ಮಾರ್ಚ್ 8 ರಂದು ರಾಷ್ಟ್ರೀಯ ಲೋಕ ಅದಾಲತ್ - ನ್ಯಾ. ಮಹಾಂತೇಶ್ ಎಸ್. ದರಗದ
ಕೊಪ್ಪಳ 23 : ಮಾರ್ಚ್ 18 ರಂದು ಕೊಪ್ಪಳ ಜಿಲ್ಲೆಯಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಳ್ಳಲಾಗುತ್ತಿದ್ದು, ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕೊಪ್ಪಳದ ಮಹಾಂತೇಶ್ ಎಸ್. ದರಗದ ಹೇಳಿದರು.
ಅವರು ಗುರುವಾರ ಮಾರ್ಚ್ 8 ರಂದು ನಡೆಯಲಿರುವ ರಾಷ್ಟ್ರೀಯ ಲೋಕ ಅದಾಲತ್ ಮಾಹಿತಿ ಸಾರ್ವಜನಿಕರಿಗೆ ನೀಡಲು ಕೊಪ್ಪಳ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಛೇರಿ ಸಭಾಂಗಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ಲೋಕ ಅದಾಲತನಲ್ಲಿ ಸಾರ್ವಜನಿಕರು ತಮ್ಮ ಪ್ರಕರಣಗಳನ್ನು ರಾಜಿ ಸಂದಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ. ಇದರಿಂದ ಸಮಯ. ಹಣ ಮತ್ತು ಸಂಬಂಧಗಳು ಹಾಳಾಗದೆ ಸರಿಯಾಗಿ ಜೀವನ ನಡೆಸುವಂತಾಗುತ್ತದೆ. ಕಳೆದ ರಾಷ್ಟ್ರೀಯ ಲೋಕ ಅದಾಲತನಲ್ಲಿ ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಅಧ್ಯಕ್ಷರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಇವರ ವಿಶೇಷ ಮುತುವರ್ಜಿಯಿಂದ 5340 ಪ್ರಕರಣಗಳನ್ನು ಜಿಲ್ಲೆಯಲ್ಲಿ ರಾಜಿ ಸಂದಾನದ ಮೂಲಕ ಇತ್ಯರ್ಥಪಡಿಸಲಾಗಿದೆ.ಜಿಲ್ಲೆಯಾದ್ಯಂತ 32 ಸಾವಿರಕ್ಕಿಂತಲೂ ಹೆಚ್ಚಿನ ಕೇಸಗಳು ಪೆಂಡಿಂಗ್ ಇದ್ದು ಬರುವ ಈ ಲೋಕ ಅದಾಲತನಲ್ಲಿ ಕಳೆದ ಸಲಕ್ಕಿಂತಲೂ ಈ ಬಾರಿ 6 ರಿಂದ 7 ಸಾವಿರ ಪ್ರಕರಣಗಳನ್ನು ಇತ್ಯರ್ಥಪಡಿಸುವ ಗುರಿ ಹೊಂದಲಾಗಿದೆ. ಸುಳ್ಳು ಪ್ರಕರಣಗಳನ್ನು ಹೊರತುಪಡಿಸಿ ಬ್ಯಾಂಕ್ ಸಾಲ. ಪಾರ್ಟಿಷನ್ ಸೂಟ. ಪ್ರಿ ಲಿಟಿಗೇಶನ್ ಕೇಸ. ಕೌಟುಂಬಿಕ ಕಲಹ ಸೇರಿದಂತೆ ಇತರೆ ಹಲವಾರು ಪ್ರಕರಣಗಳನ್ನು ರಾಷ್ಟ್ರೀಯ ಲೋಕ ಅದಾಲತನಲ್ಲಿ ಇತ್ಯರ್ಥಪಡಿಸಲಾಗುತ್ತದೆ ಎಂದು ಹೇಳಿದರು.ರಾಜಿ ಸಂದಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳುವುದರಿಂದ ಇಬ್ಬರ ನಡುವಿನ ಸಂಬಂಧ ಚೆನ್ನಾಗಿ ಇರುತ್ತದೆ ಇಲ್ಲವಾದರೆ ಅದು ಮುಂದೆ ಅವರ ಗ್ರಾಮದಲ್ಲಿಯ ಸಂಬಂದ ಕೂಡ ಹಳಸಿ ಅದು ತಾಲ್ಲೂಕು ಮತ್ತು ಜಿಲ್ಲೆಯಲ್ಲಿ ಇಂಥಹ ವಿಷಮ ಗಾಳಿ ಬೀಸುತ್ತದೆ ಆಂದರೆ ಕೆಟ್ಟ ವಾತಾವರಣ ನಿರ್ಮಾಣ ಆಗುತ್ತದೆ ಹಾಗೆ ಆಗಬಾರದು ಎಂಬ ಉದ್ದೇಶದಿಂದ ಈ ಲೋಕ ಅದಾಲತ ಕಾರ್ಯಕ್ರಮ ಪ್ರತಿ ಮೂರು ತಿಂಗಳಿಗೊಮ್ಮೆ ನಡೆಸಲಾಗುತ್ತದೆ ಎಂದರು.
ಲೋಕ ಅದಾಲತನಲ್ಲಿ ಪ್ರಕರಣಗಳು ಬೇಗ ಇತ್ಯರ್ಥವಾಗುವುದರಿಂದ ಜನರು ಅನಾವಶ್ಯಕವಾಗಿ ಕೋರ್ಟ್ ಅಲೆಯುವದು ತಪ್ಪುತ್ತದೆ. ಅವರ ಖರ್ಚು ಉಳಿಯುತ್ತದೆ ಪರಸ್ಪರ ಸಂಬಂಧಗಳು ಚೆನ್ನಾಗಿ ಇರುತ್ತವೆ. ಸಾರ್ವಜನಿಕರ ಪ್ರಕರಣಗಳನ್ನು ಬೇಗ ಇತ್ಯರ್ಥಪಡಿಸಬೇಕು ಮತ್ತು ಅವರ ಅನುಕೂಲಕ್ಕಾಗಿಯೆ ಇದನ್ನು ಮಾಡಲಾಗಿದ್ದು ಬಹಳಷ್ಟು ಜನರಿಗೆ ಇದರ ಮಾಹಿತಿ ಗೊತ್ತಿಲ್ಲ. ಈ ಕುರಿತು ಮಾಧ್ಯಮಗಳಲ್ಲಿ ಹೆಚ್ಚಿನ ಪ್ರಚಾರ ನೀಡಬೇಕು ಇದಕ್ಕೆ ಸಾರ್ವಜನಿಕ ಸಹಕಾರ ಇರಬೇಕೆಂದು ಹೇಳಿದರು.
ಈ ಪತ್ರಿಕಾಗೋಷ್ಠಿಯಲ್ಲಿ ವಾರ್ತಾ ಇಲಾಖೆಯ ಸಹಾಯಕ ನಿರ್ದೆಶಕರಾದ ಡಾ. ಸುರೇಶ ಜಿ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಛೇರಿಯ ಪ್ರಥಮ ದರ್ಜೆ ಸಹಾಯಕ ಎಂ.ಡಿ ಹನೀಫ್. ಶಿಲ್ಪಾ. ಎಂ.ಡಿ. ಇಸ್ಮಾಯಿಲ್ ಹಾಗೂ ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.