತುಗಳಿಗೆ ಸಹ ಖಾತಾ ನೀಡುವ ಸಂಬಂಧ ಕಾಯ್ದೆ ಮತ್ತು ನಿಯಮಗಳಿಗೆ ತಿದ್ದುಪಡಿ ಮಾಡಲಾಗಿದೆ. ಇದರಿಂದ ಅನಧಿಕೃತ ಸ್ವತ್ತುಗಳ ಮಾಲೀಕರು ತಮ್ಮ ಆಸ್ತಿಯ ಕಂದಾಯ ಪಾವತಿಸಿ, ಬಿ-ಖಾತಾ ಪಡೆಯಬಹುದಾಗಿದೆ. ಇದರಿಂದ ಬಹು ದಿನಗಳಿಂದ ಅನಧಿಕೃತ ಆಸ್ತಿಗಳ ಖಾತಾ ಸಮಸ್ಯೆಗೆ ಪರಿಹಾರ ಕಲ್ಪಿಸಿದಂತಾಗುತ್ತದೆ ಎಂದರು. ಸೆಪ್ಟೆಂಬರ್ 10, 2024 ರ ಕ್ಕಿಂತ ಮುಂಚಿನ ಆಸ್ತಿಗಳಿಗೆ ಈ ಕಾಯ್ದೆಯು ಅನ್ವಯವಾಗುತ್ತದೆ. ಈ ಅಭಿಯಾನವು ಒಂದು ಬಾರಿ ಪರಿಹಾರ ಕ್ರಮವಾಗಿರುವ ಹಿನ್ನಲೆಯಲ್ಲಿ ಸಾರ್ವಜನಿಕರು ಬಿ-ಖಾತಾ ನೀಡುವ ಅಭಿಯಾನದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು. ಆಸ್ತಿಯ ಮಾಲೀಕರು, ಮಹಾನಗರ ಪಾಲಿಕೆ ಕಚೇರಿಗೆ ಭೇಟಿ ನೀಡಿ, ಅಗತ್ಯ ದಾಖಲೆಗಳನ್ನು ಸಲ್ಲಿಸಿ, 07 ದಿನಗಳ ಒಳಗಾಗಿ ಬಿ-ಖಾತಾ ಪಡೆಯಬಹುದು ಹಾಗೂ ಜನರ ಅನುಕೂಲಕ್ಕಾಗಿ ಪಾಲಿಕೆ ವ್ಯಾಪ್ತಿಯ ವಾರ್ಡ್ವಾರು ಸ್ವಯಂ-ಸೇವಕರನ್ನು ನೇಮಿಸಲಾಗುವುದು, ಅವರು ಮನೆ-ಮನೆಗೆ ಭೇಟಿ ನೀಡಿ ಪೂರಕ ದಾಖಲೆ ಸಂಗ್ರಹಿಸಿ ನೋಂದಣಿಗೆ ಕ್ರಮವಹಿಸುತ್ತಾರೆ. ಬಳಿಕ ಮನೆಗೆ ಬಿ-ಖಾತಾ ತಲುಪಿಸಲಾಗುವುದು ಎಂದು ತಿಳಿಸಿದರು. ಸಾರ್ವಜನಿಕರು ಯಾವುದೇ ಮಧ್ಯವರ್ತಿಗಳ ಮೊರೆ ಹೋಗಬಾರದು, ನೇರವಾಗಿ ಮಹಾನಗರ ಪಾಲಿಕೆ ಕಚೇರಿಗೆ ಭೇಟಿ ನೀಡಬಹುದು. ಸಹಾಯವಾಣಿ ಸಂಖ್ಯೆ ಆರಂಭಿಸಲಾಗುವುದು ಎಂದರು. *ಅಭಿವೃದ್ಧಿಗೆ ಪಣ:* ರಸ್ತೆಗಳ ನವೀಕರಣ, ವೃತ್ತಗಳ ಅಭಿವೃದ್ಧಿ ಕಾಮಗಾರಿ ಸೇರಿದಂತೆ ಬಳ್ಳಾರಿ ನಗರ ಅಭಿವೃದ್ಧಿಗೆ ಹಲವಾರು ಕಾರ್ಯ ಯೋಜನೆ ರೂಪಿಸಲಾಗಿದೆ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ತಿಳಿಸಿದರು. ನಗರದಲ್ಲಿ ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ಯಾವುದೇ ರೀತಿ ಸಮಸ್ಯೆಯಾಗದಂತೆ ಅಗತ್ಯ ಕ್ರಮ ವಹಿಸಲಾಗಿದೆ. ಈ ಬಾರಿ ಮಳೆ ಉತ್ತಮವಾಗಿದ್ದು, ಕೆರೆಗಳನ್ನು ತುಂಬಿಸಿಕೊಳ್ಳಲಾಗಿದೆ. ಮುಂಜಾಗ್ರತೆಗಾಗಿ ನೀರು ಸರಬರಾಜು ಟ್ಯಾಂಕರ್‌ಗಳನ್ನು ಸಹ ಇಟ್ಟುಕೊಳ್ಳಲಾಗಿದೆ ಎಂದರು. ನಗರದ ಹೃದಯ ಭಾಗದ ಗಡಿಯಾರ ಸ್ಥಂಭ ಉದ್ಘಾಟನೆ ಸಂಬಂಧಿಸಿದಂತೆ ಕ್ಲಾಕ್ ಟವರ್ ಪಕ್ಕದಲ್ಲಿ ಅಂಫಿ ಥಿಯೆಟರ್ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಒಂದೂವರೆ ತಿಂಗಳೊಳಗೆ ಪೂರ್ಣಗೊಳಿಸಿ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳನ್ನು ಆಹ್ವಾನಿಸಿ ಉದ್ಘಾಟಿಸಲಾಗುವುದು ಎಂದು ಸ್ಪಷ್ಟೀಕರಣ ನೀಡಿದರು. ಮಹಾನಗರ ಪಾಲಿಕೆಯ ಮೇಯರ್ ಮುಲ್ಲಂಗಿ ನಂದೀಶ್ ಅವರು ಮಾತನಾಡಿ, ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 35,568 ಅನಧಿಕೃತ ಬಡಾವಣೆಗಳು ಇದ್ದು, ಅದರಲ್ಲಿ ವಸತಿ-11,423, ವಾಣಿಜ್ಯ-5,201, ಕೈಗಾರಿಕೆ-265 ಮತ್ತು 18,679 ಖಾಲಿ ನಿವೇಶನಗಳಿವೆ ಎಂದು ಮಾಹಿತಿ ನೀಡಿದರು. ಜನಸಾಮಾನ್ಯರು ಕಟ್ಟಡ, ಮನೆ ನಿರ್ಮಾಣಕ್ಕೆ ಪರವಾನಗಿ ಪಡೆಯಲು ಸಮಸ್ಯೆ ಉಂಟಾಗಿತ್ತು. ರಾಜ್ಯ ಸರ್ಕಾರವು ಅನಧಿಕೃತ ಆಸ್ತಿಗಳಿಗೆ ಬಿಹಿಖಾತಾ ನೀಡಲು ಮುಂದಾಗಿದ್ದರಿಂದ ಜನಸಾಮಾನ್ಯರಿಗೆ ಹೆಚ್ಚು ಅನುಕೂಲ ಆಗಲಿದೆ ಎಂದರು. *ದಾಖಲೆ ಸಲ್ಲಿಸಿ:* ಬಿ-ಖಾತಾ ಪಡೆಯಲು ಆಸ್ತಿಗೆ ಸಂಬಂಧಿಸಿದಂತೆ ಸ್ವತ್ತಿನ ಮಾಲೀಕತ್ವದ ನೋಂದಾಯಿತ ಮಾರಾಟ ಪತ್ರ, ದಾನ ಪತ್ರ, ವಿಭಾಗ ಪತ್ರಗಳು ಅಥವಾ ಸರ್ಕಾರದ ನಿಗಮ ಮಂಡಳಿಗಳಿಂದ ನೀಡಲಾದ ಹಕ್ಕು ಪತ್ರಗಳು, ಮಂಜೂರಾತಿ ಪತ್ರಗಳು ಕಂದಾಯ ಇಲಾಖೆಯಿಂದ 94 ಸಿಸಿ ಅಡಿ ನೀಡಲಾದ ಹಕ್ಕು ಪತ್ರ, ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯಾದ ಧೃಡೀಕೃತ ಪ್ರತಿ ಮತ್ತು ನಿವೇಶನಗಳ ಬಿಡುಗಡೆ ಪತ್ರ, ಪ್ರಸಕ್ತ ಸಾಲಿನವರೆಗೆ ಋಣಭಾರ ಪ್ರಮಾಣ ಪತ್ರ, ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಶೀದಿ, ಮಾಲೀಕರ ಪೋಟೋ ಮತ್ತು ಸ್ವತ್ತಿನ ಫೋಟೋ, ಮಾಲೀಕರ ಗುರುತಿನ ದಾಖಲೆಯ ಪ್ರತಿ ಸಲ್ಲಿಸಬೇಕು. *ನೋಡೆಲ್ ಅಧಿಕಾರಿಗಳ ನೇಮಕ:* ಸಾರ್ವಜನಿಕರ ಹಿತದೃಷ್ಟಿಯಿಂದ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಮಾಹಿತಿಗಾಗಿ ನಗರದ ವಾರ್ಡ್ ನಂ.1, 15 ರಿಂದ 24 ಹಾಗೂ 36, 37 ರ ನಿವಾಸಿಗಳು ಮಹಾನಗರಪಾಲಿಕೆ ವಲಯ ಕಚೇರಿ-1ರ ಆಯುಕ್ತ ಗುರುರಾಜ್ ಸೌದಿ(ಮೊ.9482950502), ವಾರ್ಡ್ ನಂ.2 ರಿಂದ 14 ರ ನಿವಾಸಿಗಳು ಮಹಾನಗರಪಾಲಿಕೆ ವಲಯ ಕಚೇರಿ-2ರ ಆಯುಕ್ತ ಫಣಿರಾಜ್(ಮೊ.9483833135) ಮತ್ತು ವಾರ್ಡ್ ನಂ.25 ರಿಂದ 35 ಹಾಗೂ 38, 39 ರ ನಿವಾಸಿಗಳು ಮಹಾನಗರಪಾಲಿಕೆ ವಲಯ ಕಚೇರಿ-3ರ ಆಯುಕ್ತ ಮಲ್ಲಿಕಾರ್ಜುನ್ (ಮೊ.9448493344) ಇವರಿಗೆ ಸಂಪರ್ಕಿಸಬಹುದು. *ಇ-ಖಾತಾ ಹೆಲ್ಪ್ ಡೆಸ್ಕ್:* ಮಹಾನಗರ ಪಾಲಿಕೆ ವಲಯ ಕಚೇರಿ-1ರ ಕಂದಾಯ ನೀರಿಕ್ಷಕ ವೀರೇಶಯ್ಯ ದೂ.08392-294708, ಮೊ. 7019141268 (ವಾರ್ಡ್ ನಂ.1, 15 ರಿಂದ 24 ಹಾಗೂ 36, 37). ವಲಯ ಕಚೇರಿ-2ರ ಸಹಾಯಕ ಕಂದಾಯ ಅಧಿಕಾರಿ ಅಬ್ದುಲ್ ಖಾದರ್ ಎಸ್.ಕೆ ದೂ.08392-294745, ಮೊ.9845469264 (ವಾರ್ಡ್ ನಂ.2 ರಿಂದ 14). ವಲಯ ಕಚೇರಿ-3ರ ಕಂದಾಯ ನೀರಿಕ್ಷಕ ಕೆ.ವೆಂಕಟೇಶ್ ದೂ.08392-294753, ಮೊ.9986174981 (ವಾರ್ಡ್ ನಂ.25 ರಿಂದ 35 ಹಾಗೂ 38, 39) ಗೆ ಸಂಪರ್ಕಿಸಬಹುದು. ನಗರದಲ್ಲಿ ಸಾರ್ವಜನಿಕರು ಪ್ಲಾಸ್ಟಿಕ್ ಹಾಗೂ ಪ್ಲಾಸ್ಟಿಕ್ ಉತ್ಪನ್ನಗಳನ್ನು ಬಳಸಬಾರದು ಎಂದು ಇದೇ ಸಂದರ್ಭದಲ್ಲಿ ಮನವಿ ಮಾಡಿದರು. ಈ ವೇಳೆ ಮಹಾನಗರ ಪಾಲಿಕೆಯ ಸಭಾನಾಯಕ ಪಿ.ಗಾದೆಪ್ಪ, ಮಹಾನಗರ ಪಾಲಿಕೆಯ ಆಯುಕ್ತರು ಹಾಗೂ ಇತರರು ಇದ್ದರು.