ವಿಜಯಪುರ 23: ಜಿಲ್ಲೆಗೆ ಈವರೆಗೆ ವಿದೇಶ ಮತ್ತು ಇತರೆ ಪ್ರದೇಶಗಳಿಂದ ಒಟ್ಟು 1705 ಜನರು ಆಗಮಿಸಿರುವ ಬಗ್ಗೆ ವರದಿಯಾಗಿದ್ದು, ಒಟ್ಟು 37 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಸುದ್ಧಿಗಾರರಿಗೆ ಈ ವಿಷಯ ತಿಳಿಸಿದ ಅವರು ಜಿಲ್ಲೆಯ ಒಟ್ಟು 1426 ಜನರ ಗಂಟಲು ದ್ರವ ಮಾದರಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು, 1245 ನೆಗೆಟಿವ್ ವರದಿ ಬಂದಿದೆ. ಇನ್ನೂ 144 ಜನರ ವೈದ್ಯಕೀಯ ವರದಿ ಬರಬೇಕಾಗಿದ್ದು, ಇಂದಿನ 2 ಕೋವಿಡ್-19 ಪ್ರಕರಣಗಳು ಸೇರಿದಂತೆ ಒಟ್ಟು 37 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ ಎಂದು ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 378 ಜನರು 28 ದಿನಗಳ ಅವಧಿಯನ್ನು ಪೂರ್ಣಗೊಳಿಸಿದ್ದು, 1325 ಜನರು 1 ರಿಂದ 28 ದಿನಗಳ ರೀಪೋಟರ್ಿಂಗ್ ಅವಧಿಯಲ್ಲಿದ್ದಾರೆ. ಇಂದು ಕಂಡುಬಂದ ಕೋವಿಡ್-19 ಪಾಸಿಟಿವ್ ಪ್ರಕರಣಗಳಲ್ಲಿ ರೋಗಿ ಸಂಖ್ಯೆ 428 ಪುರುಷ ರೋಗಿ ಸಂಖ್ಯೆ 221 ಇವರ ಸಂಪರ್ಕದಿಂದ ಸೋಂಕು ತಗುಲಿದೆ. ಅದರಂತೆ ರೋಗಿ ಸಂಖ್ಯೆ 429 ಮಹಿಳೆಗೆ ಕೋವಿಡ್-19 ಸೋಂಕು ತಗುಲಿದ್ದು, ಸಂಪರ್ಕ ಪತ್ತೆ ಕಾರ್ಯ ತೀವ್ರಗತಿಯಲ್ಲಿ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಜಿಲ್ಲೆಯ ರೋಗಿ ಸಂಖ್ಯೆ 429ಗೆ ಸಂಬಂಧಪಟ್ಟಂತೆ ಡಾ.ಗಲಗಲಿ ಮತ್ತು ಆ ಸಂಸ್ಥೆಯ ಸಂಶೋಧನಾ ತಂಡದ ಮೂಲಕ ಪರಿಶೀಲನೆ ಕಾರ್ಯ ನಡೆದಿದೆ. ಈಗಾಗಲೇ ಶ್ವಾಸಕೋಶ, ಐಎಲ್ಐ ಸಂಬಂಧಿತ ಆರೋಗ್ಯ ಪರಿಶೀಲನೆಗೆ ಮೂರು ಹಿರಿಯ ವೈದ್ಯರನ್ನು ಒಳಗೊಂಡ ತಂಡ ಸಹ ರಚಿಸಲಾಗಿದ್ದು, ಇದರ ಆಧಾರದ ಮೇಲೆ ಸಂಪರ್ಕ ಪತ್ತೆ ಕಾರ್ಯ ಇನ್ನಷ್ಟು ತೀವ್ರಗೊಳಿಸಲಾಗುವುದು. ಅದರಂತೆ ಸಂಪರ್ಕ ಮೂಲದ ಬಗ್ಗೆ ಗುರುತಿಸುವ ಕಾರ್ಯ ಪ್ರಗತಿಯಲ್ಲಿದೆ. ಆಂಧ್ರಮೂಲದವರಾದ ಈ ರೋಗಿಯು ಕಳೆದ ತಿಂಗಳಿನಿಂದ ಎಲ್ಲಿಯೂ ಹೋದ ಬಗ್ಗೆ ಪ್ರಯಾಣ ವಿವರ ಇರುವುದಿಲ್ಲ ಎಂದು ತಿಳಿಸಿರುವ ಅವರು ಸಾರ್ವಜನಿಕರು ಕೂಡ ಆತಂಕ ಪಡುವ ಅಗತ್ಯವಿಲ್ಲವೆಂದು ಹೇಳಿದರು.
ವಿಜಯಪುರ ನಗರದ ಕಂಟೇನ್ಮೆಂಟ್, ಕ್ಲಸ್ಟರ್ ಪ್ರದೇಶ ಮತ್ತು ತಿಕೋಟಾ ತಾಲೂಕಿನ ರತ್ನಾಪೂರ ಕಂಟೇನ್ಮೆಂಟ್ ಪ್ರದೇಶ ಹೊರತು ಪಡಿಸಿ ಕೃಷಿ ಚಟುವಟಿಕೆ, ಕೃಷಿ ಪರಿಕರ, ರಸಗೊಬ್ಬರ, ಅವಶ್ಯಕ ವಸ್ತುಗಳ ಸಾಗಾಣಿಕೆ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಾಮಾಜಿಕ ಅಂತರ ನಿಯಮ ಪಾಲಿಸದೇ ಇದ್ದಲ್ಲಿ ಕಾನೂನಿನ ರೀತ್ಯ ಸೂಕ್ತಕ್ರಮ ಕೈಗೊಳ್ಳಲಾಗುತ್ತದೆ. ಅದರಂತೆ ಸಕರ್ಾರ ಅನುಮತಿಸಿದಂತೆ ಚಟುವಟಿಕೆಗಳನ್ನು ಕೈಗೊಳ್ಳುವ ಸಂದರ್ಭದಲ್ಲಿ ಕಡ್ಡಾಯವಾಗಿ ಸ್ಯಾನಿಟೈಜರ್, ಮಾಸ್ಕ್ ಬಳಸಲು ಸೂಚಿಸಲಾಗಿದೆ. ಗುರುತಿನ ಚೀಟಿಗಳ ದುರುಪಯೋಗವಾಗದಂತೆ ನಿಗಾ ಇಡಲಾಗಿದ್ದು, ತಪ್ಪಿತಸ್ಥರು ಕಂಡುಬಂದಲ್ಲಿ ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುತ್ತದೆ ಎಂದು ಅವರು ಹೇಳಿದರು.
ವಿಜಯಪುರಕ್ಕೆ ಆಗಮಿಸುವ ನಿರಾಶ್ರಿತರಿಗೆ ತಾತ್ಕಾಲಿಕ ಪುನರ್ವಸತಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಜಿಲ್ಲೆಯಿಂದ ರಾಜ್ಯದ ಇತರೆ ಜಿಲ್ಲೆಗೆ ಹೋಗಬಯಸುವ ಕಾಮರ್ಿಕರಿಗೆ ವೈದ್ಯಕೀಯ ಪರೀಕ್ಷೆ ನಡೆಸಿ ಕಳುಹಿಸಲು ಪ್ರಯತ್ನಿಸಲಾಗುತ್ತಿದ್ದು, ಹೊರರಾಜ್ಯಗಳಿಂದ ಜಿಲ್ಲೆಗೆ ಆಗಮಿಸುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಉಪಸ್ಥಿತರಿದ್ದರು.