ಶಿಕ್ಷಣ ಕ್ಷೇತ್ರದಲ್ಲಿ ಪ್ರೊ.ಪಟ್ಟಣಶೆಟ್ಟರು ಅದ್ಭುತ ಕ್ರಾಂತಿ ಮಾಡಿದ್ದಾರೆ: ಡಾ.ತೋಂಟದ ಸಿದ್ದರಾಮ ಬಣ್ಣನೆ

Prof. Pattanashetta has made a wonderful revolution in the field of education: Dr. Tonda Siddarama

ಶಿಕ್ಷಣ ಕ್ಷೇತ್ರದಲ್ಲಿ ಪ್ರೊ.ಪಟ್ಟಣಶೆಟ್ಟರು ಅದ್ಭುತ ಕ್ರಾಂತಿ ಮಾಡಿದ್ದಾರೆ: ಡಾ.ತೋಂಟದ ಸಿದ್ದರಾಮ ಬಣ್ಣನೆ 

ಅಥಣಿ 17: ಪರಿಪಕ್ವತೆಯ ಕಾಯಕ ತತ್ವದ ಪರಿಪಾಲಕರಾಗಿರುವ ಪ್ರೊ.ಶಿವಾನಂದ ಪಟ್ಟಣಶೆಟ್ಟರು ಶಿಕ್ಷಣ ಕ್ಷೇತ್ರದಲ್ಲಿ ಅಭೂತಮಯ ಸಾಧನೆ ಗೈದಿದ್ದಾರೆ. ಅವರ ಶೈಕ್ಷಣಿಕ ಪ್ರೀತಿ, ಸಾಮಾಜಿಕ ಕಳಕಳಿ ಆದರ್ಶನೀಯವಾಗಿದೆ. ಇದನ್ನು ಗುರುತಿಸಿ ಅಥಣಿ ಮೋಟಗಿಮಠದವರು ಪಟ್ಟಣಶೆಟ್ಟರ ಅವರಿಗೆ ಸಮಾಜಸೇವಾ ಭೂಷಣ ಪ್ರಶಸ್ತಿ ಕೊಡಮಾಡಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಗದುಗಿನ ತೋಂಟದ ಡಾ. ಸಿದ್ದರಾಮ ಮಹಾಸ್ವಾಮಿಗಳು ಹೇಳಿದರು. 

     ಈಚೆಗೆ ಅಥಣಿ ಮೋಟಗಿಮಠದ ಚನ್ನಬಸವ ಶಿವಯೋಗಿಗಳವರ ಲಿಂಗೈಕ್ಯ ಶತಮಾನೋತ್ಸವ ಹಾಗೂ ಸಮಾಜೋತ್ಸವ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ತೋಂಟದ ಡಾ. ಸಿದ್ದರಾಮ ಪೂಜ್ಯರು, ಕಾಯಕ ಜೀವ ಶಿವಾನಂದ ಪಟ್ಟಣಶೆಟ್ಟರು ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಭದ್ರಬೂನಾದಿಯನ್ನು ಹಾಕಿ ಇಂದು ಉಚ್ಚಾಯ ಮಟ್ಟಕ್ಕೆ ತಂದಿದ್ದಾರೆ. ಹಗಲಿರುಳು ಕಾಯಕ ತಪೋಭವದ ತತ್ಪರತೆಯಲ್ಲಿ ಸವೆದು ತೋಂಟದಾರ್ಯ ಮಠ ಸೇರಿದಂತೆ ಸಂಸ್ಥೆಯಡಿಯಲ್ಲಿನ ಎಲ್ಲಾ ಶಾಲಾ,ಕಾಲೇಜುಗಳನ್ನು ಹೆಮ್ಮರವಾಗಿ ಅಭಿವೃದ್ಧಿಪಡಿಸಿದ್ದಾರೆ. ಶಿಕ್ಷಣ ಸಂಸ್ಥೆಗಳನ್ನು ವಿಸ್ತಾರವಾಗಿ ಬೆಳೆಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ.ಆ ದಿಸೆಯಲ್ಲಿ ಅವರ ಶೈಕ್ಷಣಿಕ ಪ್ರೀತಿ,ಸಾಮಾಜಿಕ ಕಳಕಳಿ ಭಾವಪುಷ್ಪ ಅನನ್ಯವಾಗಿದೆ ಎಂದರು. 

        ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಅಧೀನದಲ್ಲಿ ನೂರಾರು ಶಿಕ್ಷಣ ಸಂಸ್ಥೆಗಳು ನಡೆಯುತ್ತಿದ್ದು ಮೂವತ್ತು ಸಾವಿರಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದಾರೆ. ಪಟ್ಟಣಶೆಟ್ಟರ ಅವರ ನಿಷ್ಕಲ್ಮಶ ಶ್ರಮಭಾವದಿಂದ ಹೆಚ್ಚು ಗ್ರಾಮಾಂತರ ಪ್ರದೇಶಗಳಲ್ಲಿ ಜ್ಞಾನ ಪ್ರಸರಣ ದಾಸೋಹ ನಡೆಯುತ್ತಿದೆ. ಅವರು ಯಾವುದೇ ಫಲಾಪೇಕ್ಷೆ ಇಲ್ಲದೆ ನಿರಪೇಕ್ಷ ಭಾವದಿಂದ ಸರಳತೆ ಕಾಯಕ ನಿಷ್ಠುರಾಗಿ ಪ್ರಾಮಾಣಿಕತೆ ಜೀವನ ಸಾಗಿಸುತ್ತಿದ್ದಾರೆ.ಅವರು ಸಮಾಜಕ್ಕೆ ಸದಾ ಒಳಿತು ಬಯಸಿ ಅಪೂರ್ವ ಸೇವಾಧಾರೆ ಎರೆದಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಅನುಪಮ ಸೇವೆಯೊಂದಿಗೆ ಅದ್ಭುತ ಯಶಸ್ಸು, ಕ್ರಾಂತಿ ಮಾಡಿರುವ ಇಂತಹ ವ್ಯಕ್ತಿಗಳನ್ನು ಶ್ರೀ ಮೋಟಗಿಮಠದವರು ಇಲ್ಲಿಗೆ ಬರ ಮಾಡಿಕೊಂಡು 2025 ರ ಸಮಾಜಸೇವಾ ಭೂಷಣ ಪ್ರಶಸ್ತಿಯನ್ನು ಪ್ರಧಾನ ಮಾಡಿರುವುದು ಸ್ತುತ್ಯಾರ್ಹವಾಗಿದೆ ಎಂದರು. 

      ಇವರೊಂದಿಗೆ ಸನ್ಮಾನವನ್ನು ಸ್ವೀಕರಿಸಿದ ಜಮಖಂಡಿ ಶಾಸಕರಾದ ಹಾಗೂ ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆ ಸ್ಥಾಪಕ ಜಗದೀಶ್ ಗುಡಗುಂಟಿ ಹಾಗೂ ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯಾದ ಡಾ.ಅಜಿತ್ ಪ್ರಸಾದ್, ಮೈಸೂರಿನ ಡಾ.ಚಂದ್ರಶೇಖರಯ್ಯ, ಬೆಂಗಳೂರಿನ ಕೆ.ವಿ.ನಾಗರಾಜಮೂರ್ತಿ, ಆನಂದ ತಾಳಿಕೋಟಿ ಇವರಿಗೂ ಸಹ ಸಮಾಜ ಸೇವಾ ಭೂಷಣ ಪ್ರಶಸ್ತಿ ಹಾಗೂ ಬಸವ ಸಂಸ್ಕೃತಿ ಪ್ರಸಾರಕ್ಕಾಗಿ ಸೇವಾಭಾವ ಮಿಡಿದಿರುವ ಅಂತರರಾಷ್ಟ್ರೀಯ ಬಸವ ಪ್ರತಿಷ್ಠಾನ ಅಧ್ಯಕ್ಷ ಲಂಡನ್ ಮಹಾದೇವಯ್ಯ ಅವರಿಗೆ 2025 ನೇ ಸಾಲಿನ ರಾಜ್ಯ ಮಟ್ಟದ ಬಸವಭೂಷಣ ಪ್ರಶಸ್ತಿ ಪ್ರಧಾನ ಮಾಡಿರುವುದು ಅಭಿನಂದನೀಯ ಎಂದು ತೋಂಟದ ಡಾ. ಸಿದ್ದರಾಮ ಶ್ರೀಗಳು ನುಡಿದರು. 

          ಬಸವಣ್ಣನವರ ಕಾಯಕ ಪ್ರೇಮದೊಂದಿಗೆ, ದಾಸೋಹ, ಜ್ಞಾನ ಪ್ರಸಾರದಂಥ ಮಾನನೀಯ ಮೌಲ್ಯಯುತ ಪರಂಪರೆಯನ್ನು ಅಥಣಿಯ ಮೋಟಗಿಮಠದವರು ನಿರಂತರವಾಗಿ ಮಾಡಿಕೊಂಡು ಬರುತ್ತಿರುವುದು ಮಠಾಧೀಶರಿಗೆ ಪ್ರೇರಣೆಯಾಗಿದೆ. ಸಂಪ್ರೇಮ, ಸಮಾನತೆ, ವಿಶ್ವಾಸ, ಸಾಮರಸ್ಯ, ಸೌಹಾರ್ದತೆ, ಮಾನವೀಯ ಮೌಲ್ಯಗಳನ್ನು ಪ್ರತಿಬಿಂಬಿಸಿದ ವಿಶ್ವದ 216 ಮಹಾತ್ಮರ ಚರಿತಾಮೃತವನ್ನು ಒಂದೇ ಗ್ರಂಥದ ಮೂಖೇನ ನಾಡಿಗೆ ನೀಡಿರುವ ಪ್ರಭುಚನ್ನಬಸವ ಸ್ವಾಮೀಜಿಯವರ ಕಾರ್ಯ ನಿಜಕ್ಕೂ ಅವಣೀ9ಯವಾಗಿದೆ ಎಂದು ಸಿದ್ದರಾಮ ಶ್ಲಾಘಿಸಿದರು. 

         ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿಯವರ ನೇತೃತ್ವದಲ್ಲಿ ಜರುಗಿದ ಸಮಾರಂಭವನ್ನು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಡಾ.ಶಿವರಾಜ ಪಾಟೀಲ ಉದ್ಘಾಟಿಸಿ, ಬಸವ ಪರಂಪರೆಯ ವೈವಿಧ್ಯತೆ ಪ್ರತಿಪಾದಿಸಿದರು. ಸಾಮರಸ್ಯದ ಲೀಲೆ, ಸಮಾನತೆಯ ತೋರಣ, ಐಕ್ಯತೆ ಮೊನಚು, ಭಾತೃತ್ವತೆ ಸಂದೇಶಗಳ ಮೇಲೆ ಬೆಳಕು ಚೆಲ್ಲಿದರು.  

ಮುಖ್ಯ ಅತಿಥಿಗಳಾಗಿ ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಸಿ.ಸೋಮಶೇಖರ್, ಅಂತರರಾಷ್ಟ್ರೀಯ ಬಸವ ಪ್ರತಿಷ್ಠಾನ ಲಂಡನ ಇದರ ಅಧ್ಯಕ್ಷರಾದ ಎಸ್‌. ಮಹದೇವಯ್ಯನವರು, ಲೋಕಸಭಾ ಸದಸ್ಯರಾದ ಪ್ರಿಯಾಂಕ ಸತೀಶ ಜಾರಕಿಹೊಳಿ, ರಾಜ್ಯಸಭಾ ಮಾಜಿ ಸದಸ್ಯ ಡಾ.ಪ್ರಭಾಕರ ಕೋರೆ ಮೊದಲಾದವರು ಭಾಗವಹಿಸಿದರು.     ಮೋಟಗಿಮಠದ ಪ್ರಭುಚನ್ನಬಸವ ಶ್ರೀಗಳು, ಶಿವಮೊಗ್ಗ ಜಿಲ್ಲೆ ಆನಂದಪುರಮಠದ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಶ್ರೀಗಳು, ವಿಜಯಪುರದ ಅಭಿನವ ಸಿದ್ಧಾರೂಢ ಶ್ರೀಗಳು, ಮಹಾಂತ ಶ್ರೀಗಳು, ಉತ್ತರಹಳ್ಳಿ ಆವಧೂತ ಪೀಠದ  ವಿನಯ ಗುರೂಜಿ, ಹುಕ್ಕೇರಿಮಠದ ಚಂದ್ರಶೇಖರ ಶಿವಾಚಾರ್ಯ ಶ್ರೀಗಳು, ಬೆಳಗಾವಿ ಡಾ.ಅಲ್ಲಮಪ್ರಭು ಶ್ರೀಗಳು, ನಾಗನೂರು ಮಠದ, ಶೇಗುಣಸಿ ಶ್ರೀಗಳು ಸಮ್ಮುಖ ವಹಿಸಿದ್ದರು.