ವ್ಯಕ್ತಿತ್ವ ವಿಕಸನ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ - ಡಾ. ಅಜಿತ ಪ್ರಸಾದ

Personality Development Increases Learning Ability - Dr. Ajith Prasad
ವ್ಯಕ್ತಿತ್ವ ವಿಕಸನ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ - ಡಾ. ಅಜಿತ ಪ್ರಸಾದ 
ಧಾರವಾಡ 30: ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೇ, ಸಮಾಜದಲ್ಲಿ ಎತ್ತರಕ್ಕೆ ಬೆಳೆಯುವ ಗುರಿ ಹೊಂದಬೇಕು. ದಿನನಿತ್ಯ ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ಕೊಡಿ. ಪಠ್ಯಕ್ಕೆ ಪೂರಕವಾದ ಪಠ್ಯೇತರ ಚಟುವಟಿಕೆಗಳಲ್ಲಿ ನಿಮ್ಮನ್ನು ತೊಡಿಸಿಕೊಳ್ಳಿ. ನಿಮ್ಮ ಜಾಣತನ, ಸೃಜನಾತ್ಮಕತೆ, ಉತ್ಸಾಹ ಮತ್ತು ನಿಮ್ಮ ಉತ್ತಮ ವ್ಯಕ್ತಿತ್ವದಿಂದ ಮಾತ್ರ ಏನಾದರೂ ಸಾಧಿಸಲು ಸಾಧ್ಯ ವ್ಯಕ್ತಿತ್ವ ವಿಕಸನದಿಂದ ಕಲಿಕಾ ಸಾಮರ್ಥ್ಯವು ಕೂಡ ಹೆಚ್ಚುತ್ತದೆ ಎಂದು ಜೆ.ಎಸ್‌.ಎಸ್ ಮಂಜುನಾಥೇಶ್ವರ ಎಂ.ಸಿ.ಎ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ವ್ಯಕ್ತಿತ್ವ ವಿಕಸನ ಕಾರ್ಯಾಗಾರವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಜೆ.ಎಸ್‌.ಎಸ್ ನ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದರವರು ಮಾತನಾಡುತ್ತಿದ್ದರು. ನಿಮ್ಮ ವಿದ್ಯಾರ್ಜನೆಯ ಮೇಲೆ ನಿಮಗೆ ಪ್ರೀತಿ ಹಾಗೂ ಉತ್ಸಾಹವಿರಲಿ, ಹೊಸತನ್ನು ಕಲಿಯಬೇಕೆಂಬ ಹಂಬಲ ನಿಮಗಿರಲಿ. ಜೆ.ಎಸ್‌.ಎಸ್ ಎಂ.ಸಿ.ಎ ಕಾಲೇಜಿನಲ್ಲಿ ಪಠ್ಯದ ಜೊತೆಗೆ ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿಗಾಗಿ ಏಆಯ್ಘ್‌ಎಂ.ಎಲ್, ಸೈಬರ್ ಸೆಕ್ಯೂರಿಟಿ, ಕ್ಲೌಡ್ ಕಂಪ್ಯೂಟಿಂಗ್, ಮೊಬೈಲ್ ಅಪ್ಲೀಕೇಶನ್ ಡೆವೆಲಪ್‌ಮೆಂಟ್ ಹಾಗೂ ಮುಂತಾದ ವಿಷಯಗಳ ತರಬೇತಿ ನೀಡುವದರ ಜೊತೆಗೆ ಅವರ ಭವಿಷ್ಯ ರೂಪಿಸಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ಉನ್ನತ ಉದ್ಯೋಗಾವಕಾಶಗಳು ದೊರೆಯಲಿವೆ. ಇವು ನಿಮ್ಮ ಸಾಧನೆಯ ಹಾದಿಯನ್ನು ಸುಲಭವಾಗಿಸಲಿವೆ ಎಂದು ಹೇಳಿದರು. 
ಎಂ.ಸಿ.ಎ ಕಾಲೇಜಿನ ನಿರ್ದೇಶಕರಾದ ಡಾ. ಸೂರಜ್ ಜೈನ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಸಲುವಾಗಿ ಸಂಸ್ಥೆಯಲ್ಲಿ ಅತಿಥಿ ಉಪನ್ಯಾಸಗಳು, ಕೌಶಲ್ಯಾಭಿವೃದ್ಧಿ ಮತ್ತು ಜ್ಞಾನ ವಿಕಾಸ ಪೂರಕ ಚಟುವಟಿಕೆಗಳು, ಉದ್ಯೋಗಾಧಾರಿತ ತರಬೇತಿಗಳನ್ನು ಆಯೋಜಿಸುತ್ತಿದ್ದೇವೆ ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಹೇಳಿದರು. 
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಅರಿವು ಸ್ಕಿಲ್ ಡೆವೆಲಪ್‌ಮೆಂಟ್ ಅಕ್ಯಾಡೆಮಿಯ ಸ್ಥಾಪಕರು ಹಾಗೂ ನಿರ್ದೇಶಕರಾದ ಶ್ರೀ ಎಂ. ವಿಶ್ವೇಶ ಅವರು ತಮ್ಮ ಕಾರ್ಯಾಗಾರದಲ್ಲಿ ವ್ಯಕ್ತಿತ್ವ ವಿಕಸನದ ಅಂಶಗಳು, ಬಾಹ್ಯ ಹಾಗೂ ಆಂತರಿಕ ಕೌಶಲ್ಯತೆ, ಸಮಯ ಪರಿಪಾಲನೆ, ಟೀಮ್ ವರ್ಕ್ಸ, ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳುವುದು, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ವಿಚಾರಗಳ ಮೇಲೆ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಬಾಹುಬಲಿ ಚಿವಟೆ ಕಾರ್ಯಕ್ರಮ ನಿರೂಪಿಸಿದರು, ಮಂಜುನಾಥ ಪೂಜಾರ ವಂದಿಸಿದರು. ಆರ್‌. ವಿ.ಚಿಟಗುಪ್ಪಿ ಉಪಸ್ಥಿತರಿದ್ದರು.