ರಾಜಕೀಯ ಪಕ್ಷಗಳು ಮತಗಟ್ಟೆವಾರು ಬಿಎಲ್ಎಗಳ ನೇಮಕ ಮಾಡಲು ಸಲಹೆ

ಲೋಕದರ್ಶನ ವರದಿ

ವಿಜಯಪುರ 08:ಮುಂಬರುವ ಚುನಾವಣೆ ಸಂದರ್ಭದಲ್ಲಿ ಅರ್ಹ ಮತದಾರರೆಲ್ಲರೂ ಮತ ಚಲಾಯಿಸಲು ಅನುಕೂಲವಾಗುವಂತೆ ಲೋಪರಹಿತ ಶುದ್ಧ ಮತದಾರರ ಪಟ್ಟಿ ತಯಾರಿಸಲು ಸಂಬಂಧಪಟ್ಟ ರಾಜಕೀಯ ಪಕ್ಷಗಳು  ತಕ್ಷಣ ಮತಗಟ್ಟೆವಾರು  ಬಿಎಲ್ಎಗಳನ್ನು ನೇಮಿಸಿಕೊಳ್ಳುವಂತೆ ಮತದಾರರ ಪಟ್ಟಿ ವೀಕ್ಷಕರಾದ ತುಷಾರ ಗಿರಿನಾಥ್ ಅವರು ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಅವರು, ರಾಜಕೀಯ ಪಕ್ಷಗಳ ಬಿಎಲ್ಎ ನೇಮಿಸುವ ಮೂಲಕ ಮುಂದಿನ ಯಾದಿ ತಯಾರಿಕೆ ಸಂದರ್ಭದಲ್ಲಿ ವಿವಿಧ ಲೋಪ ದೋಷ ಸರಿಪಡಿಸಲು ಹಾಗೂ ಶುದ್ಧ ಮತದಾರರ ಪಟ್ಟಿ ತಯಾರಿಸಲು ಹೆಚ್ಚಿನ ಸಹಕಾರಿಯಾಗಲಿದೆ ಎಂದು ಹೇಳಿದರು.

ಇದೇ ಜನವರಿ 16 ರಂದು ಮತದಾರರ ಅಂತಿಮ ಪಟ್ಟಿ ಪ್ರಕಟವಾಗಲಿದೆ. ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮತದಾರರ ಸೇರ್ಪಡೆ ಪ್ರಮಾಣ ಕಡಿಮೆಯಾಗಿರುವ ಹಿನ್ನಲೆಯಲ್ಲಿ ಈ ಕುರಿತಂತೆ ಮುಂದಿನ ದಿನಗಳಲ್ಲಿ ಅಧಿಕಾರಿಗಳು ಸೂಕ್ತ ಗಮನ ನೀಡುವಂತೆ ಇದೇ ಸಂದರ್ಭದಲ್ಲಿ ಸೂಚಿಸಿದರು.

ಅಧಿಕಾರಿಗಳೊಂದಿಗೆ ಸಭೆ : ಜಿಲ್ಲೆಯಲ್ಲಿ 4076 ಮತದಾರರ ಛಾಯಾಚಿತ್ರ ಲಭ್ಯವಿಲ್ಲದಿರುವ ಕುರಿತಂತೆ ಸೂಕ್ತ ಪರಿಶೀಲನೆ ನಡೆಸಬೇಕು. ಮನೆ-ಮನೆಗೆ ತೆರಳಿ ಹಾಗೂ ಕಳೆದ ಚುನಾವಣೆಯಲ್ಲಿ ಮತದಾನ ಮಾಡಿರುವ ಕುರಿತಂತೆ ಪರಿಶೀಲನೆ ನಡೆಸಿ, ಛಾಯಾಚಿತ್ರ ಪಡೆದು, ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೆ ಕ್ರಮ ಕೈಗೊಳ್ಳಬೇಕು. ಮತದಾರರು ಲಭ್ಯವಿಲ್ಲದಿದ್ದಲ್ಲಿ ನೋಟಿಸ್ ಜಾರಿಗೊಳಿಸಿ ನಿಯಮಾವಳಿಯಂತೆ  ಕಾನೂನಿನ ಅನ್ವಯ ಸೂಕ್ತ ಕ್ರಮ ಕೈಗೊಳ್ಳಬೇಕು. ಮತದಾರರ ಪಟ್ಟಿಯಿಂದ ಮತದಾರರನ್ನು ಕೈ ಬಿಡುವ ಸಂದರ್ಭದಲ್ಲಿ ಕಟ್ಟುನಿಟ್ಟಾಗಿ ನಿಯಮಾವಳಿಗಳನ್ನು ಪರಿಪಾಲಿಸುವಂತೆ ಸಂಬಂಧಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಮತದಾರರಿಂದ ದೂರು ಸ್ವೀಕಾರಕ್ಕೆ ಸಂಬಂಧಿಸಿದಂತೆ ಇದೇ ಜನವರಿ 11ರಿಂದ ಕಂಟ್ರೋಲ್ ರೂಂ ಆರಂಭಿಸಿ, ಸಿಬ್ಬಂದಿಗಳನ್ನು ನಿಯೋಜಿಸಬೇಕು. ಮತದಾರರ ಡಿಲಿಶನ್ಗೆ ಸಂಬಂಧಿಸಿದಂತೆ ದಾಖಲಾತಿಗಳನ್ನು  ಸಮರ್ಪಕವಾಗಿ ಇಟ್ಟುಕೊಳ್ಳಬೇಕು. ಇದೇ ಜನವರಿ 25 ರಂದು ರಾಷ್ಟ್ರೀಯ ಮತದಾರರ ದಿನಾಚರಣೆ ಅರ್ಥಪೂರ್ಣವಾಗಿ ಆಚರಿಸುವ ಜೊತೆಗೆ ಯುವ ಮತದಾರರಿಗೆ  ಎಪಿಕ್ ಕಾಡರ್್ಗಳನ್ನು ವಿತರಿಸುವುದು ಹಾಗೂ ಅವಶ್ಯಕ ಮಾನದಂಡಗಳ ಆಧಾರದ ಮೇಲೆ ಉತ್ತಮ ಬಿಎಲ್ಓಗಳನ್ನು ಆಯ್ಕೆ ಮಾಡಬೇಕು ಎಂದು ಹೇಳಿದರು. 

ಸಭೆಯಲ್ಲಿ ಜಿಲ್ಲಾಧಿಕಾರಿ ಎಸ್.ಬಿ.ಶೆಟ್ಟೆಣ್ಣವರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಕಾಸ ಕಿಶೋರ ಸುರಳಕರ, ಅಪರ ಜಿಲ್ಲಾಧಿಕಾರಿ ಎಚ್.ಪ್ರಸನ್ನ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.