ಮಿಡ್ನಾಪುರ; ಪಶ್ಚಿಮ ಬಂಗಾಳ ಮಿಡ್ನಾಪುರದಲ್ಲಿ ನಡೆದ ರೈತರ ಸಮಾವೇಶವನ್ನುದ್ದೇಶಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾತನಾಡುತ್ತಿದ್ದ ಸಂದರ್ಭದಲ್ಲಿಯೇ ಮೇಲ್ಚಾವಣಿಯೊಂದು ನೆರೆದಿದ್ದ ಜನರ ಮೇಲೆ ಕುಸಿದು ಬಿದ್ದ ಪರಿಣಾಮ 30 ಮಂದಿ ಗಾಯಗೊಂಡಿರುವ ಘಟನೆ ಸೋಮವಾರ ನಡೆದಿದೆ.
ಇಂದು ಬೆಳಿಗಿನ ಜಾವದಿಂದಲೂ ಸ್ಥಳದಲ್ಲಿ ಭಾರೀ ಮಳೆಯಾಗುತ್ತಿತ್ತು. ಮಳೆಯ ಪರಿಣಾಮ ಸಮಾವೇಶಕ್ಕೆ ಹಾಕಲಾಗಿದ್ದ ಮೇಲ್ಚಾವಣಿ ದುರ್ಬಲಗೊಂಡಿತ್ತು. ಮೇಲ್ಚಾವಣಿಯನ್ನು ಸರಿ ಮಾಡುವ ಯತ್ನಗಳೂ ಕೂಡ ನಡೆದಿತ್ತು.
ರ್ಯಾಲಿ ಆರಂಭವಾಗಾದ, ಪ್ರಧಾನಿ ಮೋದಿಯವರು ಜನತೆಯನ್ನುದ್ದೇಶಿ ಮಾತನಾಡುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಮೇಲ್ಚಾವಣಿ ನೆರೆದಿದ್ದ ಜನರ ಮೇಲೆ ಬಿದ್ದಿದೆ. ಕೂಡಲೇ ಭಾಷಣವನ್ನು ನಿಲ್ಲಿಸಿದ ಮೋದಿಯವರು ಹುಷಾರಾಗಿರುವಂತೆ ಜನರಿಗೆ ತಿಳಿಸಿದರು, ಅಲ್ಲದೆ, ಸುರಕ್ಷಿತ ಸ್ಥಳಕ್ಕೆ ಹೋಗುವಂತೆ ಸೂಚಿಸುತ್ತಿದ್ದರು. ಸಮಾವೇಶ ನೋಡುವ ಸಲುವಾಗಿ ಮೇಲ್ಚಾವಣಿಗಳ ಮೇಲೆ ನಿಂತಿದ್ದ ಜನರನ್ನು ಕೆಳಗಿಳಿಯುವಂತೆ ಮನವಿ ಮಾಡಿಕೊಳ್ಳುತ್ತಿದ್ದರು. ಭಯಪಡಬೇಡಿ, ಓಡಬೇಡಿ ಎಂದು ತಿಳಿಸುತ್ತಿದ್ದರು.
ಘಟನೆಯಲ್ಲಿ ಮಹಿಳೆಯರೂ ಸೇರಿದಂತೆ 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ರ್ಯಾಲಿ ಅಂತಿಮಗೊಂಡ ಬಳಿಕ ಪ್ರಧಾನಿ ಮೋದಿಯವರು ಸ್ವತಃ ಆಸ್ಪತ್ರೆಗಳಿಗೆ ತೆರಳಿ, ಗಾಯಾಳುಗಳ ಆರೋಗ್ಯ ವಿಚಾರಿಸಿದರು.