ಉಚಿತ ಮತ್ತು ಶಿಕ್ಷಣ ಕಡ್ಡಾಯ ಶಿಕ್ಷಣ ಕಾಯ್ದೆ ಕುರಿತು ಪ್ರಗತಿ ಪರೀಶೀಲನಾ ಸಭೆ ಮೌಲ್ಯಧಾರಿತ ಶಿಕ್ಷಣ ಒದಗಿಸಲು ಶ್ರಮಿಸಿ: ಶಶಿಧರ್ ಕೋಸಂಬೆ
ಬಳ್ಳಾರಿ 03: ಶಿಕ್ಷಣವು ಮಕ್ಕಳ ಉಜ್ವಲ ಭವಿಷ್ಯದ ಭದ್ರ ಬುನಾದಿಯಾಗಿದೆ. ಗುಣಮಟ್ಟ ಹಾಗೂ ಮೌಲ್ಯಧಾರಿತ ಶಿಕ್ಷಣ ಒದಗಿಸಲು ಶಿಕ್ಷಣ ಇಲಾಖೆಯ ಅಧಿಕಾರಿಗಳು ಶ್ರಮಿಸಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶಶಿಧರ್ ಕೋಸಂಬೆ ಅವರು ಹೇಳಿದರು.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣಾ ಮತ್ತು ಸಾಕ್ಷಾರತಾ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ ಸಂಯುಕ್ತಾಶ್ರಯದಲ್ಲಿ ನಗರದ ಕೋಟೆ ಪ್ರದೇಶದಲ್ಲಿನ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ-2009’ ರ ಕುರಿತ ಪ್ರಗತಿ ಪರೀಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಕ್ಕಳನ್ನು ಶೋಷಣೆ, ದೌರ್ಜನ್ಯ, ಹಿಂಸೆಗಳಿಂದ ವಿಮುಕ್ತಿಗೊಳಿಸಬೇಕು. ಬಾಲ್ಯ ವಿವಾಹ, ಪೋಕ್ಸೋ ಪ್ರಕರಣ, ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಸಹಕರಿಸಬೇಕು. ಕಾನೂನು ಸಂಘರ್ಷಕ್ಕೆ ಒಳಗಾದ ಮಕ್ಕಳಿಗೆ ಸಕಾಲದಲ್ಲಿ ಸೂಕ್ತ ನ್ಯಾಯ ಒದಗಿಸುವ ಜವಬ್ದಾರಿ-ಹೊಣೆ ಪ್ರತಿಯೊಬ್ಬ ಅಧಿಕಾರಿಗಳ ಮೇಲಿದೆ ಎಂದರು.
ಜಿಲ್ಲೆಯಲ್ಲಿ ವಿಶೇಷ ಚೇತನ ಮಕ್ಕಳ ವಿದ್ಯಾಭ್ಯಾಸವು ಕಲಿಕೆಯ ಪೂರಕವಾಗಿ ಸೃಷ್ಠಿಯಾಗಬೇಕು. ಗೃಹಾಧರಿತ ಶಿಕ್ಷಣ ಭೋದನೆ ಸೇರಿದಂತೆ ಇತರೆ ವ್ಯವಸ್ಥೆ ಒದಗಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು.
ಮಕ್ಕಳ ಸುರಕ್ಷಿತ ದೃಷ್ಠಿಯಿಂದ ಅತಿಥಿ ಶಿಕ್ಷಕರನ್ನು ಪೊಲೀಸ್ ಪರೀಶೀಲನೆಗೆ ಒಳಪಡಿಸಬೇಕು. ಮಕ್ಕಳ ರಕ್ಷಣಾ ನೀತಿ ಬದ್ಧತಾ ಪ್ರಮಾಣ ಪತ್ರಕ್ಕೆ ಸಹಿ ಪಡೆದುಕೊಳ್ಳಬೇಕು ಮತ್ತು ಎರಡು ವರ್ಷಕ್ಕೊಮ್ಮೆ ರಿನವಲ್ ಮಾಡಿಸಬೇಕು ಎಂದರು.
ಕುರುಗೋಡು ಮತ್ತು ಕಂಪ್ಲಿಯ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದಲಿಂಗ ಮೂರ್ತಿ ಟಿ.ಎಂ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಜೀವನ ರೂಪಿಸಿಕೊಳ್ಳಲು ಶಿಕ್ಷಣ ಇಲಾಖೆಯ ಅಧಿಕಾರಿಗಳು ಮುತುವರ್ಜಿ ವಹಿಸಿ, ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕೆಂದು ಹೇಳಿದರು.
ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಡಿ ಸರ್ಕಾರಿ, ಅನುದಾನ, ಅನುದಾನ ರಹಿತ ಹಾಗೂ ಇತರೆ ವಸತಿ ನಿಲಯಗಳಲ್ಲಿ ಒಂದರಿಂದ ಹತ್ತನೇ ತರಗತಿಯವರೆಗೆ 12,263 ಶಾಲೆಗಳಲ್ಲಿ 2,80,140 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಗ್ರಾಮೀಣ ಪ್ರದೇಶದಲ್ಲಿ ಮತ್ತು ನಗರ ಪ್ರದೇಶ ವ್ಯಾಪ್ತಿಯಲ್ಲಿ ಒಟ್ಟು 4417 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಮುಂಬರುವ ದಿನಮಾನಗಳಲ್ಲಿ ಶಾಲೆಗೆ ಕರೆತರಲು ಶ್ರಮಿಸಲಾಗುತ್ತದೆ ಎಂದರು.
ಶಾಲಾ ಮಕ್ಕಳಿಗೆ ಸುಸ್ಥಿರ ಆರೋಗ್ಯ ಹಾಗೂ ಗುಣಮಟ್ಟ ಶಿಕ್ಷಣ ಒದಗಿಸಲು ಹಾಗೂ ಉತ್ತಮ ವಾತಾವರಣ ಸೃಷ್ಠಿಯಾಗಬೇಕು. ಶೌಚಾಲಯ, ಪೌಷ್ಠಿಕ ಆಹಾರ, ಶುದ್ಧ ಕುಡಿಯುವ ನೀರು, ಶಾಲಾ ಆವರಣದ ಕಾಂಪೌಂಡ್ ಸೇರಿದಂತೆ ಮೂಲಭೂತ ಸೌಕರ್ಯಗಳ ಕೊರತೆ ಇದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಒದಗಿಸಬೇಕೆಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶಶಿಧರ್ ಕೋಸಂಬೆ ಅವರು ಸೂಚಿಸಿದರು.
ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ ಹೆಚ್ಚಿದೆ. ಮಕ್ಕಳ ಹಾಗೂ ಪೋಷಕರ ಮನವೊಲಿಸಬೇಕು. ಮುಂಬರುವ ದಿನಮಾನಗಳಲ್ಲಿ ಶಾಲೆಯಿಂದ ದೂರ ಉಳಿದ ಮಕ್ಕಳಿಗೆ ಮರಳಿ ಶಾಲೆಗೆ ಕರೆತರಬೇಕೆಂದು ಹಾಜರಾತಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಪಂ ವ್ಯಾಪ್ತಿಯ ಮಕ್ಕಳ ವಿಶೇಷ ಗ್ರಾಮ ಸಭೆಗೆ ಮಕ್ಕಳನ್ನು ಕರೆದೊಯ್ದು, ಮಕ್ಕಳ ಅವಹಾಲು, ಸಮಸ್ಯೆಗಳಿಗೆ ಪ್ರತಿಕ್ರಿಯಸಬೇಕು. ತೆರೆದಮನೆ ಕಾರ್ಯಕ್ರಮದಡಿ ಮಕ್ಕಳನ್ನು ಹತ್ತಿರ ಪೊಲೀಸ್ ಠಾಣೆಗೆ ಭೇಟಿ ನೀಡಿ, ಕಾನೂನು ಕಾಯ್ದೆ ಕುರಿತು ಜಾಗೃತಿ ಮೂಡಿಸಬೇಕು ಎಂದು ಸಿಆರ್‌ಪಿಒ ಅಧಿಕಾರಿಗಳಿಗೆ ತಿಳಿಸಿದರು.
ಪ್ರತಿ ಶಾಲಾ-ಕಾಲೇಜಗಳಲ್ಲಿ ಮಕ್ಕಳ ರಕ್ಷಣಾ ನೀತಿ 2016ರ ಅನುಷ್ಠಾನಗೊಳಿಸಬೇಕು ಜೊತೆಗೆ ಮಕ್ಕಳ ಸಹಾಯವಾಣಿ-1098, ಪೊಲೀಸ್ ತುರ್ತು ಸಹಾಯವಾಣಿ-112 ನಂಬರ್ ಗೋಡೆ ಬರಹದ ಮೂಲಕ ಪ್ರದರ್ಶಿಸಬೇಕು. ಹಾಗೂ ಶಾಲೆಯಲ್ಲಿ ಮಕ್ಕಳ ರಕ್ಷಣಾ ಸಮಿತಿ ರಚನೆ ಮತ್ತು ಸಲಹಾ ಪೆಟ್ಟಿಗೆ ಅಳವಡಿಸುವುದು ಕಡ್ಡಾಯ ಎಂದು ಹೇಳಿದರು.
ಇದೇ ವೇಳೆ ಮೊದಲ ಮಹಿಳಾ ಶಿಕ್ಷಕಿ, ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬಳ್ಳಾರಿಯ ಕ್ಷೇತ್ರ ಶಿಕ್ಷಣಾಧಿಕಾರಿ ನಯೀಮೂರ್ ರೆಹಮಾನ್ ಕೆ.ಎಸ್., ಸಂಡೂರು ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಐ.ಆರ್ ಹಕ್ಕಿ, ಸಿರುಗುಪ್ಪ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಗುರ್ರ್ಪ, ಜಿಲ್ಲಾ ಉಪಯೋಜನಾ ಸಮನ್ವಯ ಅಧಿಕಾರಿ ಶಿವಲಿಂಗ ರೆಡ್ಡಿ ಸೇರಿದಂತೆ ಶಿಕ್ಷಣಾ ಇಲಾಖೆಯ ಅಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಇದ್ದರು.