ಅಪರಿಚಿತ ಶವ ಅಂದ್ಕೊಂಡು ಅಂತ್ಯಸಂಸ್ಕಾರ ಮಾಡಿದ ಪೊಲೀಸರು...!
ರಾಣೇಬೆನ್ನೂರು 15: ಸಾಮಾನ್ಯವಾಗಿ ಯಾವುದೇ ಅಪರಿಚಿತ ಶವ ಸಿಕ್ಕರೂ ಕನಿಷ್ಠ ಆ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಮಿಸ್ಸಿಂಗ್ ಕಂಪ್ಲೇಂಟ್ಗಳನ್ನು ನೋಡಿ ಅವರಿಗೆ ತಿಳಿಸುವುದು ಪೊಲೀಸ್ ಇಲಾಖೆಯ ವಾಡಿಕೆ. ಅದರಲ್ಲೂ ಮಹಿಳೆ, ಯುವತಿ, ಅಪ್ರಾಪ್ತ ಯುವತಿ ಆಗಿದ್ದಲ್ಲಿ ಪೊಲೀಸರು ಇನ್ನಷ್ಟು ಎಚ್ಚರಿಕೆಯಿಂದ ಈ ಕೆಲಸ ಮಾಡುತ್ತಾರೆ. ಮಾಡಬೇಕಾಗುತ್ತದೆ. ಆದರೆ, ರಾಣೇಬೆನ್ನೂರು ತಾಲೂಕಿನ ಹಲಗೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈಗ 22 ವರ್ಷದ ಯುವತಿಯ ಕೊಲೆ ಆಗಿದ್ದು, ಅಪರಿಚಿತ ಶವ ಎಂದುಕೊಂಡು ಪೊಲೀಸರೇ ಅಂತ್ಯಸಂಸ್ಕಾರ ಮಾಡಿರುವ ಘಟನೆ ನಡೆದಿದೆ. ಮರಣೋತ್ತರ ಪರೀಕ್ಷೆಯಲ್ಲಿ ಯುವತಿಯ ಕೊಲೆಯಾಗಿರುವ ದೃಢವಾದ ಬೆನ್ನಲ್ಲಿಯೇ ಯಾವುದೇ ಮಾಹಿತಿ ನೀಡದೇ ಅಂತ್ಯಸಂಸ್ಕಾರ ಮಾಡಿದ ಪೊಲೀಸರಿಗೆ ಸಂಕಷ್ಟ ಎದುರಾಗಿದೆ. ಜಿಲ್ಲೆಯ ರಟ್ಟಿಹಳ್ಳಿ ತಾಲ್ಲೂಕಿನ ಮಾಸೂರು ಗ್ರಾಮದ ಯುವತಿ 22 ವರ್ಷದ ಸ್ವಾತಿ ಬ್ಯಾಡಗಿ ಮಾರ್ಚ್ 3 ರಂದು ನಾಪತ್ತೆಯಾಗಿದ್ದಳು. ಮೂರು ದಿನಗಳ ಕಾಲ ಮನೆಯವರೆಲ್ಲಾ ಹುಡುಕಿ 7ನೇ ತಾರೀಖಿನಿಂದ ಮಿಸ್ಸಿಂಗ್ ದೂರು ದಾಖಲಿಸಿದ್ದಾರೆ. ಆದರೆ ಇದೀಗ ಸ್ವಾತಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಪತ್ತೇಪುರ ಗ್ರಾಮದ ತುಂಗಭದ್ರಾ ನದಿ ಬಳಿ ಪತ್ತೆಯಾಗಿತ್ತು. ಮಾರ್ಚ್ 6 ರಂದು ಯುವತಿಯ ಮೃತದೇಹ ಸಿಕ್ಕಿತ್ತು.