ಪ್ರಧಾನಿ ನರೇಂದ್ರ ಮೋದಿ ಅವರಿಂದ 77 ಅಡಿ ಶ್ರೀರಾಮ ಪ್ರತಿಮೆ ಆಧಾರಿತ ಥೀಮ್ ಪಾರ್ಕ್‌ ಅನಾವರಣ

ಪ್ರಧಾನಿ ನರೇಂದ್ರ ಮೋದಿ ಅವರಿಂದ 77 ಅಡಿ ಶ್ರೀರಾಮ ಪ್ರತಿಮೆ ಆಧಾರಿತ ಥೀಮ್ ಪಾರ್ಕ್‌ ಅನಾವರಣ Prime Minister Narendra Modi inaugurates theme park based on 77 feet Sri Rama statue

                      ಕಾರವಾರ 23:  ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಅತ್ಯಂತ ಪುರಾತನ ಮಠಗಳಲ್ಲಿ ಒಂದಾದ ಗೋಕರ್ಣ ಪರ್ತಗಾಳಿ ಶ್ರೀಮದ್ ಜೀವೋತ್ತಮ ಮಠವು ತನ್ನ 550ನೇ ವರ್ಷಾಚರಣೆ ’ಸಾರ್ಥ ಪಂಚಶತಮಾನೋತ್ಸವ’ವನ್ನು ಆಚರಿಸಲು ಸಿದ್ಧವಾಗಿದೆ ಎಂದು ಕಾರ್ಯಕ್ರಮ ಸಂಘಟನಾ ಸಮಿತಿಯ ಜಂಟಿಕಾರ್ಯದರ್ಶಿ ಅಣ್ಣಪ್ಪ ಕಾಮತ್  ಹೇಳಿದರು.ನಗರದ ಅಜ್ವಿ ಹೋಟೆಲ್ ಸಂಭಾಗಣದಲ್ಲಿ  ಮಾತನಾಡಿ, ಗೋವಾ ಕಾಣಕೋಣ ಸಮೀಪದ ಪರ್ತಗಾಳಿಯಲ್ಲಿರುವ ಕೇಂದ್ರ ಮಠದಲ್ಲಿ ನವೆಂಬರ್ 27 ರಿಂದ ಡಿಸೆಂಬರ್ 07 ರವರೆಗೆ  11 ದಿನಗಳ  ಕಾಲ ಧಾರ್ಮಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳು ಜರುಗಲಿವೆ ಎಂದರು. 550 ವರ್ಷಗಳ ಐತಿಹಾಸಿಕ ಪೀಠಕ್ರಿ.ಶ. 1475ರ ಮನ್ನಥ ನಾಮ ಸಂವತ್ಸರದ ಚೈತ್ರ ಶುಕ್ಲ ದ್ವಿತೀಯದಂದು ಶ್ರೀಕ್ಷೇತ್ರ ಬದರೀಕಾಶ್ರಮದಲ್ಲಿ ಶ್ರೀಮದ್   ನಾರಾಯಣ ತೀರ್ಥ ಸ್ವಾಮೀಜಿಯವರಿಂದ ಮಠದ ಗುರುಪರಂಪರೆ ಆರಂಭವಾಯಿತು. ಮಠದ ಪ್ರಧಾನ ದೇವರಾದ   ರಾಮದೇವರನ್ನು ಉಡುಪಿಯ ಶ್ರೀ ಪಲಿಮಾರು ಮಠದ ಗುರುವರ್ಯರು ಅನುಗ್ರಹಿಸಿದ್ದರು.

                    ಅಂದಿನಿಂದ ಇದುವರೆಗೆ 23 ಯತಿಗಳು ಪೀಠಾಧಿಪತಿಗಳಾಗಿ ಮಠವನ್ನು ಮುನ್ನಡೆಸಿದ್ದಾರೆ. ಪ್ರಸ್ತುತ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ವಿದ್ಯಾಧೀಶ ಶ್ರೀಪಾದ ವಡೇರ ಸ್ವಾಮೀಜಿಗಳು ಭಕ್ತರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಈ ಐತಿಹಾಸಿಕ ಸಂದರ್ಭದಲ್ಲಿ, ಮಠದ ಇತಿಹಾಸವನ್ನು ಅಜರಾಮರವಾಗಿಸುವ ನಿಟ್ಟಿನಲ್ಲಿ ಸ್ವಾಮೀಜಿಯವರ ದೂರದೃಷ್ಟಿತ್ವದೊಂದಿಗೆ ಮಠದ ಪ್ರಾಕಾರವು ಜೀರ್ಣೋದ್ಧಾರಗೊಂಡಿದೆ.ಪ್ರಧಾನಿ ಮೋದಿ ಅವರಿಂದ ಬೃಹತ್ ಶ್ರೀರಾಮ ಪ್ರತಿಮೆ ಅನಾವರಣಸಾರ್ಥ ಪಂಚಶತಮಾನೋತ್ಸವದ ಪ್ರಮುಖ ಆಕರ್ಷಣೆಯೆಂದರೆ, ಮಠದ ಆವರಣದಲ್ಲಿ ನಿರ್ಮಿಸಲಾದ 77 ಅಡಿ ಎತ್ತರದ ಕಂಚಿನ ಶ್ರೀರಾಮನ ಪ್ರತಿಮೆ ಮತ್ತು ರಾಮಾಯಣ ಆಧಾರಿತ ಥೀಮ್ ಪಾರ್ಕ್‌ ಅನಾವರಣ. ನವೆಂಬರ್ 28, ಶುಕ್ರವಾರ: ಬೆಳಗ್ಗೆ 11 ಗಂಟೆಗೆ ಪರಮಪೂಜ್ಯ   ವಿದ್ಯಾಧೀಶ ಶ್ರೀಪಾದ ವಡೇರ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಶ್ರೀರಾಮ ಮೂರ್ತಿಯ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಗಳು ನಡೆಯಲಿವೆ.ಅದೇ ದಿನ ಮಧ್ಯಾಹ್ನ 3.30 ರಿಂದ ಸಾಯಂಕಾಲ 5.00 ಗಂಟೆಯವರೆಗೆ  ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

                                ಅವರು   ಶ್ರೀರಾಮನ ಮೂರ್ತಿ, ಶ್ರೀ ರಾಮಾಯಣ ಥೀಮ್ ಪಾರ್ಕ್‌ ಮತ್ತು 3ಡಿ ಪ್ರೊಜೆಕ್ಷನ್ಗಳನ್ನು ಅನಾವರಣಗೊಳಿಸಿ, ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.ರಾಮ ನಾಮ ಜಪ ಅಭಿಯಾನ ಹಾಗೂ ರಥಯಾತ್ರೆಮಠದ 550 ವರ್ಷಗಳ ಪೂರೈಸಿದ ಹಿನ್ನೆಲೆಯಲ್ಲಿ, 550 ಕೋಟಿಗಿಂತ ಹೆಚ್ಚು ಶ್ರೀ ರಾಮ ತಾರಕ ಮಹಾಮಂತ್ರವನ್ನು ಜಪಿಸಬೇಕು ಎಂಬುದು ಪರಮಪೂಜ್ಯ ಸ್ವಾಮೀಜಿಗಳ ಸಂಕಲ್ಪವಾಗಿತ್ತು.ಶ್ರೀರಾಮ ನಾಮ ಜಪ ಅಭಿಯಾನ: 2024ರ ಏಪ್ರಿಲ್ 17 (ರಾಮನವಮಿ) ರಂದು ಆರಂಭಗೊಂಡ ಈ ಅಭಿಯಾನವು ದೇಶಾದ್ಯಂತ 120 ಜಪಕೇಂದ್ರ ಮತ್ತು 104 ಉಪಕೇಂದ್ರಗಳಲ್ಲಿ ಅಕ್ಟೋಬರ್ 18 ರವರೆಗೆ ನಿರಂತರವಾಗಿ ನಡೆಯಿತು.ಶ್ರೀರಾಮ ರಥ ಯಾತ್ರೆ: ಶ್ರೀಕ್ಷೇತ್ರ ಬದರೀಕಾಶ್ರಮದಿಂದ ಆರಂಭವಾದ ಶ್ರೀರಾಮ ರಥಯಾತ್ರೆಯು ದೇಶದ ವಿವಿಧ ತೀರ್ಥಕ್ಷೇತ್ರಗಳಿಗೆ ಭೇಟಿ ನೀಡಿ, ಇದೀಗ ಕಾರವಾರ ತಲುಪಿದೆ.

                   ಈ ರಥ ಯಾತ್ರೆಯು ನವೆಂಬರ್ 26 ರಂದು ಪರ್ತಗಾಳಿ ಕೇಂದ್ರ ಮಠವನ್ನು ಪ್ರವೇಶಿಸಲಿದೆ.ಮಹೋತ್ಸವಕ್ಕೆ ಇತರ ಪೀಠಾಧಿಪತಿಗಳ ಆಗಮನಈ ಐತಿಹಾಸಿಕ ಆಚರಣೆಗೆ ಉಡುಪಿಯ   ಪಲಿಮಾರು ಮಠಾಧೀಶರಾದ ವಿದ್ಯಾಧೀಶ ತೀರ್ಥ ಸ್ವಾಮೀಜಿ, ಅವರ ಪಟ್ಟಶಿಷ್ಯ   ವಿದ್ಯರಾಜೇಶ್ವರ ತೀರ್ಥ ಸ್ವಾಮೀಜಿ,   ಕಾಶೀ ಮಠಾಧೀಶರಾದ ಶ್ರೀಮದ್   ಸಂಯಮೀಂದ್ರ ತೀರ್ಥ ಸ್ವಾಮೀಜಿ,   ಸಂಸ್ಥಾನ ಗೌಡಪಾದಾಚಾರ್ಯ ಕವಳೆ ಮಠಾಧೀಶರಾದ    ಶಿವಾನಂದ ಸರಸ್ವತೀ ಸ್ವಾಮೀಜಿ ಹಾಗೂ   ಚಿತ್ರಾಪುರ ಮಠಾಧೀಶ   ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ ಅವರಿಗೆ ಗೌರವಪೂರ್ವಕವಾಗಿ ಸ್ನೇಹಪತ್ರವನ್ನು ನೀಡಲಾಗಿದೆ.ಮಠದ ಇತಿಹಾಸ, ಪರಂಪರೆ ಮತ್ತು ಜೀರ್ಣೋದ್ಧಾರಗೊಂಡ ಪ್ರಾಕಾರವನ್ನು ಕಣ್ತುಂಬಿಕೊಳ್ಳಲು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಠದ ಆಡಳಿತ ಮಂಡಳಿ ಕೋರಿದೆ. ಈ ಸಂದರ್ಭ ಕಾರ್ಯಕ್ರಮ ಸಂಚಾಲಕ ಪ್ರದೀಪ್ ಪೈ ಹಾಗೂ ಇತರರು ಉಪಸ್ಥಿತರಿದ್ದರು.....