ಆಧ್ಯಾತ್ಮಿಕತೆಯಿಂದ ಬದುಕಿಗೆ ನೆಮ್ಮದಿ ಪ್ರಾಪ್ತಿ: ಡಾ.ಪ್ರಭುಗೌಡ

Peace of mind through spirituality: Dr. Prabhu Gowda

ಆಧ್ಯಾತ್ಮಿಕತೆಯಿಂದ ಬದುಕಿಗೆ ನೆಮ್ಮದಿ ಪ್ರಾಪ್ತಿ: ಡಾ.ಪ್ರಭುಗೌಡ  

ತಾಳಿಕೋಟಿ, 12; ಇಂದಿನ ಆಧುನಿಕ ವಿಜ್ಞಾನ ಹಾಗೂ ತಂತ್ರಜ್ಞಾನದ ಯುಗದಲ್ಲಿ ಮನುಷ್ಯ ಒತ್ತಡದ ಬದುಕಿನಿಂದಾಗಿ ಆರೋಗ್ಯ ಹಾಗೂ ಮಾನಸಿಕ ನೆಮ್ಮದಿ ಗಳೆರಡನ್ನೂ ಕಳೆದುಕೊಂಡಿದ್ದಾನೆ, ಆರೋಗ್ಯವಂತ ದೇಹದಲ್ಲಿ ಮಾತ್ರ ಸದ್ ವಿಚಾರಗಳು ನೆಲೆಸಲು ಸಾಧ್ಯ ಆದ್ದರಿಂದ ನಾವೆಲ್ಲರೂ ಮಾನಸಿಕ ನೆಮ್ಮದಿಗಳಿಸಲು ಇಂತಹ ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಅಗತ್ಯವಾಗಿದೆ ಎಂದು ಖ್ಯಾತ ನೇತ್ರ ತಜ್ಞ,ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಪ್ರಭುಗೌಡ ಲಿಂಗದಳ್ಳಿ ಹೇಳಿದರು.  

    ತಾಲೂಕಿನ ನಾವದಗಿ ಗ್ರಾಮದ ಶ್ರೀಮದ್ ಉಜ್ಜಯಿನಿ ಸದ್ಧರ್ಮ ಪೀಠದ ಶಾಖಾ ಮಠ ರಾಜಗುರು ಶ್ರೀ ಪರ್ವತೇಶ್ವರ ಬ್ರಹ್ಮನ್ಮ ಠದಲ್ಲಿ ರಂಭಾಪುರಿ ಹಾಗೂ ಕೇದಾರ ಜಗದ್ಗುರುಗಳ ಅಡ್ಡ ಪಲ್ಲಕ್ಕಿ ಮಹೋತ್ಸವ ಹಾಗೂ ಬ್ರಹನ್ಮಠದ ಪರಮ ಪೂಜ್ಯ ಶ್ರೀ ಷ.ಬ್ರ.ರಾಜಗುರು ರಾಜೇಂದ್ರ ಒಡೆಯರ್ ಶಿವಾಚಾರ್ಯರ ಗುರು ಪಟ್ಟಾಧಿಕಾರದ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡ ಮಹಾಶಿವ ಶರಣೆ ಹೇಮರೆಡ್ಡಿ ಮಲ್ಲಮ್ಮನ ಪುರಾಣ ಆರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.  

    ದೇವರ ಹಿಪ್ಪರಗಿಯ ಪೂಜ್ಯಶ್ರೀ ಶಿವಯೋಗಿ ಶಿವಾಚಾರ್ಯರು ಹಾಗೂ ಮನಗೂಳಿಯ ಪೂಜ್ಯ ಶ್ರೀಅಭಿನವ ಸಂಗನಬಸವ ಶಿವಾಚಾರ್ಯರು ಸಮ್ಮುಖ ವಹಿಸಿ ಆಶೀರ್ವಚನ ನೀಡಿದರು.ಸಮಾರಂಭದ ಸಾನಿಧ್ಯ ವಹಿಸಿದ ಕೊಡೆಕಲ್ಲ ದುರದುಂಡೇಶ್ವರ ವಿರಕ್ತಮಠದ ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳು ತಮ್ಮ ಆಶೀರ್ವಚನದಲ್ಲಿ ನಾವದಗಿಯ ಪೂಜ್ಯರು ಈ ಭಾಗದ ಭಕ್ತರನ್ನು ಸಂಸ್ಕರಿಸಲು ಸಾಕಷ್ಟು ಧರ್ಮ ಸೇವೆಯನ್ನು ಮಾಡುತ್ತಿದ್ದಾರೆ, ಕಳೆದ ಬಾರಿ ನೀವೆಲ್ಲರೂ ಸೇರಿ ಎಂದೂ ಮರೆಯದಂತಹ ಕಾರ್ಯಕ್ರಮವನ್ನು ಮಾಡಿ ತೋರಿಸಿದ್ದೀರಿ ಈ ವರ್ಷವೂ ಸಹ ಅಷ್ಟೇ ಅಭಿಮಾನ ಹಾಗೂ ಉತ್ಸಾಹದೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಪ್ರಯತ್ನಿಸಿ ಈ ಕಾರ್ಯಕ್ರಮದಲ್ಲಿ ಇಬ್ಬರು ಜಗದ್ಗುರುಗಳು ಆಗಮಿಸುತ್ತಿದ್ದಾರೆ ಎಂದರು.  

     ಶ್ರೀ ಮಡಿವಾಳೇಶ್ವರ ಹಿರೇಮಠ ಸಾಸನೂರ-ತುಂಬಗಿಯ ಪೂಜ್ಯ ಶ್ರೀ ಮಹಾಂತಲಿಂಗ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸಿದ್ದರು. ಜ್ಯೋತಿಷ್ಯ ರತ್ನ ಪರಮಪೂಜ್ಯ ಶ್ರೀ ರಾಮಲಿಂಗಯ್ಯ ಮಹಾಸ್ವಾಮಿಗಳು ನೇತೃತ್ವ ವಹಿಸಿದ್ದರು. ಶ್ರೀ ಷ.ಬ್ರ.ರಾಜಗುರು ರಾಜೇಂದ್ರ ಒಡೆಯರ ಶಿವಾಚಾರ್ಯರು ಗೌರವ ಉಪಸ್ಥಿತಿ ವಹಿಸಿದ್ದರು. ಪ್ರವಚನಕಾರ ವೇ.ಮೂ.ಬಸಯ್ಯ ಸ್ವಾಮಿಗಳು ಸೋಮೇಶ್ವರ ಮಠ ಯಾಳಗಿ,ಸಾಹಿತಿ ಶಿಕ್ಷಕ ಬಸವರಾಜ್ ಗೊರಜಿ, ಗಾನ ಕೋಗಿಲೆ ವೀರೇಶ ಕೆಂಭಾವಿ,ತಬಲಾವಾದಕ ಪ್ರವೀಣ ಪತ್ತಾರ ಗ್ರಾಮದ ಗಣ್ಯರು ಹಿರಿಯರು ಹಾಗೂ ಶ್ರೀಮಠದ ಅಪಾರ ಭಕ್ತರು ಇದ್ದರು.