ಮೈಸೂರು ನಾಟಕೋತ್ಸವದಲ್ಲಿ ಬೆಳಗಾವಿ ರಂಗಸಂಪದವರಿಂದ ‘ಪಂಚಕನ್ಯಾ ಸ್ಮರೇ ನಿತ್ಯಂ’ ನಾಟಕ

ಬೆಳಗಾವಿಯ ರಂಗಸಂಪದ ಸುಮಾರು ನಾಲ್ಕು ದಶಕಗಳಿಂದ ನಾಟಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ. ಬೇರೆ ಬೇರೆ ನಾಟಕ ತಂಡಗಳಿಗೆ ವೇದಿಕೆಯನ್ನು ಒದಗಿಸಿ ಬೇರೆ ರಂಗತಂಡಗಳನ್ನು ಪ್ರೋತ್ಸಾಹಿಸುತ್ತಿರುವ ಇವರ ಕಾರ್ಯವನ್ನು ಮೆಚ್ಚಲೇಬೇಕು. ಪೌರಾಣಿಕ, ಸಾಮಾಜಿಕ, ಹಾಸ್ಯ ಹೀಗೆ ವೈವಿಧ್ಯಮಯ ನಾಟಕಗಳನ್ನು ನೀಡುವುದರ ಮೂಲಕ ಪ್ರೇಕ್ಷಕರ ಮನ ಗೆಲ್ಲುವಲ್ಲಿ ರಂಗಸಂಪದ ಯಶಸ್ವಿಯಾಗಿದೆ.  

ಪ್ರೇಕ್ಷಕರಲ್ಲಿ ಸಮಯದ ಶಿಸ್ತನ್ನು ಮೂಡಿಸಿದ ಶ್ರೇಯಸ್ಸು ರಂಗಸಂಪದ ಅಧ್ಯಕ್ಷರಾದ ಡಾ. ಅರವಿಂದ ಕುಲಕರ್ಣಿಯವರಿಗೆ ಸಲ್ಲುತ್ತದೆ ಎಂದರೆ ತಪ್ಪಾಗಲಾರದು. ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಸೇರಲು ಸಮಯಕ್ಕೆ ಸರಿಯಾಗಿ ಕಾರ್ಯಕ್ರಮ ಪ್ರಾರಂಭವಾಗಬೇಕು. ಸಮಯಕ್ಕೆ ಸರಿಯಾಗಿ ಕಾರ್ಯಕ್ರಮ ಪ್ರಾರಂಭಿಸಬೇಕೆಂದರೆ, ಸರಿಯಾದ ಸಮಯಕ್ಕೆ ಜನರು ಬರಬೇಕು. ಇದೊಂದು ತರಹದ ಹುಚ್ಷು ಬಿಡದೇ ಮದುವೆಯಾಗದು ; ಮದುವೆಯಾಗದ ಹೊರತು ಹುಚ್ಚು ಬಿಡದು ಎಂಬಂತಿದೆ. ಸಮಯಕ್ಕೆ ಸರಿಯಾಗಿ ಕಾರ್ಯಕ್ರಮ ಪ್ರಾರಂಭಿಸುವುದು ತುಂಬ ಕಷ್ಡದ ಕೆಲಸ. ಈ ಅಸಾಧ್ಯದ ಕಾರ್ಯವನ್ನು ಡಾ. ಕುಲಕರ್ಣಿಯವರು ಸಾಧ್ಯ ಮಾಡಿ ತೋರಿಸಿದ್ದಾರೆ. ಈಗ ಸರಿಯಾದ ಸಮಯಕ್ಕೆ ತುಂಬಿದ ರಂಗಮಂದಿರದಲ್ಲಿ ನಾಟಕ ಪ್ರದರ್ಶನಗೊಳ್ಳುತ್ತಲಿವೆ.  

ಈಗ ಮುಖ್ಯ ವಿಷಯಕ್ಕೆ ಬರುತ್ತೇನೆ. ರಂಗಸಂಪದ ತಂಡದವರು ಇತ್ತೀಚೆಗೆ ರಂಗಾಯಣ ಮೈಸೂರು ಆಯೋಜಿಸಿದ್ದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದಲ್ಲಿ “ಪಂಚಕನ್ಯಾ ಸ್ಮರೇ ನಿತ್ಯಂ” ನಾಟಕವನ್ನು ದಿ.14 ಡಿಸೆಂಬರ್ ಸಂಜೆ ಏಳು ಗಂಟೆಗೆ ರಂಗಾಯಣದ ಆವರಣದಲ್ಲಿ ಇರುವ ಸಂಪತ್ ರಂಗಮಂದಿರದಲ್ಲಿ ಇನ್ನೂರಕ್ಕು ಹೆಚ್ಚು ಕಲಾರಸಿಕರ ಸಮ್ಮುಖದಲ್ಲಿ ಪ್ರದರ್ಶನಗೊಂಡಿತು.  

ಈಗಾಗಲೇ ಬೆಳಗಾವಿಯ ಪ್ರೇಕ್ಷಕರ ಪ್ರಶಂಸೆಗೆ ಪಾತ್ರವಾಗಿರುವ “ಪಂಚ ಕನ್ಯಾ ಸ್ಮರೇ ನಿತ್ಯಂ”  ನಾಟಕ ಮೈಸೂರಿನ ರಂಗಪ್ರಿಯರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು. ನಾಟಕವನ್ನು ಪೂರ್ತಿ ವೀಕ್ಷಿಸಿದ ರಂಗಾಯಣದ ನಿರ್ದೇಶಕರಾದ ಅಡ್ಯಾಂಡ ಕರಿಯಪ್ಪ ಮತ್ತು ಉಪನಿರ್ದೇಶಕರಾದ  ಶ್ರೀಮತಿ ನಿರ್ಮಲಾ ಮಠಪತಿ ಇವರು ನಾಟಕದ ವಿಷಯ ಮತ್ತು ವಿಭಿನ್ನ ರೀತಿಯ ಪ್ರಸ್ತುತಿಯನ್ನು ತುಂಬ ಹೃದಯದಿಂದ ಕೊಂಡಾಡಿದರು. ನಾಟಕದಲ್ಲಿ ಸಂದರ್ಭಕ್ಕೆ ತಕ್ಕಂತೆ ಬಳಿಸಿದ ಹಿನ್ನೆಲೆ ಸಂಗೀತ ಮತ್ತು ರಾಮ ಕೃಷ್ಣರ ಆಳೆತ್ತರದ ಭಾವಚಿತ್ರಗಳ ಬಗ್ಗೆ ಹೊಗಳಿದರು.  

ಕಲಾವಿದರಿಗೆ ಅಭಿನಂದನೆಗಳ ಪ್ರಶಸ್ತಿ ಪತ್ರಗಳನ್ನು ಮತ್ತು ತಂಡಕ್ಕೆ ಬಹುರೂಪಿ ನಾಟಕೋತ್ಸವದ ಫಲಕವನ್ನು ನೀಡಿ ಸನ್ಮಾನಿಸಿದರು.  ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಮೈಸೂರು ಆಕಾಶವಾಣಿ ಕೇಂದ್ರದ ನಿರ್ದೇಶಕರಾದ ಶ್ರೀಧರ ಹೆಗಡೆಯವರು ನಾಟಕದ ಸುಂದರ ಪ್ರಸ್ತುತಿ ಮತ್ತು ನಾಟಕದಲ್ಲಿರುವ ಭಾರತೀಯ ಸಂಸ್ಕೃತಿಯನ್ನು ಹೇಳುತ್ತ ರಾಮ ಕೃಷ್ಣರ ವೇಷಭೂಷಣ ಮತ್ತು ವಾಸ್ತವಾಂಶವನ್ನು ಹೇಳುತ್ತ ಹೋಗುವ ಸಂಭಾಷಣೆ ಕುರಿತಂತೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.   

ನಾಟಕವನ್ನು ವೀಕ್ಷಿಸಿದ ಪ್ರೇಕ್ಷಕ ವರ್ಗ ಕಲಾವಿದರನ್ನು ಮುಖತಃ ಭೇಟಿಯಾಗಿ ಅವರ  ಅಭಿನಯ, ನಿರ್ದೇಶನ, ಸಂಭಾಷಣೆ,  ಕುರಿತಂತೆ ಅಭಿಮಾನದ ನುಡಿಗಳನ್ನಾದರು.  ಪ್ರಾರಂಭದಿಂದ ಕೊನೆ ವರೆಗೂ ಈ ನಾಟಕ ಪ್ರೇಕ್ಷಕರನ್ನು ಸೆರೆ ಹಿಡಿದು ನಿಲ್ಲಿಸುದುದು ಅದರ ಯಶಸ್ಸಿಗೆ ಸಾಕ್ಷಿಯಾಗಿತ್ತು. 

ಡಾ. ಅರವಿಂದ ಕುಲಕರ್ಣಿಯವರ ಸಂಗೀತ, ರಂಗಪರಿಕರ ಮತ್ತು ನಿರ್ದೇಶನದ “ಪಂಚ ಕನ್ಯಾ ಸ್ಮರೇ ನಿತ್ಯಂ”  ನಾಟಕದಲ್ಲಿ   ಶ್ರೀಮತಿ ಪದ್ಮಾ ಕುಲಕರ್ಣಿ, ಪ್ರಸಾದ ಕಾರಜೋಳ, ವಾಮನ ಮಳಗಿ, ನಿರ್ಮಲಾ ಬಟ್ಟಲ, ಪವಿತ್ರಾ ರೇವಣಕರ, ಯೋಗೇಶ ದೇಶಪಾಂಡೆ ಬೇರೆ ಬೇರೆ ಪಾತ್ರಗಳಲ್ಲಿ ಅಭಿನಯಿಸಿದರು. ಕಲಾವಿದರು ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯವನ್ನೊದಗಿಸಿಕೊಟ್ಟರು. ನಾಟಕೋತ್ಸವದಲ್ಲಿ ಪ್ರದರ್ಶನವಾದ 15 ವಿವಿಧ ಭಾಷೆಯ ನಾಟಕಗಳಲ್ಲಿ ಬೆಳಗಾವಿ ರಂಗಸಂಪದದ “ಪಂಚಕನ್ಯಾ ಸ್ಮರೇ ನಿತ್ಯಂ” ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.  

-0-0-0-