ಪೇಟೆ ಬಸವೇಶ್ವರ ಮತ್ತು ನೀಲಮ್ಮನವರ ಸಂಭ್ರಮದ ಜೋಡಿ ಮಹಾ ರಥೋತ್ಸವ
ಕಂಪ್ಲಿ 10: ಸ್ಥಳೀಯ ಪಟ್ಟಣದ ಆರಾಧ್ಯ ದೈವವಾಗಿರುವ ಪೇಟೆ ಬಸವೇಶ್ವರ ಮತ್ತು ನೀಲಮ್ಮನವರ ಜೋಡಿ ಮಹಾರಥೋತ್ಸವ ಮಂಗಳವಾರ ಸಂಜೆ ಶ್ರದ್ಧೆ ಭಕ್ತಿ ಸಡಗರ ಸಂಭ್ರಮಗಳಿಂದ ನೆರೆದಿದ್ದ ಸಾವಿರಾರು ಸದ್ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. “ಜನಸಮೂಹ ಸೇರುವ ಸಮ್ಮೇಳನವೇ ಜಾತ್ರೆಯ ಉದ್ದೇಶ” ಎನ್ನುವ ಸದುದ್ದೇಶದಿಂದ ನಡೆಯುತ್ತಿರುವ ಕಂಪ್ಲಿ ಪೇಟೆ ಬಸವೇಶ್ವರ ಮತ್ತು ನೀಲಮ್ಮನವರ ಜೋಡಿ ರಥೋತ್ಸವವು ಕಂಪ್ಲಿ ಭಾಗದಲ್ಲಿಯೇ ಅತ್ಯಂತ ಮಹತ್ವದ ಜಾತ್ರಾ ಮಹೋತ್ಸವವಾಗಿದೆ.
ಯಾಕೆಂದರೆ ಈ ಭಾಗದಲ್ಲಿ ಹಂಪಿಯನ್ನು ಹೊರತು ಪಡಿಸಿದರೆ ಕಂಪ್ಲಿ ಪೇಟೆ ಬಸವೇಶ್ವರ ಜಾತ್ರಾ ಮಹೋತ್ಸವವೇ ಅತ್ಯಂತ ದೊಡ್ಡ ಜಾತ್ರಾ ಮಹೋತ್ಸವ ಆಗಿದ್ದು,. ಈ ಹಿನ್ನೆಲೆಯಲ್ಲಿ ಈ ಜಾತ್ರಾ ಮಹೋತ್ಸವಕ್ಕೆ ಹೆಚ್ಚಿನ ಮಹತ್ವವಿದೆ. ಜೋಡಿ ಮಹಾ ರಥೋತ್ಸವದ ಅಂಗವಾಗಿ ಕಳೆದ ಮೂರು ದಿನದಿಂದ ಬಸವೇಶ್ವರರ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದ್ದವು. ಡಿ.9 ರಂದು ರಾತ್ರಿ ಅತ್ಯಾಕರ್ಷಕ ಹೂವಿನ ಪಲ್ಲಕ್ಕಿ ಉತ್ಸವವು ಅತ್ಯಂತ ವಿಜೃಂಭಣೆಯಿಂದ ಪಟ್ಟಣದ ಪ್ರಮುಖ ಬೀದಿಯಲ್ಲಿ ಜರುಗಿತು.
ಪಲ್ಲಕ್ಕಿ ಉತ್ಸವದಲ್ಲಿ ವಿವಿಧ ಜಾನಪದ ಕಲಾತಂಡಗಳು ಭಾಗವಹಿಸಿದ್ದವು. ಮಂಗಳವಾರ ಸಂಜೆ ಪೇಟೆ ಬಸವೇಶ್ವರ ಮತ್ತು ನೀಲಮ್ಮನವರ ಜೋಡಿ ಮಹಾರಥೊತ್ಸವವು ಅತ್ಯಂತ ವಿಜೃಂಭಣೆಯಿಂದ ಜರುಗಿತು. ರಥೋತ್ಸವಕ್ಕೂ ಮುನ್ನ ರಥದ ಧ್ವಜಗಳನ್ನು ಹರಾಜು ಹಾಕಲಾಯಿತು. ಇದರಲ್ಲಿ ಪಟ್ಟಣದ ವಿವಿಧ ಧರ್ಮಗಳ ಮುಖಂಡರು ಭಾಗವಹಿಸಿದ್ದರು. ನಂತರ ಸರಿಯಾಗಿ ವಿವಿಧ ಹೂಗಳು, ಮಹಾಭಾರತ ಮತ್ತು ರಾಮಾಯಣದ ಪಾತ್ರಗಳ ಗೊಂಬೆಗಳಿಂದ, ಬಣ್ಣ,ಬಣ್ಣದ ಧ್ವಜಗಳಿಂದ,ತಳೀರು ತೋರಣಗಳಿಂದ ಶೃಂಗರಿಸಿದ ಜೋಡಿ ರಥಗಳ ಉತ್ಸವವು ಪಟ್ಟಣದ ಪ್ರಮುಖ ಬೀದಿಯಲ್ಲಿ ಸಾಗಿತು.
ಬೀದಿಯ ಎರಡು ಪಕ್ಕದಲ್ಲಿ ಮತ್ತು ಕಟ್ಟಡಗಳ ಮೇಲೆ ನೆರೆದಿದ್ದ ಸಾವಿರಾರು ಮಹಿಳೆಯರು, ಮಕ್ಕಳು ಮತ್ತು ನಾಗರೀಕರು ತೇರಿಗೆ ತಮ್ಮ ಹರಕೆಯಂತೆ ಹೂ, ಉತ್ತತ್ತಿಗಳನ್ನು ಎಸೆದು ತಮ್ಮ ಹರಕೆಗಳನ್ನು ತೀರಿಸಿದರು. ರಥೋತ್ಸವದಲ್ಲಿ ಸಕಲ ಮಂಗಲವಾದ್ಯಗಳು, ಮತ್ತು ವಿವಿಧ ಜನಪದ ಕಲಾ ತಂಡಗಳು ವಿವಿಧ ದೇವಸ್ಥಾನಗಳ ಭಜನಾ ಮಂಡಳಿಗಳು ಭಾಗವಹಿಸಿದ್ದರು. ನಂತರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ರಥೋತ್ಸವದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಿರಲಿ ಎಂದು ಪಿಐ ಕೆ.ಬಿ.ವಾಸುಕುಮಾರ್ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳು ವ್ಯಾಪಕ ಬಂದೋಬಸ್ತ್ ಏರಿ್ಡಸಿದ್ದರು. ರಥೋತ್ಸವದಲ್ಲಿ ವೀರಶೈವ ಸಮಾಜದ ಮುಖಂಡರು, ಸಮಾಜದ ಯುವಕರು ವಿವಿಧ ಸಮಾಜಗಳ ಮುಖಂಡರು ಭಾಗವಹಿಸಿದ್ದರು. ಜೋಡಿ ಮಹಾರಥೋತ್ಸವದಲ್ಲಿ ಹಾಲಿ ಶಾಸಕ ಜೆ.ಎನ್.ಗಣೇಶ್ ಭಾಗವಹಿಸಿ, ದೇವರ ಕೃಪೆಗೆ ಪಾತ್ರರಾದರು.