ಶಿರುಗುಪ್ಪಿಯಲ್ಲಿ ಶಾಂತಿ ಪಾಲನೆ ಮತ್ತು ಎಸ್‌ಸಿ-ಎಸ್‌ಟಿ ಕುಂದುಕೊರತೆ ಸಭೆ
ಕಾಗವಾಡ, 07; ಹಿಂದೂ ಮತ್ತು ಮುಸ್ಲಿಂ ಬಾಂಧವರು ಸೌಹಾರ್ದತೆಯಿಂದ ಮುಂಬರುವ ರಂಜಾನ್ ಹಾಗೂ ಹೋಳಿ ಹಬ್ಬವನ್ನು ಶಾಂತ ರೀತಿಯಿಂದ ಆಚರಿಸಬೇಕು. ಎಲ್ಲರೂ ಕಾನೂನು ಸುವ್ಯವ್ಯಸ್ಥೆಗೆ ಧಕ್ಕೆ ಬಾರದಂತೆ ನಡೆದು ಕೊಳ್ಳಬೇಕೆಂದು ಬೆಳಗಾವಿ ಜಿಲ್ಲಾಧಿಕಾರಿ ಮಹಮ್ಮದ್ ರೋಷನ್ ಹೇಳಿದ್ದಾರೆ.
ಅವರು ಶುಕ್ರವಾರ ದಿ. 07 ರಂದು ತಾಲೂಕಿನ ಶಿರುಗುಪ್ಪಿ ಗ್ರಾಮ ಪಂಚಾಯತಿ ಸಭಾಭವನದಲ್ಲಿ ನಡೆದ ಕಾಗವಾಡ ತಾಲೂಕ ಮಟ್ಟದ ಶಾಂತಿಪಾಲನೆ ಸಭೆ ಮತ್ತು ಎಸ್‌ಸಿ/ಎಸ್‌ಟಿ ಸಮುದಾಯದ ಕುಂದು ಕೊರತೆ ಸಭೆಯನ್ನು ಉದ್ದೇಶಿಸಿ, ಮಾತನಾಡುತ್ತಿದ್ದರು. ಕಾಗವಾಡ ತಾಲೂಕಿನಲ್ಲಿ ಮೊದಲಿನಿಂದಲೂ ಹಿಂದೂ-ಮುಸ್ಲಿಂ ಬಾಂಧವರಲ್ಲಿ ಶಾಂತಿ ಸೌಹಾರ್ದತೆ ನೆಲೆಸಿದ್ದು, ಸಂತಸದ ವಿಷಯವಾಗಿದೆ. ಮುಂದೆಯೂ ಇದೇ ರೀತಿ ಸೌಹಾರ್ದತೆಯಿಂದ ಹಬ್ಬಗಳನ್ನು ಆಚರಿಸಿ, ಎಂದು ಸೂಚಿಸಿದರು. ಎಸ್‌ಪಿ ಡಾ. ಭೀಮಾಶಂಕರ ಗುಳೇದ ಮಾತನಾಡಿ, ಹೋಳಿ ಹಬ್ಬದ ಸಂದರ್ಭದಲ್ಲಿ ಕಾಮಣ್ಣನ ದಹನದ ವೇಳೆ ಚಿಕ್ಕ ಮಕ್ಕಳ ಬಗ್ಗೆ ಜಾಗ್ರತೆ ಇರಲಿ. ಬಣ್ಣ ಆಡುವಾಗ ನೈಸರ್ಗಿಕ ಬಣ್ಣದ ಉಪಯೋಗ ಮಾಡಿ, ಕಣ್ಣುಗಳ ಬಗ್ಗೆ ಎಚ್ಚರಿಕೆ ವಹಿಸಿರಿ. ತಾಲೂಕಿನಲ್ಲಿ ಸೌಹಾರ್ದತೆ ಮನೆ ಮಾಡಿದ್ದು, ಇಲ್ಲಿಯ ವರೆಗೆ ಯಾವುದೇ ಅಹಿತಕರ ಘಟನೆಗಳು ಸಂಭವಿಸಿಲ್ಲ. ಮುಂದೆಯೂ ಇದೇ ರೀತಿ ಎಲ್ಲಾ ಹಬ್ಬ ಹರಿದಿನಗಳನ್ನು ಒಟ್ಟಿಗೆ ಸೌಹಾರ್ದತೆಯಿಂದ ಆಚರಿಸಿ, ಎಂದು ಕರೆ ನೀಡಿದರು. ದಲಿತ ಮುಖಂಡ ಸಂಜಯ ತಳವಳಕರ ಮಾತನಾಡಿ, ಈಗ ಕರೆದಿರುವ ಶಾಂತಿಪಾಲನ ಸಭೆಯಲ್ಲಿ ಎಸ್‌ಸಿ ಸಮುದಾಯದ ಕುಂದು ಕೊರತೆಗಳ ಕುರಿತು ಚರ್ಚಿಸುವುದು ಬೇಡ. ಅದಕ್ಕಾಗಿ ಮುಂದೊಂದು ದಿನ ಪ್ರತ್ಯೇಕ ಸಭೆ ನಡೆಸಿ ಎಂದು ಸಲಹೆ ನೀಡಿದರು. ಅದಕ್ಕೆ ಅಧಿಕಾರಿಗಳು ಒಪ್ಪಿಗೆ ಸೂಚಿಸಿ, ಮುಂದಿನ ದಿನಗಳಲ್ಲಿ ಸಮುದಾಯದವರ ಕುಂದು ಕೊರತೆ ಪಾಲನೆ ಸಭೆಯನ್ನು ಪ್ರತ್ಯೇಕವಾಗಿ ಕರೆಯಲಾಗುವುದು ಎಂದು ತಿಳಿಸಿದರು. ಸಭೆಯಲ್ಲಿಅನೇಕ ಮುಖಂಡರು ತಮ್ಮ ಅನಿಸಿಕೆ ಹಂಚಿಕೊಂಡರು. ಈ ಸಮಯದಲ್ಲಿ ತಹಶೀಲ್ದಾರ ರಾಜೇಶ ಬುರ್ಲಿ, ಡಿವೈಎಸ್ಪಿ ಪ್ರಶಾಂತ ಮುನ್ನೋಳ್ಳಿ, ಸಿಪಿಐ ಸಂತೋಶ ಹಳ್ಳೂರ, ಶಿರಗುಪ್ಪಿ ಗ್ರಾ.ಪಂ. ಅಧ್ಯಕ್ಷೆ ಶೋಭಾ ಗದಾಳೆ, ಉಪಾಧ್ಯಕ್ಷ ರಾಮಗೌಡಾ ಪಾಟೀಲ, ಅಬಕಾರಿ ಅಧಿಕಾರಿ ಮಹಾಂತೇಶ ಬಂಡಗಾರ, ಕಾಗವಾಡ ಪಿಎಸ್‌ಐ (ಕ್ರೈಮ್) ಬಸನಗೌಡಾ ಬಿರಾದರ, ಅಣ್ಣಾಸಾಬ ಕೋರೆ, ಎಸ್.ಡಿ. ಮುಲ್ಲಾ, ಪಿಡಿಓ ಶಿಲ್ಪಾ ನಾಯಿಕವಾಡಿ, ಗ್ರಾಮಾಡಳಿತಾಧಿಕಾರಿ ಸುನೀಲ ಕಾಂಬಳೆ, ಮುಖಂಡರಾದ ವಿಜಯ ಅಕಿವಾಟೆ, ಈರಗೌಡಾ ಪಾಟೀಲ, ಈಶ್ವರ ಕಾಂಬಳೆ, ಸಚೀನ ಕಾಂಬಳೆ, ರಮೇಶ ಕಾಂಬಳೆ, ಗೌತಮ ಜತ್ರಾಟೆ, ರವಿ ಕುರಣೆ, ಇಕಬಾಲ ಕನವಾಡೆ, ಮಸ್ತಾನ ಕನವಾಡೆ, ರಾಜು ಪವಾರ ಸೇರಿದಂತೆ ತಾಲೂಕಿನ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ವರ್ಗದವರು, ತಾಲೂಕಿನ ದಲಿತ ಮುಖಂಡರು, ಹಿಂದೂ-ಮುಸ್ಲಿಂ ಬಾಂಧವರು ಮತ್ತು ತಾಲೂಕಿನ ಎಲ್ಲ ಗ್ರಾಮಗಳ ಗ್ರಾಮಸ್ಥರು ಉಪಸ್ಥಿತರಿದ್ದರು.