ಗಿಡ ಮರಗಳ ಬೆಳಸಿ ಸಕಲ ಜೀವ ಸಂಕುಲ ಉಳಿಸಿ

Plant trees and save all life

ಗಿಡ ಮರಗಳ ಬೆಳಸಿ ಸಕಲ ಜೀವ ಸಂಕುಲ ಉಳಿಸಿ 

ಬ್ಯಾಡಗಿ 10: ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಗಿಡ ಮರಗಳನ್ನು ಬೆಳಸಿ ಜೀವವೈವಿಧ್ಯಗಳು ಜೀವಂತವಾಗಿರಲು ಆಶ್ರಯ ನೀಡಬೇಕಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು. ಗುರುವಾರ ಪಟ್ಟಣದ ಪುರಸಭೆಯಲ್ಲಿ ಕರ್ನಾಟಕ ಜೀವವೈವಿಧ್ಯ ಮಂಡಳಿಯಿಂದ ಕೊಡಮಾಡಲಾಗಿರುವ ಅಭಿನಂದನಾ ಪ್ರಶಸ್ತಿಯನ್ನು ಸ್ಥಳೀಯ ಜೀವವೈವಿಧ್ಯ ನಿರ್ವಹಣಾ ಸಮಿತಿಯವರಿಗೆ ವಿತರಿಸಿ ಮಾತನಾಡಿದರು.  

ನಾಡಿನಲ್ಲಿ  30 ವರ್ಷಗಳ ಹಿಂದೆ ಕಂಡ ದೃಶ್ಯವನ್ನು ಇಂದು ನೋಡಲು ಅಸಾಧ್ಯ. ಸಂಪೂರ್ಣ ಬದಲಾಗಿರುವ ಸನ್ನಿವೇಶ ಚಿತ್ರಣ ಕಂಡು “ಹೀಗಾಯಿತೆ?’ಎಂದು ಮರುಗುತ್ತಿದ್ದೇವೆ. ಈಗಲಾದರೂ ಪರಿಸರ ರಕ್ಷಣೆ ನಮ್ಮೆಲ್ಲರದೆಂದು ತ್ರಿಕರಣ ಪೂರ್ವಕ ಪರಿಸರ ಪ್ರೀತಿ ರಕ್ತಗತಗೊಳಿಸಬೇಕಿದೆ ಎಂದರು. ಗಂಗಣ್ಣ ಯಲಿ ಮಾತನಾಡಿ ಜೀವವೈವಿಧ್ಯತೆಯನ್ನು ಆದ್ಯ ಕರ್ತವ್ಯವಾಗಿ ಪರಿಗಣಿಸಿ ಸಂರಕ್ಷಿಸಬೇಕಾಗಿದೆ. ಮಾನವರಿಗೆ ಮಾತ್ರವಲ್ಲದೆ ಸಕಲ ಜೀವರಾಶಿಗಳಿಗೆ ಆಶ್ರಯ, ಆಹಾರ ನೀಡುವ ಜೀವ ವೈವಿಧ್ಯತೆ ಕುರಿತು ಹೆಚ್ಚು ಹೆಚ್ಚು ಆಸಕ್ತಿ ಹೊಂದಬೇಕಿದೆ.  

ವಿನಾಶ ತಡೆದು ಪರಿಸರ ಸಹ್ಯ ವಿಕಾಸದತ್ತ ಎಲ್ಲರೂ ಶ್ರಮಿಸಬೇಕೆಂದರು. ಈ ಸಂಧರ್ಭದಲ್ಲಿ ಪುರಸಭೆ ಅಧ್ಯಕ್ಷ ಬಾಲಚಂದ್ರಗೌಡ ಪಾಟೀಲ, ಉಪಾಧ್ಯಕ್ಷ ಸುಭಾಸ ಮಾಳಗಿ, ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಣ್ಣ ಶೆಟ್ಟರ, ಮುಖ್ಯಾಧಿಕಾರಿ ವಿನಯಕುಮಾರ್ ಹೊಳೆಪ್ಪಗೋಳ, ಪರಿಸರಸ್ನೇಹಿ ಅಧ್ಯಕ್ಷ ಸಿ.ಎಚ್‌.ಮೋಹನಕುಮಾರ, ನಿರ್ದೇಶಕಿ ವಿದ್ಯಾ ಶೆಟ್ಟಿ ಸೇರಿದಂತೆ ಇತರರಿದ್ದರು.