ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಸಲ್ಲದು: ರಮೇಶ ಕತ್ತಿ ಹುಲ್ಲೋಳಿ ಅರಿಹಂತ ಸೌಹಾರ್ದ ಸಹಕಾರಿ ಸಂಘದ ಬೆಳ್ಳಿ ಹಬ್ಬದ ಮಹೋತ್ಸವ
ಹುಕ್ಕೇರಿ 27: ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಬೆರೆಯುವುದು ಒಳ್ಳೆಯ ಬೆಳವಣಿಗೆಯಲ್ಲ. ಸಹಕಾರಿ ಸಂಸ್ಥೆಗಳು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡು ಸಮಾಜದ ಉನ್ನತಿಗೆ ಶ್ರಮಿಸಬೇಕಿರುವ ಅಗತ್ಯವಿದ್ದು ಈ ನಿಟ್ಟಿನಲ್ಲಿ ಗ್ರಾಮೀಣ ಜನರ ಒಡನಾಡಿಯಾಗಿ ಸೇವೆ ಸಲ್ಲಿಸುತ್ತಿರುವ ಅರಿಹಂತ ಬ್ಯಾಂಕ್ ಗ್ರಾಹಕ ಸ್ನೇಹಿಯಾಗಿ ಹೊರಹೊಮ್ಮಿದೆ ಎಂದು ಮಾಜಿ ಸಂಸದ ರಮೇಶ ಕತ್ತಿ ಅಭಿಪ್ರಾಯಪಟ್ಟರು.
ತಾಲೂಕಿನ ಹುಲ್ಲೋಳಿಯಲ್ಲಿ ಅರಿಹಂತ ಸೌಹಾರ್ದ ಸಹಕಾರಿ ಸಂಘವು 25 ವರ್ಷ ಪೂರೈಸಿದ ಪ್ರಯುಕ್ತ ಗುರುವಾರ ಆಯೋಜಿಸಿದ ಬೆಳ್ಳಿ ಹಬ್ಬದ ಮಹೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೇವಲ ಸರ್ಕಾರದಿಂದ ಎಲ್ಲವನ್ನೂ ಸುಧಾರಿಸಲು ಆಗದು. ಸಂಘ-ಸಂಸ್ಥೆಗಳು ಕೂಡ ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಬೇಕು ಎಂದರು.
ಗ್ರಾಮೀಣ ಭಾಗದ ಬಡಜನರಿಗೆ, ಕೂಲಿ ಕಾರ್ಮಿಕರಿಗೆ, ರೈತರಿಗೆ, ಚಿಕ್ಕ ವ್ಯಾಪಾರಸ್ಥರಿಗೆ ಆರ್ಥಿಕ ನೆರವು ಕಲ್ಪಿಸುವ ಉದ್ದೇಶದಿಂದ ಆರಂಭವಾದ ಅರಿಹಂತ ಸೌಹಾರ್ದ ಸಹಕಾರಿ ಬ್ಯಾಂಕ್ ಇಂದು ಹೆಮ್ಮೆರವಾಗಿ ಬೆಳೆದಿದೆ. ಈ ಭಾಗದ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ, ನಿರುದ್ಯೋಗ ನಿವಾರಣೆಯಲ್ಲಿ ಸಂಸ್ಥೆ ತನ್ನದೇಯಾದ ಕೊಡುಗೆ ನೀಡಿದೆ. ಜೊತೆಗೆ ಶಿಕ್ಷಣ ಸಂಸ್ಥೆಯ ಮೂಲಕವೂ ವಿದ್ಯಾದಾನದಂತ ಅಪರೂಪದ ಸೇವೆಯಲ್ಲಿ ತೊಡಗಿಸಿಕೊಂಡಿದೆ ಎಂದು ಅವರು ಬಣ್ಣಿಸಿದರು.
ಸಾನಿಧ್ಯ ವಹಿಸಿದ್ದ ಶ್ರವಣಬೆಳಗೊಳ ಅಭಿನವ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬರೂ ಪರೋಪಕಾರ ಗುಣ ಬೆಳೆಸಿಕೊಳ್ಳಬೇಕು. ಮತ್ತೊಬ್ಬರ ಒಳಿತಿಗಾಗಿ, ಲೋಕಕಲ್ಯಾಣಕ್ಕಾಗಿ ಸವೆಸುವ ಜೀವನ ಸಾರ್ಥಕತೆ ಪಡೆದುಕೊಳ್ಳುತ್ತದೆ ಎಂದರು.
ಬೆಳ್ಳಿ ಹಬ್ಬ ಸಂಭ್ರಮದ ಸವಿನೆನಪಿಗಾಗಿ ಸದಸ್ಯರಿಗೆ 10 ಗ್ರಾಂ ಬೆಳ್ಳಿ ನಾಣ್ಯ ವಿತರಿಸಿದ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಮಾತನಾಡಿ, ಈ ಸಂಸ್ಥೆಯು ಸಹಕಾರಿ ಕ್ಷೇತ್ರದಲ್ಲಿ ಮಾದರಿಯಾಗಿ ಬೆಳೆದಿದ್ದು ಇತರರಿಗೆ ಪ್ರೇರಣಾದಾಯಕವಾಗಿದೆ ಎಂದರು.
ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕ್ಯಾರಗುಡ್ ಅಭಿನವ ಮಂಜುನಾಥ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಹಿರಿಯ ನ್ಯಾಯವಾದಿಯೂ ಆದ ನಿರ್ದೇಶಕ ಪಿ.ಆರ್.ಚೌಗಲಾ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಧ್ಯಕ್ಷ ಬಿ.ಬಿ.ಚೌಗಲಾ, ಉಪಾಧ್ಯಕ್ಷ ಬಾಹುಬಲಿ ನಾಗನೂರಿ, ಪ್ರಧಾನ ವ್ಯವಸ್ಥಾಪಕ ಆನಂದ ಚೌಗಲಾ, ಮುಖಂಡರಾದ ಮಹಾವೀರ ನಿಲಜಗಿ, ಉತ್ತಮ ಪಾಟೀಲ, ವಿನೋದ ದೊಡ್ಡಣ್ಣವರ, ಪಾರೀಸ ಉಗಾರೆ, ಪ್ರಕಾಶ ಪಾಟೀಲ, ಗಜಾನನ ಕ್ವಳ್ಳಿ, ಸೌಹಾರ್ದ ಸಹಕಾರಿ ವಿಭಾಗೀಯ ಅಧಿಕಾರಿ ಬಸವರಾಜ ಪಾಟೀಲ, ಲೆಕ್ಕ ಪರಿಶೋಧಕ ಎಸ್.ಬಿ.ಲಠ್ಠೆ, ಜಿನ್ನಪ್ಪಾ ಅಸ್ಕಿ, ನಿರ್ದೇಶಕರಾದ ರವೀಂದ್ರ ಚೌಗಲಾ, ಜಯಪಾಲ ಚೌಗಲಾ, ರಾಮಣ್ಣಾ ಗೋಟೂರಿ, ಜಿನ್ನಪ್ಪಾ ಸಪ್ತಸಾಗರ, ಅಶೋಕ ಚೌಗಲಾ, ಪ್ರಕಾಶ ಚೌಗಲಾ, ಬಾಬು ಅಕ್ಕಿವಾಟೆ, ಶೃತಿ ಪಾಟೀಲ, ಸುಮತಿ ಚೌಗಲಾ, ಮಾಯಪ್ಪಾ ಹೊಳೆಪ್ಪಗೋಳ, ಬಸವರಾಜ ಪಾಟೀಲ, ಬಾಳಪ್ಪಾ ಸಂಕೇಶ್ವರಿ, ಅರುಣ ಚೌಗಲಾ ಮತ್ತಿತರರು ಉಪಸ್ಥಿತರಿದ್ದರು.
ಜಿ.ಎಸ್.ಚೌಗಲಾ ಸ್ವಾಗತಿಸಿದರು. ರಾಜೇಂದ್ರ ಸಾಂಗಾಂವೆ, ಆಶಾ ಯಮಕನಮರಡಿ ನಿರೂಪಿಸಿದರು. ಇದೇ ವೇಳೆ ಅರಿಹಂತ ಸಭಾಭವನದ ಅಡಿಗಲ್ಲು ನೆರವೇರಿಸಲಾಯಿತು.