ಕೆರೆಯಲ್ಲಿ ಜೋಡಿ ಕುಡಿ ಬಾಳೆ ಎಲೆಯಲ್ಲಿ ಮಲಗಿಸಿ ನೀರಿನಲ್ಲಿ ತೇಲಿಸುವ ಮೂಲಕ ಹರಕೆ
ಮುಂಡಗೋಡ 21 : ಮುಂಡಗೋಡ ತಾಲೂಕಿನ ಸಾಲಗಾಂವ್ ಗ್ರಾಮದ ಶಕ್ತಿ ಸ್ಥಳ ಬಾಣಂತಿ ದೇವಿ ದೇಗುಲ! ದೇಗುಲದ ವಿಶೇಷತೆ ಏನೆಂದರೆ ಇಲ್ಲಿ ಹಸುಗೂಸನ್ನು ಕೆರೆಯಲ್ಲಿ ಸೇರಿಸಲಾಗುತ್ತದೆ! ಹೌದು ಕೆಲವೇ ಕೆಲವು ಸೆಕೆಂಡುಗಳಷ್ಟು ಕಾಲ ಮಕ್ಕಳನ್ನು ಬಾಳೆ ಎಲೆ ಮೇಲೆ ಹಾಕಿ ದೇವಿಯ ಪ್ರೀತ್ಯರ್ಥವಾಗಿ ತೇಲಿಸಲಾಗುತ್ತದೆ. ಬಾಣಂತಿ ದೇವಿ ದೇಗುಲದ ವಿಶೇಷತೆ ಏನೆಂದರೆ ಹಾಗೆ ಬರುವ ಮಕ್ಕಳು 1 ತಿಂಗಳು, 2 ತಿಂಗಳು ಅಥವಾ ದಿನದ ಕೂಸುಗಳಾದರೂ ಆಗಬಹುದು! ತಾಯಂದಿರ ಈ ಗಟ್ಟಿ ನಿರ್ಧಾರ ಯಾಕೆ? ಮಕ್ಕಳನ್ನು ಯಾಕೆ ನೀರಿನಲ್ಲಿ ತೇಲಿಸುವುದು ಎಂದು ನಿಮ್ಮ ತಲೆಯಲ್ಲಿ ಓಡುವುದು ಸಹಜ ಅದಕ್ಕೊಂದು ಐತಿಹ್ಯವಿದೆ. ಇಲ್ಲಿನ ಬಾಣಂತೀ ಕೆರೆ ನೂರಾರು ಎಕರೆ ವ್ಯಾಪಿಸಿದೆ, ಮೊದಲು ಇದೊಂದು ಪಾಳು ಭೂಮಿ ಯಾಗಿತ್ತು, ಅಲ್ಲಿ ಒಣಗಿದ ನೆಲದಲ್ಲಿ ನೀರು ಹರಿಸಲು ಕೆರೆ ತೆಗೆಯುವ ಪ್ರಯತ್ನ ಬಹಳ ದಿನದಿಂದ ನಡೆಯಿತು, ಉಪಯೋಗವಾಗಲಿಲ್ಲ, ಆದರೆ ಕೊನೆಗೆ ಕುತೂಹಲಕ್ಕೆಂದು ಒಬ್ಬ ಮಹಿಳೆ ತನ್ನ ತಂದೆ ಜೊತೆ ಸ್ಥಳ ವೀಕ್ಷಣೆಗೆ ಬಂದಳು ಅವಳ ಕಂಕುಳಲ್ಲಿ ಹಸುಗೂಸಿತ್ತು, ಪವಾಡ ವೆಂಬಂತೆ ಅವಳು ಬಂದು ನಿಂತಾಗ ಅಲೆಯಾಕಾರದಲ್ಲಿ ನೀರು ಬಂದು ಅವಳನ್ನೂ ಅವಳ ಮಗುವನ್ನೂ ಮುಳುಗಿಸಿ ಬಿಟ್ಟಿತು. ಅದಾದ ಮೇಲೆ ಅವಳು ದೈವ ಸ್ಥಾನಕ್ಕೇರಿದಳು, ಬಾಣಂತಿಯಾಗಿದ್ಧ ಅವಳು ಬಾಣಂತಿ ದೈವವಾದಳು. ಇಲ್ಲಿ 10 ರಿಂದ 20 ವರ್ಷ ಆದ್ರೂ ಮಕ್ಕಳಾಗದವರು ಇಲ್ಲಿ ಬಂದು ಮಗು ಹುಟ್ಟಿದರೆ ನೀರಲ್ಲಿ ತೇಲಿಸುತ್ತೇನೆ ಎಂದು ಹರಕೆ ಕಟ್ಟುಕೊಂಡರೆ ಸಂತಾನ ಭಾಗ್ಯ ಶತಸಿದ್ಧ! ಅಲ್ಲದೇ ಒಂದು ವೇಳೆ ಮಕ್ಕಳಿಗೆ ಯಾವುದೇ ರೀತಿಯ ಕೆಟ್ಟ ಪರಿಸ್ಥಿತಿ ಎದುರಾದರೂ ಮಕ್ಕಳನ್ನು ಸೇರಿಸುವ ಹರಕೆ ಮಾಡಿಕೊಂಡರೆ ಸಾಕು ಎಲ್ಲವೂ ಉಪ ಶಮನವಾಗುತ್ತದೆ. ಇಂತಹ ಪವಾಡ ಸದೃಶ ದೇಗುಲದಲ್ಲಿ ಸಂಕ್ರಮಣದ ಮಾರನೇಯ ದಿನ ಪ್ರತೀ ವರ್ಷ ಈ ಆಚರಣೆ ನಡೆಯುತ್ತದೆ. ಇಳಿಸಂಜೆಯ 5-6 ಗಂಟೆ ಹೊತ್ತಿಗೆ ಸುಮಾರು 400-500 ಹಸುಗೂಸುಗಳು ಕೆರೆ ನೀರಲ್ಲಿ ತೇಲುತ್ತವೆ. ಹಾಗೆಯೇ ಬಾಳೆ ದಿಂಡಿನ ತೇರೂ ಕೂಡ ದೇವಿಯ ಆರಾಧನಾ ಪೂರ್ವಕವಾಗಿ ನೀರಲ್ಲಿ ಪ್ರದಕ್ಷಿಣೆ ಬರುತ್ತದೆ. ಸಾವಿರಾರು ಜನ ನೆರೆದು ಈ ವಿಸ್ಮಯವನ್ನು ಕಣ್ತುಂಬಿಕೊಳ್ಳುತ್ತಾರೆ.