ಮಕ್ಕಳ ಬಗ್ಗೆ ಪಾಲಕರಿಗೆ ಕಾಳಜಿ ಇರಲಿ : ಗುರುರಾಜ ಲೂತೀ

Parents should be concerned about their children: Gururaja Luthi

ಮಕ್ಕಳ ಬಗ್ಗೆ ಪಾಲಕರಿಗೆ ಕಾಳಜಿ ಇರಲಿ : ಗುರುರಾಜ ಲೂತೀ

ಬೀಳಗಿ 07 : ಮಕ್ಕಳೆಂದರೆ ದೇವರ ತೋಟದ ಹೂವುಗಳೆಂದು ಹೇಳಿದರೆ ಸಾಲೋದಿಲ್ಲ ಬದಲಾಗಿ ಆ ಹೂವುಗಳ ರಕ್ಷಣೆಯನ್ನು ಎಷ್ಟು ಜೋಪಾನವಾಗಿ ನೋಡಿಕೊಳ್ಳುತ್ತೇವೆಯೋ ಅಷ್ಟೆಯೇ ಜೋಪಾನವಾಗಿ ನಾವು ಮಕ್ಕಳನ್ನೂ ನೋಡಿಕೊಳ್ಳಬೇಕೆಂದು ಬೀಳಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗುರುರಾಜ ಲೂತಿ ಹೇಳಿದರು. 

        ತಾಲ್ಲೂಕಿನ ಗಿರಿಸಾಗರ ಜಿ.ಜಿ. ಯಳ್ಳಿಗುತ್ತಿ ಪ್ರೌಢಶಾಲೆಯಲ್ಲಿ ಗುರುವಾರ ಹಮ್ಮಿಕೊಂಡ ಎಸ್‌.ಎಸ್‌.ಎಲ್‌.ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಬಾಲಕ-ಪಾಲಕ ಮತ್ತು ಶಿಕ್ಷಕ ವಿಷಯದ ಮೇಲೆ ಉಪನ್ಯಾಸ ನೀಡುತ್ತಾ ಮಾತನಾಡಿದರು. 

    ಇಂದು ಶಾಲೆಗಳಲ್ಲಿ ಶಿಕ್ಷಕರು ಮಕ್ಕಳಿಗೆ ಶಿಕ್ಷಣ ಕೊಟ್ಟು ಅವರಿಗೆ ಉನ್ನತ ಶಿಕ್ಷಣಕ್ಕೆ ಬಡ್ತಿ ನೀಡಿ ತಮ್ಮ ಕರ್ತವ್ಯವನ್ನು ಮಾಡಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ ಆದರೆ ಬಹುಪಾಲು ಪಾಲಕರಾದವರು ಮಕ್ಕಳಿಗೆ ಮೊಬೈಲ್ ಸೇರಿದಂತೆ ಬೇಡಿದೆಲ್ಲ ವಸ್ತುಗಳನ್ನು ಕೊಡಿಸಿ, ಅತಿಯಾದ ಪ್ರೀತಿ ತೋರಿಸಿ ಅವರ ಬಗ್ಗೆ ನಿಷ್ಕಾಳಜಿ ವಹಿಸಿ ಮಕ್ಕಳು ತಪ್ಪು ದಾರಿ ತುಳಿಯುವಂತೆ ಮಾಡುತ್ತಿರುವುದು ವಿಪರ್ಯಾಸ,  ಹೀಗಾಗಿ ನಿರುದ್ಯೋಗಿ ಯುವಕರ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕಕಾರಿ ಸಂಗತಿ. ಪ್ರಯುಕ್ತ ಪಾಲಕರು ಈಗಲೇ ಎಚ್ಚೆತ್ತುಕೊಂಡು ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು ಇಲ್ಲದಿದ್ದರೆ ಭವಿಷ್ಯದಲ್ಲಿ ಸಂಬಂಧಗಳಿಗೆ ಬೆಲೆಯೇ ಇಲ್ಲದಂತಾಗುತ್ತದೆಂದು ಕಳವಳ ವ್ಯಕ್ತಪಡಿಸಿದರು.       ಸಾನಿಧ್ಯವಹಿಸಿದ್ದ ಗಿರಿಸಾಗರ ಕಲ್ಯಾಣ ಹಿರೇಮಠದ ರುದ್ರಮುನಿ ಶಿವಾಚಾರ್ಯ ಮಹಾ ಸ್ವಾಮಿಗಳು, ಶಿಕ್ಷಣದಿಂದ ಮಕ್ಕಳಿಗೆ ವಿದ್ಯೆ, ವಿನಯ, ವಿವೇಕಗಳು ದೊರೆಯುತ್ತವೆ ಅವುಗಳಿಗೆ ಪಾಲಕರಾ ದವರು ತಮ್ಮ ಅನುಭವ, ಅನುಭಾವ ಮತ್ತು ಸಂಸ್ಕಾರಯುತ ಬದುಕಿನ ರೀತಿ ನೀತಿಗಳೊಂದಿಗೆ ಬದುಕುವ ಕಲೆಯನ್ನು ಕಲಿಸಿಕೊಡಬೇಕೆಂದು ಆಶೀರ್ವಚನ  ನೀಡಿದರು. 

        ಸಂಸ್ಥೆಯ ನಿರ್ದೇಶಕರಾದ ಮಲ್ಲಿಕಾರ್ಜುನ ಚಿತ್ರಭಾನುಕೋಟಿ, ಮಲ್ಲಪ್ಪ ಮುತ್ತಲದಿನ್ನಿ, ಮಲ್ಲಪ್ಪ ಹೊನ್ಯಾಳ, ರಾಚಣ್ಣ ಲಕ್ಷ್ಮೇಶ್ವರ, ಮಲ್ಲಪ್ಪ ಬೊಮ್ಮಣ್ಣವರ, ಪುಂಡಲೀಕ್ ಮುತ್ತಗಿ, ಮುದಿಯಪ್ಪ ಪತ್ತಾರ, ಮಲ್ಲಪ್ಪ ಜ್ಯಾಲಿ, ಎಚ್‌.ಬಿ.ಅರಷುಣಗಿ, ಎಸ್‌.ವಿ.ಸಜ್ಜನ, ಕೆ.ಎಲ್‌. ಘಂಟೆಪ್ಪಗೋಳ, ವಿ.ಎಸ್‌.ಚೌಹಾಣ, ಎಸ್‌.ವಿ.ಕುರಿ ಇತರರು ಇದ್ದರು. 

ಎಸ್‌.ಎಸ್‌.ಎಲ್‌.ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಪೂಜ್ಯರು, ಗಣ್ಯರು ಉದ್ಘಾಟಿಸಿದರು.