ಭಕ್ತರ ಗಮನ ಸೆಳೆದ ಪಲ್ಲೇದ ಹಬ್ಬ ವಿಶೇಷ ಪೂಜೆ
ಹಾವೇರಿ 23: ಇಲ್ಲಯ ಶಿವಲಿಂಗ ನಗರದಲ್ಲಿರುವ ಶ್ರೀ ಬನಶಂಕರಿದೇವಿಯ 21ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ದೇವಿಗೆ ’ಪಲ್ಲೇದ ಹಬ್ಬ’ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು. ತರಕಾರಿಯಿಂದ ದೇವಿಗೆ ಅಲಂಕಾರ ಮಾಡಿ, ಪೂಜೆ ಸಲ್ಲಿಸಲಾಯಿತು.ಹೀರೇಕಾಯಿ, ಟೊಮ್ಯಾಟೊ, ಈರುಳ್ಳಿ, ಬಿನ್ಸ್, ಮೆಣಸಿನಕಾಯಿ, ಸಾಂಬಾರ ಸೌತೆಕಾಯಿ, ಬಿಟರೂಟ್, ಲಿಂಬೆ ಹಣ್ಣು, ಸೌತೆಕಾಯಿ, ನೆಲ್ಲಿಕಾಯಿ, ಶುಂಠಿ ಸೇರಿದಂತೆ ಕೆಲವು ಬಗೆಯ ಹಸಿ ಸೊಪ್ಪು, ಹೂ, ಬದನೆಕಾಯಿ ಸೇರಿದಂತೆ ವಿವಿಧ ತರಕಾರಿಗಳಿಂದ ದೇವಿಗೆ ಅಲಂಕಾರ ಮಾಡಿ ಅರ್ಚಕರಾದ ಮುಸಂಗಸ್ವಾಮಿ ದೇವಾಂಗಮಠ, ಗುರುನಾಥಸ್ವಾಮಿ ದೇವಾಂಗಮಠ ಪೂಜೆ ಪುನಸ್ಕಾರ ನೆರವೇರಿಸಿದರು.ಈ ಪಲ್ಲೇದ ಹಬ್ಬ ಆಚರಣೆಗೆ ಒಂದು ಇತಿಹಾಸವಿದ್ದು, ನೂರು ವರ್ಷಗಳ ಹಿಂದೆ ಮಳೆ ಇಲ್ಲದೆ ಬರಗಾಲ ಬಂದಾಗ, ಜನ ಊಟಕ್ಕಾಗಿ ಪರದಾಡುತ್ತಿದ್ದರು.
ಆಗ ಋಷಿ ಮುನಿಗಳು ತಪಸ್ಸು ಮಾಡುವ ಮೂಲಕ ದೇವಿಗೆ ಪ್ರಾರ್ಥನೆ ಸಲ್ಲಿಸಿ, ಬರಗಾಲ ಹೋಗಲಾಡಿಸುವಂತೆ ಬೇಡಿ ಕೊಂಡಿದ್ದರಂತೆ. ಆಗ ದೇವಿಯು ತನ್ನ ಮೈಯಿಂದ ತರಕಾರಿ, ಇತರ ಬೆಳೆಗಳು ಬರುವಂತೆ ಮಾಡಿ, ಭಕ್ತರಿಗೆ ನೀಡಿದ್ದಳಂತೆ. ನಂತರ ಭಕ್ತರೆಲ್ಲಾ ಸೇರಿ ಎಲ್ಲಾ ರೀತಿಯ ತರಕಾರಿ ಮಿಕ್ಸ್ ಮಾಡಿ, ದೇವಿಗೆ ನೈವೇದ್ಯ ಮಾಡಿದ್ದಾರೆ. ಅದೇ ಪರಂಪರೆಯನ್ನು ಈಗಲೂ ಮುಂದುವರೆಸಿಕೊಂಡು ಬರಲಾಗುತ್ತಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಸೋಮನಾಥ ಕುದರಿ ತಿಳಿಸಿದರು.