ಸೀರ್ಬಡ್ ನಿರಾಶ್ರಿತರ ಕಾಲನಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಮನವಿ
ಕಾರವಾರ 01: ತಾಲೂಕಿನ ತೋಡೂರು ಸೀರ್ಬಡ್ ನಿರಾಶ್ರಿತರ ಕಾಲನಿಯಲ್ಲಿ ಎದುರಾಗಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕೆಂದು ತೋಡೂರು ಸೀರ್ಬಡ್ ನಿರಾಶ್ರಿತರ ಕಾಲನಿಯ ನಿವಾಸಿಗಳು ಮಂಗಳವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ತೋಡೂರು ಸೀರ್ಬಡ ನಿರಾಶ್ರಿತರ ಕಾಲನಿಯ ನಿವಾಸಿಗಳಿಗೆ ಈ ಹಿಂದೆ ಬೊರವೆಲ್ ಹಾಗೂ ಜಲ ಮಂಡಳಿಯಿಂದ ಸರ್ಮಪಕವಾಗಿ ನೀರು ಪೂರೈಕೆ ಮಾಡಲಾಗುತ್ತಿತ್ತು. ಹಾಗೆಯೇ ಕಳೆದ ಎರಡು ವರ್ಷದಿಂದ ಜಿಲ್ಲಾ ಪಂಚಾಯಿತಿಯಿಂದ ಜೆಜೆಎಮ್ ಕಾಮಗಾರಿಯನ್ನು ಕೂಡ ಪ್ರಾರಂಭಿಸಲಾಗಿತ್ತು. ಆದರೆ ಈ ಭಾಗದಲ್ಲಿ ಹಳೆಯ ಪೈಪ್ ಲೈನನ್ನು ತೆಗೆದು ಕಾಮಗಾರಿ ನಡೆಸಲಾಗಿದ್ದು, ವರ್ಷ ಎರಡಾದರೂ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.ಈ ಬಗ್ಗೆ ಸಂಬಂಧಿಸಿದ ಗುತ್ತಿಗೆದಾರ ಸಾಯಿನಾಥ ನಾಯ್ಕ ಅಂಕೊಲಾ ಅವರ ಗಮನಕ್ಕೆ ತಂದರೆ ಕಾಮಗಾರಿ ಪೂರ್ಣಗೊಳಿಸುವ ಬಗ್ಗೆ ಭರವಸೆ ಮಾತ್ರ ನೀಡುತ್ತಾರೆ. ಆದರೆ ಈವರೆಗೆ ಕಾಮಗಾರಿಯನ್ನು ಪೂರ್ಣಗೊಳಿಸಿಲ್ಲ. ಇದರ ಬಗ್ಗೆ ಪಂಚಾಯತ ಗಮನಕ್ಕೆ ತಂದರೆ, ಪಂಚಾಯಿತಿಯವರು ತಮಗೆ ಸಂಬಂಧ ಇರುವುದಿಲ್ಲವೆಂದು ಮೌಖಿಕವಾಗಿ ತಿಳಿಸಿದ್ದಾರೆ. ಆದರೆ ಇದರಿಂದ ಸ್ಥಳೀಯರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ಬೇರೆಯವರ ಮನೆಗೆ ತೆರಳಿ ಕುಡಿಯುವ ನೀರನ್ನು ತರಬೇಕಾಗುತ್ತದೆ. ಆದರೆ ಬೇಸಿಗೆಯಲ್ಲಿ ಬಾವಿಯ ನೀರು ಸಹ ಬತ್ತುತ್ತದೆ. ಹೀಗಾಗಿ ತೋಡೂರು ಸೀರ್ಬಡ ನಿರಾಶ್ರಿತ ಕಾಲನಿಯ ನಿವಾಸಿಗಳಿಗೆ ಕುಡಿಯುವ ನೀರಿನ ಸಮಸ್ಯೆಯನ್ನು ಆದಷ್ಟು ಬೇಗನೆ ಬಗೆಹರಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. ಸ್ಥಳೀಯರಾದ ಪೂರ್ಣಿಮಾ ಮಹೇಕರ, ಪ್ರೇಮಾ ಗುನಗಿ, ಅಶೋಕ ಗೌಡ, ಗಣಪತಿ ಗೌಡ, ಶಕುಂತಲಾ ಗೌಡ, ಗೀತಾ ಗೌಡ, ವಿಮಲಾ ದೇಶಭಂಡಾರಿ, ವಿದ್ಯಾ ಆಗೇರ ಸೇರಿದಂತೆ ಹಲವರು ಇದ್ದರು.