ಆಪ್ ಭ್ರಷ್ಟಾಚಾರದಿಂದ ಜನ ರೋಸಿ ಹೋಗಿದ್ದಾರೆ: ಬಸವರಾಜ ಬೊಮ್ಮಾಯಿ
ಶಿಗ್ಗಾವಿ 08: ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಆಡಳಿತ ವೈಖರಿ, ಭ್ರಷ್ಟಾಚಾರ ನೋಡಿ ಜನ ರೋಸಿ ಹೋಗಿ, ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಆಡಳಿತ ನೋಡಿ ಜನರು ಬಿಜೆಪಿಗೆ ದೊಡ್ಡ ಪ್ರಮಾಣದ ಬೆಂಬಲ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ದೆಹಲಿ ಚುನಾವಣೆ ಫಲಿತಾಂಶದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ದೆಹಲಿಯಲ್ಲಿ ಮೂವತ್ತು ವರ್ಷದ ನಂತರ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಅಣ್ಣಾ ಹಜಾರೆ ನೇತೃತ್ವದ ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಬೆಂಬಲಿಸಿ ದೆಹಲಿ ಜನರು ಆಪ್ ಗೆ ಬೆಂಬಲಿಸಿದ್ದರು. ಆದರೆ ಆಪ್ ಪ್ರತಿಯೊಂದರಲ್ಲೂ ಸುಳ್ಳು ಹೇಳುವುದು, ಹಲವಾರು ಸಚಿವರು ಭ್ರಷ್ಟಾಚಾರದಲ್ಲಿ ತೊಡಗಿದ್ದು, ತಾವು ಮಾಡದಿರುವ ಕೆಲಸಕ್ಕೆ ಬೇರೆಯವರನ್ನು ದೂಷಿಸುತ್ತಿದ್ದರು. ರಸ್ತೆ, ಕುಡಿಯುವ ನೀರು ಕೊಡಲು ಆಗಿಲ್ಲ. ಆಯುಷ್ಮಾನ್ ಯೋಜನೆ ಜಾರಿಗೊಳಿಸದಿರುವುದು ಬಡವರಿಗೆ ಬೇಸರ ತರಿಸಿದೆ ಎಂದು ಹೇಳಿದರು.
ಕಾಂಗ್ರೆಸ್ ಬರೇ ಘೊಷಣೆ ಮೂಲಕ ಅಧಿಕಾರ ನಡೆಸಲು ಸಾಧ್ಯವಿಲ್ಲ. ಈಗ 21 ಶತಮಾನದಲ್ಲಿ ಯುವಕರು ಎಲ್ಲವನ್ನೂ ಗಮನಿಸುತ್ತಾರೆ. ಕಾಂಗ್ರೆಸ್ ಕೇವಲ ಘೋಷಣೆ ಮಾಡುವುದರಿಂದ ಜನರ ಮನಸ್ಸು ಗೆಲ್ಲಲು ಸಾಧ್ಯವಿಲ್ಲ. ಕಾಂಗ್ರೆಸ್ ಸಾಮಾನ್ಯರ ಭಾವನೆ ಅರ್ಥ ಮಾಡಿಕೊಳ್ಳಬೇಕು. ದೆಹಲಿ ಒಂದು ನಗರದ ರಾಜ್ಯ, ಹೊರ ವಲಯದಲ್ಲಿರುವ ರೈತರು, ಹರಿಯಾಣದ ಜಾಟರು, ಪಂಜಾಬಿನ ಜನರು, ಉತ್ತರ ಪ್ರದೇಶ, ಬಿಹಾರದಿಂದ ಬಂದಿರುವ ದುಡಿಯುವ ವರ್ಗ, ಹಲವಾರು ಅಲ್ಪ ಸಂಖ್ಯಾತ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿದೆ. ರಾಷ್ಟ್ರೀಯತೆ ನಂಬಿರುವ ಅಲ್ಪ ಸಂಖ್ಯಾತರು ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ ಎಂದು ಹೇಳಿದರು.
ಈ ಚುನಾವಣೆಯ ಒಟ್ಟು ಪರಿಣಾಮ ಹರಿಯಾಣ ಮಹಾರಾಷ್ಟ್ರ, ದೆಹಲಿ ಚುನಾವಣೆ ಫಲಿತಾಂಶದ ನಂತರ ಬಿಜೆಪಿಯನ್ನು ಶಕ್ತಿಯುತವಾಗಿ ಮಾಡಿರುವುದು, ಇಂಡಿ ಒಕ್ಕೂಟದಲ್ಲಿ ಇನ್ನಷ್ಟು ಗೊಂದಲ ಸೃಷ್ಟಿಯಾಗಲಿದೆ. ಆಪ್ ನವರು ತಮ್ಮನ್ನು ಸೋಲಿಸಲು ಕಾಂಗ್ರೆಸ್ ಪ್ರಯತ್ನ ಪಟ್ಟಿತ್ತು ಅಂತ ಮಾತನಾಡುತ್ತಿದ್ದಾರೆ. ಇದನ್ನು ನೋಡಿದರೆ ಇಂಡಿ ಒಕ್ಕೂಟದಲ್ಲಿ ಇನ್ನಷ್ಟು ಗೊಂದಲ ಸೃಷ್ಟಿಯಾಗುತ್ತದೆ ಎಂದು ಹೇಳಿದರು.