ನೋಡೋಕೆ ಮಾತ್ರ ತಾಲೂಕಾ ಪಶು ಆಸ್ಪತ್ರೆ! ಸೌಲಭ್ಯಗಳು ಮಾತ್ರ ಶೂನ್ಯ! ಏನೂ ಇಲ್ಲದ ಆಸ್ಪತ್ರೆ

ಶಶಿಧರ ಶಿರಸಂಗಿ

ಶಿರಹಟ್ಟಿ 05: ಇದು ಒಂದು ತಾಲೂಕಾ ಕೇಂದ್ರ, ತಾಲೂಕಾ ಕೇಂದ್ರದಲ್ಲಿರಬೇಕಾದ ಸೌಲಭ್ಯಗಳು ಈ ಪಶು ಆಸ್ಪತ್ರೆಯಲ್ಲಿಲ್ಲ. ಇದು ತಾಲೂಕಾ ಕೇಂದ್ರವಾಗಿದ್ದರೂ ಕೂಡಾ ತಾಲೂಕ ಪಶು ಆಸ್ಪತ್ರೆಯಲ್ಲಿ ಇರಬೇಕಾದ ಮೂಲ ಭೂತ ಸೌಕರ್ಯಗಳೇ ಇಲ್ಲವಾಗಿ ಈ ಭಾಗದ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ಇಲ್ಲದೇ ನರಳಾಡುವ ಸ್ಥಿತಿ ಬಂದೊದಗಿದೆ. 

ತಾಲೂಕಾ ಕೇಂದ್ರದಲ್ಲಿ ಇರಬೇಕಾದ ಮೂಲಭೂತ ಸೌಕರ್ಯಗಳಾದ ಔಷಧಾಲಯ ಇಲ್ಲ. ಸೂಕ್ತ ಸಿಬ್ಬಂದಿಗಳಿಲ್ಲ. ಅತ್ಯಾಧುನಿಕ ಯಂತ್ರಗಳಿಲ್ಲ, ಸ್ವಚ್ಚತೆಯಿಲ್ಲಗಳಿಲ್ಲದೇ ಹಾಳುಕೊಂಪೆಯಂತೆ ಕಂಡು ಬರುತ್ತಿದೆ.

ತಾಲೂಕ ಕೇಂದ್ರದಲ್ಲಿಲ್ಲ ಔಷಧಾಲಯದ ಡಿಪೋ! ಶಿರಹಟ್ಟಿ ಒಂದು ಅನಾದಿ ಕಾಲದಿಂದಲೂ ತಾಲೂಕಾ ಕೇಂದ್ರವಾಗಿದ್ದರೂ ಇಲ್ಲಿ ಔಷಧಾಲಯದ ಸೌಲಭ್ಯವಿಲ್ಲದೇ ದೂರದ ಲಕ್ಷ್ಮೇಶ್ವರ ಹೋಬಳಿಯಲ್ಲಿ ಔಷಧಾಲಯವಿದ್ದು, ತಾಲೂಕಾ ಕೇಂದ್ರದಲ್ಲಿ ಇರಬೇಕಾದ ಔಷಧಾಲಯದ ಡಿಪೋ ಬೇರೆ ಕಡೆ ಇರುವುದರಿಂದ ಈ ಭಾಗದ ಔಷಧಗಳು ಸೂಕ್ತ ಸಮಯದಲ್ಲಿ ದೊರಕದೇ ಸಾರ್ವಜನಿಕರು ಪಶು ಆಸ್ಪತ್ರೆಗೆ ಮತ್ತು ಸಿಬ್ಬಂದಿಗಳಿಗೆ ಹಿಡಿ ಶಾಪವನ್ನು ಹಾಕಿ ಮರಳುತ್ತಿದ್ದಾರೆ. ಶಿರಹಟ್ಟಿ ತಾಲೂಕಾ ಕೇಂದ್ರದಲ್ಲಿ ಔಷಧಾಲಯದ ಡಿಪೋ ಸ್ಥಾಪಿತವಾಗಬೇಕು. ಈ ಭಾಗದ ಸಾರ್ವಜನಿಕರಿಗೆ ಅನುಕೂಲ ಕಲ್ಪಿತವಾಗಬೇಕು ಎನ್ನವುದು ಜನರ ಅಭಿಪ್ರಾಯವಾಗಿದೆ. 

6 ವರ್ಷಗಳಿಂದ ಸೂಕ್ತ ಸಿಬ್ಬಂದಿಯ ಕೊರತೆಯಿಂದ ನರಳುತ್ತಿರುವ ತಾಲೂಕ ಪಶು ಆಸ್ಪತ್ರೆ! ತಾಲೂಕಿನ ಕಡಕೋಳ, ಯಳವತ್ತಿ, ಶಿಗ್ಲಿ, ಬೆಳ್ಳಟ್ಟಿ, ಬನ್ನಿಕೊಪ್ಪ ಹೆಬ್ಬಾಳ, ಮಾಗಡಿ ಗ್ರಾಮದಗಳಲ್ಲಿರುವ ಪಶು ಚಿಕಿತ್ಸಾಲಗಳಿಗೆ ವೈದ್ಯರು ಇಲ್ಲ. ಜೊತೆಗೆ 6 ವರ್ಷಗಳಿಂದ ಯಾವೊಬ್ಬ ಸಿಬ್ಬಂದಿಗಳಿಲ್ಲದೇ ಸದಾ ಬೀಗ ಹಾಕಿದ ಸ್ಥಿತಿಯಲ್ಲಿಯೇ ಇರುತ್ತವೆ. ಶಿರಹಟ್ಟಿ ಮತ್ತು ಲಕ್ಷ್ಮೇಶ್ವರದಲ್ಲಿನ ಪಶು ಆಸ್ಪತ್ರೆಗಳಲ್ಲಿ 2 ಸಹಾಯಕ ನಿದರ್ೇಶಕ ಹುದ್ದೆ ಖಾಲಿ ಇವೆ. 12 ಜನ ಪಶುವೈದ್ಯಾಧಿಕಾರಿಗಳಲ್ಲಿ ಇಬ್ಬರು ಮಾತ್ರ ಇದ್ದಾರೆ. 12 ಜನ ಪಶುವೈದ್ಯಕೀಯ ಪರೀಕ್ಷಕರಲ್ಲಿ 2 ಜನ ಮಾತ್ರ ಇದ್ದು,4 ಜನ ಪಶು ವೈದ್ಯಕೀಯ ಸಹಾಯಕಲ್ಲಿ 2 ಜನ ಇದ್ದಾರೆ. ತಾಲೂಕ ಆಸ್ಪತ್ರೆಯಲ್ಲಿಯೇ ಕಸಗೂಡಿಸುವವರಿಲ್ಲ. ಇನ್ನು ತಾಲೂಕಿನ ಪಶು ಆಸ್ಪತ್ರೆಗಳಲ್ಲಿ ಸ್ಥಿತಿಯೇನಾಗಿರಬಾರದು ಎನ್ನುವುದು ಶೋಚನೀಯವಾಗಿದೆ. ಆಸ್ಪತ್ರೆ ಸುಚಿತ್ವ ಇಲ್ಲದೇ ಗೊಬ್ಬು ನಾರುತ್ತಿದೆ. ಜನಪ್ರತಿನಿಧಿಗಳ ಗಮನವೂ ಕೂಡಾ ಇದರತ್ತ ಇರದೇ ಇರುವುದಕ್ಕೆ ಮೂಲ ಕಾರಣವಾಗಿದೆ. ಜೊತೆಗೆ ಮೇಲಾಧಿಕಾರಿಗಳ ನಿರ್ಲಕ್ಷವೂ ಕೂಡಾ ಇದೆ.

ಹೈನುಗಾರಿಕೆಗೆ ಹಿನ್ನಡೆ! ಸನ್ 2011 ರಲ್ಲಿ ಜಾನುವಾರು ಗಣತಿ ಪ್ರಕಾರ ತಾಲೂಕಿನಲ್ಲಿ 14267 ದನಗಳು, 9940 ಎಮ್ಮೆಗಳು, 60223 ಕುರಿಗಳು, 17869 ಆಡುಗಳಿದ್ದು ಇವುಗಳ ಆರೋಗ್ಯ  ತಪಾಸಣೆಗೆ ಸಿಬ್ಬಂದಿಗಳ ಕೊರತೆಯಿಂದಾಗಿ ಹೈನುಗಾರಿಕೆ ಮಾಡುವವರೆಲ್ಲ ಸಾಕಷ್ಟು ಕಿಮ್ಮತ್ತಿನ ಆಕಳು ಮತ್ತು ಎಮ್ಮೆಗಳಿಗೆ ಸೂಕ್ತ ಚಿಕಿತ್ಸೆಯ ಕೊರತೆಯಿಂದಾಗಿ ಹೈನುಗಾರಿಕೆಯನ್ನು ಕೈಬಿಟ್ಟು ಬೇರೆ ಉದ್ಯೋಗದಡೆಗೆ ಗಮನ ಹರಿಸುತ್ತಿರುವುದು ಬೇಸರದ ಸಂಗತಿಯಾಗಿದೆ. ಜೊತೆಗೆ ಸರಕಾರ ಕೊಡಮಾಡಿ ಅನುದಾನದ ಸದ್ಭಳಕೆಯಾಗುತ್ತಿಲ್ಲ. ಪೂರೈಕೆ ಮಾಡಿದ ಔಷಧಿ ವಿತರಣೆಗೆ ಸಿಬ್ಬಂದಿಗಳು ಇಲ್ಲದೇ ಹೈನುಗಾರಿಕೆಗೆ ತೊಂದರೆಯಾಗಿದೆ. 

ಈ ಕುರಿತು ಪ್ರಭಾರ ಸಹಾಯಕ ನಿದರ್ೇಶಕ ಡಾ. ನಿಂಗಪ್ಪ ಓಲೇಕಾರ ಪ್ರತಿಕ್ರಿಯಿಸಿ 6 ವರ್ಷಗಳಿಂದ ಅನೇಕ ಬಾರಿ ಜನಪ್ರತಿನಿಧಿಗಳಿಗೆ ಮತ್ತು ಮೇಲಾಧಿಕಾರಿಗಳಿಗೆ ಸಿಬ್ಬಂದಿಯ ಕೊರತೆ ಇರುವುದನ್ನು ಗಮನಕ್ಕೆ ತರಲಾಗಿದೆ. ಆಡಳಿತಾತ್ಮಕವಾಗಿ ಆಗಿರುವ ತೊಂದರೆಯನ್ನು ಕುರಿತು ಲಿಖಿತ ರೂಪದಲ್ಲಿ ತಿಳಿಸಲಾಗಿದೆ. ಜೊತೆಗೆ ಹೈನುಗಾರಿಕೆ ಮತ್ತು ಜಾನುವಾರುಗಳ ಸಾಕಾಣಿಕೆ ಹಿಂದೆಟತೆ ಹಾಕುತ್ತಿರುವುದು ನಿಜ ಸಂಗತಿಯಾಗಿದೆ ಎಂದು ಹೇಳಿದರು.

ಮನೋಜ ಕಪ್ಪತ್ತನವರ ಹೈನುಗಾರಿಕೆ ಮಾಡುತ್ತಿರುವ ರೈತ ಈ ಕುರಿತು ಮಾತನಾಡಿ, ಬ್ಯಾಂಕುಗಳಲ್ಲಿ ಮತ್ತು ಸಹಕಾರಿ ಸಂಘಗಳಲ್ಲಿ ಸಾಲವನ್ನು ಮಾಡಿ ಹೈನುಗಾರಿಕೆಯನ್ನು ಮಾಡುತ್ತಿದ್ದೇವೆ ಕಿಮ್ಮತ್ತಿನ ಆಕಳುಗಳನ್ನು ಸಾಕಲಾಗುತ್ತಿದ್ದು ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರಕದೇ ಇದ್ದರೆ ಆಕಳು ಸಾಯುವ ಸ್ಥಿತಿಗೆ ಬರುತ್ತವೆ. ಅದ್ದರಿಂದ ಮೇಲಾಧಿಕಾರಿಗಳು ಶಿರಹಟ್ಟಿ ತಾಲೂಕಾ ಕೇಂದ್ರದಲ್ಲಿ ಔಷಧಾಲಯದ ಡಿಪೋ ಮತ್ತು ಸಿಬ್ಬಂದಿಗಳನ್ನು ಒದಗಿಸಬೇಕು. ಇಲ್ಲವಾದರರೆ ಹೈನುಗಾರಿಕೆ ಮಾಯವಾಗುವ ಸ್ಥಿತಿ ಬಂದೊದಗಿದೆ.