ಬೆಂಗಳೂರು 20: ಕಾರ್ಖಾನೆಗಳಲ್ಲಿ ಮಹಿಳಾ ಉದ್ಯೋಗಿಗೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಅವಕಾಶ ಕಲ್ಪಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಮದ್ರಾಸ್ ಹೈಕೋರ್ಟ್ ಆದೇಶದಂತೆ 1948ರ ಕಾರ್ಖಾನೆಗಳ ಕಾಯ್ದೆಯಡಿ ರಾತ್ರಿ 7ರಿಂದ ಬೆಳಗ್ಗೆ 6ರವರೆಗೆ ಕೆಲಸ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಇದು ಕೆಲವು ಷರತ್ತುಗಳಿಗೆ ಒಳಪಟ್ಟಿವೆ.
ಅವುಗಳೆಂದರೆ, ಕಾರ್ಖಾನೆಗಳಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳು ನಡೆಯದಂತೆ ಗಮನ ಹರಿಸುವುದು ಕಂಪನಿ ಮಾಲೀಕರ ಜವಾಬ್ದಾರಿ. ಕಾರ್ಖಾನೆಗಳಲ್ಲಿ ಲೈಂಗಿಕ ದೌರ್ಜನ್ಯ ತಡೆಯಲು ಸೂಕ್ತ ನೀತಿ ನಿಯಮಗಳನ್ನು ಜಾರಿಗೊಳಿಸಬೇಕು. ಮಹಿಳಾ ಸಿಬ್ಬಂದಿಗೆ ಸೂಕ್ತ ಕೆಲಸದ ವಾತಾವರಣ, ಬಿಡುವಿನ ಸಮಯ, ಆರೋಗ್ಯ ಮತ್ತು ಸ್ವಚ್ಛತೆಯನ್ನು ಕಾಪಾಡಬೇಕು. ಮಹಿಳಾ ಉದ್ಯೋಗಿಗಳಿಗೆ ಪ್ರತ್ಯೇಕ ಕ್ಯಾಂಟೀನ್ ಸೌಲಭ್ಯ ಕಲ್ಪಿಸಬೇಕು. ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಮಹಿಳೆಯರಿಗೆ ವಾಹನ ಸೌಕರ್ಯ ಕಲ್ಪಿಸಬೇಕು. ಇದನ್ನು ಮಹಿಳೆಯರೇ ನಿರ್ವಹಿಸಬೇಕು. ಮಹಿಳಾ ಸಿಬ್ಬಂದಿಗೆ ಅಗತ್ಯ ವೈದ್ಯಕೀಯ ಸೌಲಭ್ಯ ಕಲ್ಪಿಸಬೇಕು. ಒಂದು ಪಾಳಿಯಿಂದ ಇನ್ನೊಂದು ಪಾಳಿಗೆ ಬದಲಾವಣೆ ಮಾಡಿದಾಗ ನಡುವಲ್ಲಿ 12 ಗಂಟೆಗಳ ಗಡುವು ಇರಬೇಕು. ಯಾವುದೇ ಮಹಿಳಾ ಸಿಬ್ಬಂದಿಗೆ ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸುವಂತೆ ಒತ್ತಡ ಹೇರುವಂತಿಲ್ಲ ಎಂಬ ಆದೇಶಕ್ಕೆ ಕಾರ್ಮಿಕ ಸಚಿವ ಎಸ್.ಸುರೇಶ್ ಕುಮಾರ್ ಆದೇಶದಲ್ಲಿ ತಿಳಿಸಿದ್ದಾರೆ.