ಕ್ಷೇತ್ರದ ಕುರಿತು ಅದಿವೇಶನದಲ್ಲಿ ಪಠಾಣ ಅವರು ತಪ್ಪು ಮಾಹಿತಿ ನೀಡಿದ್ದಾರೆ : ಪಾಟೀಲ

Pathana has given wrong information about the constituency: Patil

ಕ್ಷೇತ್ರದ ಕುರಿತು ಅದಿವೇಶನದಲ್ಲಿ ಪಠಾಣ ಅವರು  ತಪ್ಪು ಮಾಹಿತಿ ನೀಡಿದ್ದಾರೆ : ಪಾಟೀಲ 

ಶಿಗ್ಗಾವಿ  18: ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭಾ ಅಧಿವೇಶನದಲ್ಲಿ ಮಂಗಳವಾರ ಕ್ಷೇತ್ರದ ಶಾಸಕ ಯಾಸಿರಖಾನ ಪಠಾಣ ಅವರು ಕ್ಷೇತ್ರದ ಕುರಿತು ತಪ್ಪು ಮಾಹಿತಿ ನೀಡಿದ್ದಾರೆ ಅಧಿವೇಶನದಲ್ಲಿ ನೀಡಿರುವ ಅವರು ಹೇಳಿಕೆಗಳು ಖಂಡನೀಯವಾಗಿದ್ದು, ಶಾಸಕರು ತಮ್ಮ ಮಾತನ್ನು ಹಿಂಪಡೆಯಬೇಕೆಂದು ಶಿಗ್ಗಾವಿ ಪುರಸಭೆ ಅಧ್ಯಕ್ಷ ಸಿದ್ಧಾರ್ಥಗೌಡ ಪಾಟೀಲ ಅವರ ನೇತೃತ್ವದಲ್ಲಿ ಪುರಸಭೆ ಸದಸ್ಯರು ಪತ್ರಿಕಾಗೋಷ್ಠಿ ನಡೆಸಿ ಖಂಡಿಸಿದರು.  

 ಪಟ್ಟಣದ ಪುರಸಭೆಯಲ್ಲಿ ಅಧ್ಯಕ್ಷ ಸಿದ್ಧಾರ್ಥಗೌಡ ಪಾಟೀಲ ಹಾಗೂ ಮಾಜಿ ಅಧ್ಯಕ್ಷರು ಹಾಗೂ ಸದಸ್ಯರು ಜಂಟಿಯಾಗಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಕ್ಷೇತ್ರದ ಪ್ರಮುಖ ಮೂರು ಪಟ್ಟಣಗಳಾದ ಶಿಗ್ಗಾವಿ, ಬಂಕಾಪುರ ಮತ್ತು ಸವಣೂರ ಪಟ್ಟಣಗಳಿಗೆ ನೀರಿನ ಸಮಸ್ಯೆಯಿದ್ದು, 15 ದಿನಗಳಿಗೊಮ್ಮೆ ಪುರಸಭೆ ಮೂಲಕ ಪಟ್ಟಣದ ಜನತೆಗೆ ನೀರನ್ನು ಒದಗಿಸಲಾಗುತ್ತಿದೆ ಎಂದು ಹೇಳುವ ಮೂಲಕ ಸದನಕ್ಕೆ ತಪ್ಪು ಮಾಹಿತಿಯನ್ನು ನೀಡಿದ್ದಾರೆ. ಶಾಸಕರು ವಾಸ್ತವದ ಅರಿವಿಲ್ಲದೆ ಸದನಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಶಿಗ್ಗಾವಿ ಪಟ್ಟಣದ ಜನತೆಗೆ ನಾಗನೂರು ಕೆರೆಯ ಮೂಲಕ ಪ್ರತಿನಿತ್ಯವೂ ಈಗ ಐದು ದಿನಗಳಿಗೊಮ್ಮೆ ನೀರನ್ನು ಪೂರೈಸಲಾಗುತ್ತಿದೆ. ಶಾಸಕರು ಹೇಳಿಕೆ ಸತ್ಯಕ್ಕೆ ದೂರವಾದ ಮಾತು, ಅವರ ಹೇಳಿಕೆ ಖಂಡನೀಯ. ಅಧಿವೇಶನದಲ್ಲಿ ಮಾತನಾಡುವ ಮುನ್ನ ವಾಸ್ತವವನ್ನು ತಿಳಿದುಕೊಂಡು ಅಧಿವೇಶನಕ್ಕೆ ಮಾಹಿತಿ ಕೂಡಬೇಕು ಎಂದರು.ಬಸವರಾಜ ಬೊಮ್ಮಾಯಿ ಅವರು ತಮ್ಮ ಆಡಳಿತಾವಧಿಯಲ್ಲಿ ಮೂರು ಪಟ್ಟಣಗಳ ಶಾಶ್ವತ ನೀರಿನ ಸಮಸ್ಯೆ ಹೋಗಲಾಡಿಸಲು ಶಿಗ್ಗಾವಿ ಬಂಕಾಪುರ ಪಟ್ಟಣಗಳಿಗೆ ವರದಾ ಶಾಶ್ವತ ಕುಡಿಯುವ ನೀರಿನ ಯೋಜನೆ ಮೂಲಕ ಪ್ರತಿನಿತ್ಯ ವರದಾ ನದಿಯಿಂದ ಜಾಕವೆಲ್ ಮೂಲಕ 216 ಎಕರೆ ವಿಸ್ತೀರ್ಣದ 1.68.498 ಮಿಲಿ ಲೀಟರ್ ನೀರಿನ ಸಂಗ್ರಹಣೆಯ ಸಾಮರ್ಥ್ಯವಿರುವ ನಾಗನೂರು ಕೆರೆಗೆ 65.35 ಕೋಟಿ ಅನುದಾನದ ಮೂಲಕ ವರದಾ ಶಾಶ್ವತ ನೀರಿನ ಯೋಜನೆ ಮೂಲಕ ಪಟ್ಟಣದಲ್ಲಿ ಉದ್ಭವಿಸಬಹುದಾದ ನೀರನ್ನು ಸಮಸ್ಯೆಯನ್ನು ಹೋಗಲಾಡಿಸಿದ್ದಾರೆ. ಬಸವರಾಜ ಬೊಮ್ಮಾಯಿ ಅವರ ಶ್ರಮದಿಂದ 4 ಅಥವಾ 5 ದಿನಗಳಿಗೊಮ್ಮೆ ಪಟ್ಟಣದ ಪ್ರತಿಯೊಂದು ವಾರ್ಡಿಗೂ ಪುರಸಭೆ ಮೂಲಕ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಶಾಸಕ ಯಾಸಿರಖಾನ ಪಠಾಣ ಅವರು ಸದನಕ್ಕೆ 15 ದಿನಗಳಿಗೊಮ್ಮೆ ನೀರನ್ನು ಬಿಡಲಾಗುತ್ತಿದೆ ಇಲ್ಲಿ ಗಂಭೀರ ನೀರಿನ ಸಮಸ್ಯೆ ಇದೆ ಎಂದು ತಪ್ಪು ಮಾಹಿತಿಯನ್ನು ನೀಡಿತ್ತಿರುವುದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ.  

    ಪಠಾಣ ಅವರು ಉಪ ಚುನಾವಣೆಯ ಗುಂಗಿನಿಂದ ಹೊರ ಬಂದು ಕ್ಷೇತ್ರದ ಮತ್ತು ಪಟ್ಟಣಗಳ ಸಮಸ್ಯೆ ಕಂಡು ಮಾತನಾಡಬೇಕು. ರಾಜಕಾರಣ ಕೇವಲ ಚುನಾವಣೆಯಲ್ಲಿ ಮಾತ್ರ, ಸೋಲು ಗೆಲುವು ಸಹಜ ಚುನಾವಣೆ ಮುಗಿದ ಮೇಲೆ ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸುವ ನಿಟ್ಟಿನಲ್ಲಿ ಕೆಲಸಗಳನ್ನು ಮಾಡಬೇಕಾಗುತ್ತದೆ. ಪಟ್ಟಣದ ಅಭಿವೃದ್ಧಿಗೆ ಕುರಿತಂತೆ ಪುರಸಭೆಯ ಆಡಳಿತ ಮಂಡಳಿ ಶಾಸಕರೊಂದಿಗೆ ಸದಾ ಬೆಂಬಲವಾಗಿ ನಿಲ್ಲುತ್ತದೆ. ಹೊಸ ಹೊಸ ಯೋಜನೆಗಳಿಗೆ ನಮ್ಮ ಸಹಕಾರ ಬೆಂಬವಿದೆ. ಸುಮ್ಮನೆ ಯಾರನ್ನೇ ಮೆಚ್ಚಿಸಲು ಮಾತನಾಡುವುದು ಸರಿಯಲ್ಲ ಎಂದರು.   

 ಪತ್ರಿಕಾಗೋಷ್ಠಿಯಲ್ಲಿ ಶಿಗ್ಗಾವಿ ಪುರಸಭೆ ಮಾಜಿ ಅಧ್ಯಕ್ಷರುಗಳಾದ ಶ್ರೀಕಾಂತ ಬುಳ್ಳಕ್ಕನವರ, ಸುಭಾಷ ಚವ್ಹಾಣ, ಪರಶುರಾಮ ಸೊನ್ನದ, ಉಪಾಧ್ಯಕ್ಷೆ ಸುಬೇದಾರ, ಮಂಜುನಾಥ ಬ್ಯಾಹಟ್ಟಿ, ದಯಾನಂದ ಅಕ್ಕಿ ಇದ್ದರು.