ಅಥಣಿ ತಾಂವಶಿ ಗ್ರಾಮದ ಹೊರ ವಲಯ: ಎಚ್.ಪಿ ಗ್ಯಾಸ್ ಆಕಸ್ಮಿಕವಾಗಿ ಸ್ಪೋಟ: 4 ಎಮ್ಮೆ, 3 ಮೇಕೆ ಆಹುತಿ

ಸಂಬರಗಿ / ನಾಗನೂರ ಪಿ.ಎ 14: ತಾಂವಶಿ ಗ್ರಾಮದ ಹೊರ ವಲಯ ನಾಗನೂರ ಪಿ.ಎ ರಸ್ತೆ ಬದಿಗಿರುವ ತೋಟದ ವಸತಿಯಲ್ಲಿರುವ ಯಲ್ಲ್ಲಪ್ಪ ದುಂಡಪ್ಪ ಉಪ್ಪಾರ ಇವರ ತೋಟದ ವಸತಿ ಮನೆಯಲ್ಲಿ ಇರುವ ಎಚ್.ಪಿ ಗ್ಯಾಸ್ ಆಕಸ್ಮಿಕವಾಗಿ ಸ್ಪೋಟಗೊಂಡು 4 ಎಮ್ಮೆ, 3 ಮೇಕೆ, ಮನೆಯಲ್ಲಿರುವ ಎಲ್ಲಾ ವಸ್ತುಗಳು ಸುಟ್ಟು ಭಸ್ಮವಾಗಿದೆ. ಸುಮಾರು 5 ಲಕ್ಷ ರೂ. ಹಾನಿಯಾಗಿದೆ. ಈ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ.

ಘಟನೆ ಹಿನ್ನಲೆ ಗುರುವಾರ ಬೆಳಿಗ್ಗೆ  11 ಗಂಟೆಗೆ ಅಡಿಗೆ ಮುಗಿಸಿ ತೋಟದ ಕೆಲಸಕ್ಕೆ ಹೋದ ನಂತರ ತಮ್ಮ ವಾಸಿಸುವ ಮನೆಯಲ್ಲಿ ಅಡಿಗೆ ಅನಿಲ ಆಕಸ್ಮಿಕವಾಗಿ ಸ್ಪೋಟಗೊಂಡಿದ್ದು ಭಾರಿ ಅನಾಹುತವಾಗಿದೆ. ಘಟನಾ ಸ್ಥಳಕ್ಕೆ ಅಥಣಿ ಅಗ್ನಿ ಶಾಮಕ ತಂಡ ತೆರಳಿ ಅಗುವ ದೊಡ್ಡ ಅನಾಹುತವನ್ನು ತಡೆಗಟ್ಟಿಸಿದರು. ಯಲ್ಲಪ್ಪ ಅವರ ಸಹೋದರನಾದ ಸದಾಶಿವ ದುಂಡಪ್ಪ ಉಪ್ಪಾರ, ಬೀರಪ್ಪ ದುಂಡಪ್ಪ ಉಪ್ಪಾರ ಮೂವರ ಕುಟುಂಬಕ್ಕೆ ಹಾನಿಯಾಗಿದೆ.

ಘಟನೆಯಲ್ಲಿ ನಗದು 60 ಸಾವಿರ ರೂಪಾಯಿ, ಸುಮಾರಾಗಿ 30 ಗ್ರಾಮ ಬಂಗಾರ, ಜೋಳ, ಗೋಧಿ, ಕಡಲೆ ಇನ್ನಿತರ ವಸ್ತುಗಳು ಸುಟ್ಟು ಭಸ್ಮವಾಗಿವೆ. ಗ್ರಾಮದ ಎಲ್ಲಾ ಜನ ಕೂಡಿಕೊಂಡು ಸಹಾಯ ಮಾಡಿದರು.

ಘಟನಾ ಸ್ಥಳಕ್ಕೆ ಉಪ ತಹಶಿಲ್ದಾರ ಅಮಿತ ಢವಳೇಶ್ವರ, ಅಥಣಿ ಪಿ. ಎಸ್. ಉಸ್ಮಾನ ಅವಟಿ, ಗ್ರಾಮ ಲೆಕ್ಕಾಧಿಕಾರಿ ಎಮ್. ಎಮ್. ಕೋಮರ ಭೇಟಿ ನೀಡಿ ಪರಿಶೀಲನೆ ಮಾಡಿ ಸರಕಾರಕ್ಕೆ ವರದಿ ಸಲ್ಲಿಸಿದರು. ಈ ಕುರಿತು ಅಥಣಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.