ಕ್ರೀಡೆಯಲ್ಲಿ ಭಾಗವಹಿಸಿ ಮಾನಸಿಕ ಒತ್ತಡ ನಿವಾರಿಸಿಕೊಳ್ಳಿ: ಡಾ.ಬಸವರಾಜ ಕೆ.ಎನ್

ಕ್ರೀಡೆಯಲ್ಲಿ ಭಾಗವಹಿಸಿ ಮಾನಸಿಕ ಒತ್ತಡ ನಿವಾರಿಸಿಕೊಳ್ಳಿ: ಡಾ.ಬಸವರಾಜ ಕೆ.ಎನ್ Participate in sports to relieve mental stress: Dr. Basavaraj K.N.

         ಬಳ್ಳಾರಿ 19 : ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಮಾನಸಿಕ ಒತ್ತಡ ನಿವಾರಣೆಯಾಗಲಿದ್ದು, ಪೊಲೀಸ್ ಇಲಾಖೆಯ ಅಧಿಕಾರಿ-ಸಿಬ್ಬಂದಿ ಕ್ರೀಡೆಯಲ್ಲಿ ಭಾಗವಹಿಸಿ ತಮ್ಮ ಶಾರೀರಿಕ ಆರೋಗ್ಯ ಸದೃಢವಾಗಿಟ್ಟುಕೊಳ್ಳಬೇಕು ಎಂದು ಬಳ್ಳಾರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಬಸವರಾಜ ಕೆ.ಎನ್ ಅವರು ಹೇಳಿದರು. 

ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಗರದ ಡಿಎಆರ್ ಪೊಲೀಸ್ ಕವಾಯತು ಮೈದಾನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ನ.19 ರಿಂದ ನ.21 ರ ವರೆಗೆ ನಡೆಯುವ ವಾರ್ಷಿಕ ಕ್ರೀಡಾಕೂಟಗಳಿಗೆ ಪಾರಿವಾಳ ಮತ್ತು ಬಲೂನ್ ಹಾರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. 

ಕ್ರೀಡೆಯಲ್ಲಿ ಸೋಲು-ಗೆಲುವು ಸಾಮಾನ್ಯ. ಕ್ರೀಡೆಯಲ್ಲಿ ಗೆಲ್ಲುವುದಿಕ್ಕಿಂತ ಮುಖ್ಯವಾಗಿ ಭಾಗವಹಿಸುವುದು ಮುಖ್ಯ. ಎದುರಾಳಿಯ ಜೊತೆ ಗೌರವಪೂರ್ವಕವಾಗಿ ನಡೆದುಕೊಳ್ಳಬೇಕು. ಪ್ರತಿಯೊಬ್ಬರೂ ಕ್ರೀಡಾ ಮನೋಭಾವ ಹೊಂದಿ ಕ್ರೀಡೆಯ ನೀತಿ-ನಿಯಮಗಳನ್ನು ಪಾಲಿಸುವ ಮೂಲಕ ತೀರ​‍್ುಗಾರರು ನೀಡುವ ತೀರ​‍್ಿಗೆ ಬದ್ಧರಾಗಿರಬೇಕು ಎಂದರು. 

ಪೊಲೀಸ್ ಇಲಾಖೆಯು ಸಮಾಜದಲ್ಲಿ ನಡೆಯುವ ಎಲ್ಲಾ ಸಮಸ್ಯೆಗಳಿಗೆ ನೇರವಾಗಿ ಮತ್ತು ಪರೋಕ್ಷವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಡೆಯುವ ಸೈಬರ್ ಕ್ರೈಮ್, ಮಾದಕ ವಸ್ತು ಬಳಕೆ, ಅಕ್ರಮ ಸಾಗಾಣಿಕೆ ಇನ್ನಿತರೆ ಹೊಸ-ಹೊಸ ಅಪರಾಧ ಚಟುವಟಿಕೆಗಳ ಸವಾಲುಗಳನ್ನು ಪೊಲೀಸ್ ಇಲಾಖೆಯು ದಿನನಿತ್ಯ ಎದುರಿಸುತ್ತಾರೆ. ಇಂತಹ ಒತ್ತಡದ ಕೆಲಸಗಳ ನಡುವೆ ಮೂರು ದಿನಗಳ ಕಾಲ ನಡೆಯುವ ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ದೈನಂದಿನ ಒತ್ತಡ ಕೆಲಸ ಕಾರ್ಯದಿಂದ ವಿಮುಕ್ತರಾಗಿ ಎಂದು ಕಿವಿಮಾತು ಹೇಳಿದರು. 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ.ವಿ.ಜೆ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾರ್ವಜನಿಕರ ಪ್ರತಿಯೊಂದು ಸಮಸ್ಯೆಗಳಿಗೆ ಪೊಲೀಸ್ ಇಲಾಖೆಯ ಅಗತ್ಯತೆ ಇದ್ದು, ಜನರು ನಮ್ಮ ಮೇಲೆ ಇಟ್ಟಿರುವ ನಂಬಿಕೆಗೆ ಉತ್ತಮ ರೀತಿಯಲ್ಲಿ ಅವರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ನೀಡಬೇಕು ಎಂದರು. 

ಕೆಲಸದ ಒತ್ತಡದ ನಡುವೆ ವರ್ಷಪೂರ್ತಿ ಕಾರ್ಯನಿರ್ವಹಿಸುವ ಪೊಲೀಸ್ ಅಧಿಕಾರಿ, ಸಿಬ್ಬಂದಿ ಮೂರು ದಿನಗಳ ಕಾಲ ನಡೆಯುವ ವಾರ್ಷಿಕ ಕ್ರೀಡೆಯಲ್ಲಿ ಪ್ರತಿಯೊಬ್ಬರೂ ಕ್ರೀಡಾ ಮನೋಭಾವದಿಂದ ಭಾಗವಹಿಸಿ ಒತ್ತಡ ನಿವಾರಿಸಿಕೊಳ್ಳಬಹುದು ಎಂದು ಹೇಳಿದರು. ಕಳೆದ ಬಾರಿಯ ವಾರ್ಷಿಕ ಕ್ರೀಡಾಕೂಟದ ಚಾಂಪಿಯನ್ ಕೃಷ್ಣನಾಯಕ್ ಅವರು ಕ್ರೀಡಾ ಜ್ಯೋತಿಯನ್ನು ಅತಿಥಿಗಳಿಗೆ ನೀಡಿ ಬೆಳಗಿಸಿದರು.